Asianet Suvarna News Asianet Suvarna News

Ranji Trophy: ಮುಂಬೈ ಬಗ್ಗುಬಡಿದು ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ

* 2022ರ ರಣಜಿ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದ ಮಧ್ಯಪ್ರದೇಶ
* ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಗೆದ್ದ ಮಧ್ಯಪ್ರದೇಶ ಕ್ರಿಕೆಟ್ ತಂಡ
* ಮುಂಬೈ ಎದುರು 6 ವಿಕೆಟ್‌ಗಳ ಜಯ ಸಾಧಿಸಿದ ಆದಿತ್ಯ ಶ್ರೀವಾಸ್ತವ್‌

Madhya Pradesh Script History Beat Mumbai by 6 Wickets to Clinch Maiden Ranji Trophy Title kvn
Author
Bengaluru, First Published Jun 26, 2022, 3:31 PM IST

ಬೆಂಗಳೂರು(ಜೂ.26): ಮಧ್ಯಪ್ರದೇಶ ಕ್ರಿಕೆಟ್ ತಂಡವು ಭಾನುವಾರವಾದ ಇಂದು ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. 41 ಬಾರಿಯ ರಣಜಿ ಚಾಂಪಿಯನ್ ಮುಂಬೈ ಎದುರು ಆದಿತ್ಯ ಶ್ರೀವಾಸ್ತವ್‌ ನೇತೃತ್ವದ ಮಧ್ಯಪ್ರದೇಶ ತಂಡವು 6 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2022ನೇ ಸಾಲಿನ ರಣಜಿ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಮುಂಬೈ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಬಾರಿಗೆ ರಣಜಿ ಟ್ರೋಫಿ ಜಯಿಸಿ ಸಂಭ್ರಮಿಸಿದೆ..

ಮಧ್ಯಪ್ರದೇಶ ಕ್ರಿಕೆಟ್ ತಂಡವು ಬರೋಬ್ಬರಿ 23 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. 1998-99ರಲ್ಲಿ ಇದೇ ಮೈದಾನದಲ್ಲಿ ಕರ್ನಾಟಕದೆದುರು ಮಧ್ಯಪ್ರದೇಶ ತಂಡವು 96 ರನ್‌ಗಳ ಅಂತರದ ಸೋಲು ಕಾಣುವ ಮೂಲಕ ಕಪ್‌ ಗೆಲ್ಲುವ ಅವಕಾಶವನ್ನು ಕೈಚೆಲ್ಲಿತ್ತು. ಆಗ ಮಧ್ಯಪ್ರದೇಶ ತಂಡದ ನಾಯಕರಾಗಿದ್ದ ಚಂದ್ರಕಾಂತ್ ಪಂಡಿತ್, ಇದೀಗ ಮಧ್ಯಪ್ರದೇಶ ತಂಡದ ಕೋಚ್ ಆಗಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಆಟಗಾರರು ತಮ್ಮ ಕೋಚ್ ಚಂದ್ರಕಾಂತ್ ಪಂಡಿತ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ಗೆಲ್ಲಲು 108 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಮಧ್ಯಪ್ರದೇಶ ತಂಡಕ್ಕೆ ವಿಕೆಟ್‌ ಕೀಪರ್ ಬ್ಯಾಟರ್‌ ಹಿಮಾಂಶು ಮಂತ್ರಿ 37 ರನ್ ಬಾರಿಸುವ ಮೂಲಕ ಎರಡನೇ ಇನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರರ್ ಎನಿಸಿದರು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಇನಿಂಗ್ಸ್‌ ಮುನ್ನಡೆಗಳಿಸಲು ನೆರವಾಗಿದ್ದ ತಾರಾ ಬ್ಯಾಟರ್ ರಜತ್ ಪಾಟೀದಾರ್ ಅಜೇಯ 30 ರನ್ ಬಾರಿಸುವ ಮೂಲಕ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಇದಕ್ಕೂ ಮೊದಲು 2 ವಿಕೆಟ್ ಕಳೆದುಕೊಂಡು 113 ರನ್‌ಗಳೊಂದಿಗೆ 5ನೇ ದಿನದಾಟ ಆರಂಭಿಸಿದ ಮುಂಬೈ ತಂಡವು ಸುವೇದ್ ಪಾರ್ಕರ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದರು. ಆದರೆ ವೇಗಿ ಗೌರವ್ ಯಾದವ್‌ ಚಾಣಾಕ್ಷ ದಾಳಿ ನಡೆಸುವ ಮೂಲಕ ಅರ್ಮಾನ್ ಜಾಫರ್‌ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಕ್ರೀಸ್‌ಗಿಳಿದ ಸರ್ಫರಾಜ್ ಖಾನ್‌, ಸ್ಪಿನ್ನರ್‌ಗಳನ್ನು ಮನಬಂದಂತೆ ದಂಡಿಸುವ ಮೂಲಕ ಮುಂಬೈ ಕ್ರಿಕೆಟ್ ತಂಡದ ರನ್‌ ವೇಗಕ್ಕೆ ಚುರುಕು ಮುಟ್ಟಿಸಿದರು. ಇನ್ನೊಂದೆಡೆ ಸುವೇದ್ ಪಾರ್ಕರ್ 58 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 51 ರನ್‌ ಬಾರಿಸಿ ಕುಮಾರ್ ಕಾರ್ತಿಕೇಯ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಈ ಬಾರಿರ ರಣಜಿ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸರ್ಫರಾಜ್ ಖಾನ್ 48 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 45 ರನ್ ಬಾರಿಸಿ ಪಾರ್ಥ್ ಸಹಾನಿ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.

