ಐಪಿಎಲ್ ಪ್ಲೇ-ಆಫ್ ಟಿಕೆಟ್ಗಾಗಿ ನೂಕುನುಗ್ಗಲು!
ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದರೂ ಕ್ಯೂ ನಿಲ್ಲುವುದು ತಪ್ಪಲಿಲ್ಲ
ಅಹಮದಾಬಾದ್‌ನ ಮೋದಿ ಕ್ರೀಡಾಂಗಣದ ಬಳಿ ಸಾವಿರಾರು ಮಂದಿ ಜಮಾವಣೆ
ಬಿಸಿಸಿಐ, ಗುಜರಾತ್ ಕ್ರಿಕೆಟ್ ಸಂಸ್ಥೆಯಿಂದ ಅಸಮರ್ಪಕ ನಿರ್ವಹಣೆ
ನೂಕು ನುಗ್ಗಲು, ಕಾಲ್ತುಳಿತದ ಪರಿಸ್ಥಿತಿ
ಸುಡು ಬಿಸಿಲಿಗೆ ಕುಸಿದು ಬಿದ್ದ ಹಲವರು
ಅಹಮದಾಬಾದ್(ಮೇ.27): ಐಪಿಎಲ್ನ ಗುಜರಾತ್ ಹಾಗೂ ಮುಂಬೈ ನಡುವಿನ ಶುಕ್ರವಾರದ ಪ್ಲೇ-ಆಫ್ ಪಂದ್ಯ, ಭಾನುವಾರ (ಮೇ 28) ರಂದು ನಡೆಯಲಿರುವ ಫೈನಲ್ ಪಂದ್ಯದ ಟಿಕೆಟ್ಗಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಬಳಿ ಗುರುವಾರ ಮತ್ತು ಶುಕ್ರವಾರ ಸಾವಿರಾರು ಜನರು ಪರದಾಡಿದ್ದು, ಕಾಲ್ತುಳಿತದ ಪರಿಸ್ಥಿತಿ ಉಂಟಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಘಟನೆಯು ಬಿಸಿಸಿಐ ಹಾಗೂ ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ)ಯನ್ನು ಮುಜುಗರಕ್ಕೀಡಾಗಿಸಿದೆ.
ಆಗಿದ್ದೇನು?: ಪ್ಲೇ-ಆಫ್ ಪಂದ್ಯಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಮಾರಾಟ ಮಾಡಲು ಬಿಸಿಸಿಐ ನಿರ್ಧರಿಸಿತ್ತು. ಚೆನ್ನೈನಲ್ಲಿ ನಡೆದ ಕ್ವಾಲಿಫೈಯರ್-1 ಹಾಗೂ ಎಲಿಮಿನೇಟರ್ ಪಂದ್ಯಗಳ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳು, ತಮ್ಮ ಮೊಬೈಲ್‌ನಲ್ಲಿ ಕ್ಯೂಆರ್ ಕೋಡ್ ತೋರಿಸಿ ಚೆಪಾಕ್ ಕ್ರೀಡಾಂಗಣಕ್ಕೆ ಪ್ರವೇಶ ಪಡೆದಿದ್ದರು. ಆದರೆ ಅಹಮದಾಬಾದ್‌ನ ಪಂದ್ಯಗಳಿಗೆ ಕಾಯ್ದಿರಿಸಿದ ಟಿಕೆಟ್ ಪಡೆಯಲು ಪ್ರೇಕ್ಷಕರು ಕ್ರೀಡಾಂಗಣದ ಕೌಂಟರ್ಗೇ ಬರಬೇಕಾಗಿತ್ತು.
ಹೀಗಾಗಿ ಸಾವಿರಾರು ಮಂದಿ ಏಕಕಾಲದಲ್ಲಿ ಕ್ರೀಡಾಂಗಣದ ಗೇಟ್ ಬಳಿ ಜಮಾಯಿಸಿದ ಕಾರಣ ನೂಕುನುಗ್ಗಲು, ತಳ್ಳಾಟ ಉಂಟಾಯಿತು. ಕ್ಯೂನಲ್ಲಿ 4-5 ಗಂಟೆಗಳ ಕಾಲ ನಿಂತಿದ್ದ ವೇಳೆ ನೂರಾರು ಮಂದಿ ಸುಡು ಬಿಸಿಲಿನಲ್ಲಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾಜ್‌ರ್ ಮಾಡಿದ್ದಾರೆ ಎಂದು ಕೆಲ ಅಭಿಮಾನಿಗಳು ದೂರಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ದಾಖಲೆಯ ಆಸನ ಸಾಮರ್ಥ್ಯ ಹೊಂದಿದ್ದರೂ ಟಿಕೆಟ್ ಮಾರಾಟದಲ್ಲಾದ ಎಡವಟ್ಟುಗಳಿಂದಾಗಿ ಬಿಸಿಸಿಐ, ಗುಜರಾತ್ ಕ್ರಿಕೆಟ್ ಸಂಸ್ಥೆ ವಿರುದ್ಧ ಅಭಿಮಾನಿಗಳು ಆಕ್ರೋಶಿತರಾಗಿದ್ದು, ಸಾಮಾಜಿಕ ತಾಣಗಳಲ್ಲಿ ಹಿಡಿಶಾಪ ಹಾಕಿದ್ದಾರೆ.