Ranji Trophy ಮುಂಬೈ ಎದುರು ರಣಜಿ ಟ್ರೋಫಿ ಗೆಲ್ಲಲು ಮಧ್ಯಪ್ರದೇಶಕ್ಕೆ 108 ರನ್‌ ಗುರಿ..!

ಮಧ್ಯಪ್ರದೇಶ ಕ್ರಿಕೆಟ್ ತಂಡದ ಪರ ವೇಗಿ ಕುಮಾರ ಕಾರ್ತಿಕೇಯ 98 ರನ್‌ ನೀಡಿ 4 ವಿಕೆಟ್ ಪಡೆದರು. ಇನ್ನು ಗೌರವ್ ಯಾದವ್ ಹಾಗೂ ಪಾರ್ಥ್‌ ಸಹಾನಿ ತಲಾ 2 ವಿಕೆಟ್‌ ಪಡೆದರು.

ಹೇಗಿತ್ತು ರಣಜಿ ಫೈನಲ್ ಪಂದ್ಯ: ಮುಂಬೈ ಹಾಗೂ ಮಧ್ಯಪ್ರದೇಶ ತಂಡಗಳ ನಡುವಿನ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡದ ನಾಯಕ ಪೃಥ್ವಿ ಶಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಸರ್ಫರಾಜ್ ಖಾನ್ ಆಕರ್ಷಕ ಶತಕ(134) ಹಾಗೂ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(78) ಸಮಯೋಚಿತ ಅರ್ಧಶತಕದ ನೆರವಿನಿಂದ 374 ರನ್ ಕಲೆಹಾಕಿತ್ತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಮಧ್ಯಪ್ರದೇಶ ತಂಡವು ಆರಂಭಿಕ ಬ್ಯಾಟರ್‌ ಯಶ್ ದುಬೆ(133), ಶುಭಂ ಶರ್ಮಾ(116) ಹಾಗೂ ರಜತ್ ಪಾಟೀದಾರ್(122) ಆಕರ್ಷಕ ಶತಕ ಮತ್ತು ಸಾರಂಶು ಜೈನ್ ಬಾರಿಸಿದ ಚೊಚ್ಚಲ ಅರ್ಧಶತಕದ ನೆರವಿನಿಂದ 536 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನಿಂಗ್ಸ್‌ನಲ್ಲಿ ಮಧ್ಯಪ್ರದೇಶ ತಂಡವು 162 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. ಇನ್ನು ಎರಡನೇ ಇನಿಂಗ್ಸ್‌ ಆರಂಭಿಸಿದ ಮುಂಬೈ ತಂಡವು ಸುವೇದ್ ಪಾರ್ಕರ್(51) ಅರ್ಧಶತಕ ಹಾಗೂ ಪೃಥ್ವಿ ಶಾ(44) ಮತ್ತು ಸರ್ಫರಾಜ್ ಖಾನ್(45) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 269 ರನ್‌ ಕಲೆಹಾಕುವ ಮೂಲಕ ಮಧ್ಯಪ್ರದೇಶ ತಂಡಕ್ಕೆ ಗೆಲ್ಲಲು 108 ರನ್‌ಗಳ ಸಾಧಾರಣ ಗುರಿ ನೀಡಿತ್ತು.

Follow Us:
Download App:
  • android
  • ios