IPL 2023: ಫೈನಲ್‌ಗೆ ಗುಜರಾತ್ ಟೈಟಾನ್ಸ್, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್!
ಐಪಿಎಲ್ ಟಿಕೆಟ್‌ಗಳ ಮಾರಾಟ ಹೇಗಾಗುತ್ತೆ?
ಲೀಗ್ ಹಂತದ ಪಂದ್ಯಗಳ ಟಿಕೆಟ್‌ಗಳ ಮಾರಾಟ ನಿರ್ವಹಣೆ ಹೊಣೆ ಆಯಾ ಫ್ರಾಂಚೈಸಿಗಳ ಮೇಲಿರಲಿದೆ. ಉದಾಹರಣೆಗೆ ಆರ್‌ಸಿಬಿ ತಂಡ (RCB Team) ತವರಿನ ಪಂದ್ಯಗಳ ಟಿಕೆಟ್ ಮಾರಾಟವನ್ನು ತಂಡದ ಆಡಳಿತ ನೋಡಿಕೊಳ್ಳಲಿದೆ. ಆದರೆ ಪ್ಲೇ-ಆಫ್ ಪಂದ್ಯಗಳ ಟಿಕೆಟ್ ನಿರ್ವಹಣೆಯನ್ನು ಬಿಸಿಸಿಐ ಮಾಡಲಿದ್ದು, ಆತಿಥ್ಯ ವಹಿಸುವ ಕ್ರಿಕೆಟ್ ಸಂಸ್ಥೆಯು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.
ವಿಶ್ವಕಪ್ ಪಂದ್ಯಕ್ಕೂ ಹೀಗಾದ್ರೆ ಏನು ಗತಿ?
ಈ ಕ್ರೀಡಾಂಗಣದಲ್ಲೇ ಏಕದಿನ ವಿಶ್ವಕಪ್ನ (ODI World Cup) ಹಲವು ಪಂದ್ಯಗಳು ನಡೆಯಲಿದ್ದು, ಭಾರತ-ಪಾಕಿಸ್ತಾನ (India vs Pakistan) ಪಂದ್ಯಕ್ಕೂ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಆದರೆ ಐಪಿಎಲ್ ಪಂದ್ಯದ ಟಿಕೆಟ್ನ ವಿಚಾರದಲ್ಲೇ ಹೀಗಾದರೆ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯಗಳ ವೇಳೆ ಗುಜರಾತ್ ಕ್ರಿಕೆಟ್ ಸಂಸ್ಥೆಯಿಂದ ಪ್ರೇಕ್ಷಕರ ನಿರ್ವಹಣೆ ಸಾಧ್ಯವೇ ಎನ್ನುವ ಬಗ್ಗೆ ಪ್ರಶ್ನೆ ಉದ್ಭವಿಸಿದೆ. ಟಿಕೆಟ್ಗಾಗಿ ಬಿಸಿಸಿಐ ಬೇರೆ ವ್ಯವಸ್ಥೆ ಮಾಡಲಿದೆಯೇ ಅಥವಾ ಇ-ಟಿಕೆಟ್ ಮೂಲಕವೇ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ನೀಡಲಿದೆಯೇ ಎಂದು ಸಾಮಾಜಿಕ ತಾಣಗಳಲ್ಲಿ ಚರ್ಚೆ ನಡೆಯುತ್ತಿದೆ.
ಐಪಿಎಲ್ ಫೈನಲ್‌ಗೆ ಮುನ್ನ ಅದ್ಧೂರಿ ಸಮಾರಂಭ
ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೇ 28ರಂದು ನಡೆಯಲಿರುವ 16ನೇ ಆವೃತ್ತಿ ಐಪಿಎಲ್ ಫೈನಲ್ಗೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದ್ದು, ಖ್ಯಾತ ರ‍್ಯಾಪರ್‌ಗಳು, ಸಂಗೀತ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸಂಜೆ 6 ಗಂಟೆಗೆ ಸಮಾರಂಭ ಶುರುವಾಗಲಿದ್ದು, ರಾರಯಪರ್ ಕಿಂಗ್ ಹಾಗೂ ಡಿಜೆ ನ್ಯೂಕ್ಲೆಯಾ ಪಾಲ್ಗೊಳ್ಳಲಿದ್ದಾರೆ. ಇನ್ನು ರ‍್ಯಾಪರ್ ಡಿವೈನ್ ಸೇರಿದಂತೆ ಹಲವರು ಮೊದಲ ಇನ್ನಿಂಗ್‌್ಸ ಮುಗಿದು 2ನೇ ಇನ್ನಿಂಗ್‌್ಸ ಆರಂಭಗೊಳ್ಳುವ ಮೊದಲೂ ಪ್ರದರ್ಶನ ನೀಡಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕಿ ಜೋನಿತಾ ಗಾಂಧಿ ಕೂಡಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.