ಕಾಲ್ತುಳಿತದ ದುರಂತದ ಬಳಿಕ ಮುಚ್ಚಲಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಕೆಎಸ್‌ಸಿಎ ಸರ್ಕಾರದ ಷರತ್ತುಗಳನ್ನು ಪೂರೈಸಲು ಒಪ್ಪಿಕೊಂಡಿದೆ.

ಬೆಂಗಳೂರು: ಹಲವು ತಿಂಗಳುಗಳ ಅನಿಶ್ಚಿತತೆ, ಗೊಂದಲಗಳ ಬಳಿಕ ಕೊನೆಗೂ ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಇದರೊಂದಿಗೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾಗಿದ್ದ ಕಾಲ್ತುಳಿತದ ಬಳಿಕ ಬಹುತೇಕ ಮುಚ್ಚಿ ಹೋಗಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲುಗಳು ಈಗ ತೆರೆದುಕೊಳ್ಳಲು ಹಾದಿ ಸುಗಮವಾಗಿದೆ.

ಜೂನ್‌ನಲ್ಲಿ ಸಂಭವಿಸಿದ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಬಳಿಕ ಚಿನ್ನಸ್ವಾಮಿಯಲ್ಲಿ ಯಾವುದೇ ಮಹತ್ವದ ಪಂದ್ಯಗಳು ನಡೆದಿಲ್ಲ. ಮಹಿಳಾ ವಿಶ್ವಕಪ್‌ ಸೇರಿದಂತೆ ಹಲವು ಮಹತ್ವದ ಪಂದ್ಯಗಳು ಕ್ರೀಡಾಂಗಣದಿಂದ ಸ್ಥಳಾಂತರಗೊಂಡಿದ್ದವು. ಇತ್ತೀಚೆಗಷ್ಟೇ ವಿರಾಟ್‌ ಕೊಹ್ಲಿ ಆಡಬೇಕಿದ್ದ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಕೂಡ ಕೊನೆ ಕ್ಷಣದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಪಟ್ಟುಬಿಡದೆ ಸರ್ಕಾರದ ನಿರಂತರ ಮಾತುಕತೆ ನಡೆಸುತ್ತಿದ್ದ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಕೊನೆಗೂ ಪಂದ್ಯಗಳನ್ನು ನಡೆಸಲು ಅನುಮತಿ ಪಡೆದುಕೊಂಡಿದೆ.

ನ್ಯಾ.ಕುನ್ಹಾ ಸಮಿತಿಯು ನೀಡಿದ ಹಲವು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಿದ ನಂತರವಷ್ಟೇ ಪಂದ್ಯಗಳಿಗೆ ಅನುಮತಿ ನೀಡಲಾಗುವುದು ಎಂದು ಗೃಹ ಇಲಾಖೆ ತಿಳಿಸಿತ್ತು. ಇದರ ಬೆನ್ನಲ್ಲೇ ಕ್ರೀಡಾಂಗಣದಲ್ಲಿ ಕೆಎಸ್‌ಸಿಎ ನವೀಕರಣ ಕಾರ್ಯ ಆರಂಭಿಸಿತ್ತು. ಹೀಗಾಗಿ ಗೃಹ ಇಲಾಖೆಯು ಪಂದ್ಯಗಳ ಆಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ ಮಾಧ್ಯಮ ವಿನಯ್‌ ಮೃತ್ಯುಂಜಯ, ‘ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಹಾಗೂ ಐಪಿಎಲ್‌ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಕೆಎಸ್‌ಸಿಎ ಪೂರೈಸಲಿದೆ’ ಎಂದಿದ್ದಾರೆ.

ಆರ್‌ಸಿಬಿ ಅಂಗಳಕ್ಕೆ ಬಂದು ಬಿದ್ದ ಚೆಂಡು

ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಸರ್ಕಾರ ಅನುಮತಿ ನೀಡಿದರೂ, ಇಲ್ಲಿ ಪಂದ್ಯಗಳನ್ನು ಆಡಬೇಕೇ ಬೇಡವೇ ಎಂಬ ನಿರ್ಧಾರ ಆರ್‌ಸಿಬಿಯದ್ದು. ಈಗಾಗಲೇ ಆರ್‌ಸಿಬಿ ಫ್ರಾಂಚೈಸಿಯು ರಾಯ್ಪುರದಲ್ಲಿ 2 ಪಂದ್ಯಗಳನ್ನು ಆಡುವ ಬಗ್ಗೆ ವರದಿಯಾಗುತ್ತಿದೆ. ಉಳಿದ ಪಂದ್ಯಗಳನ್ನು ಚಿನ್ನಸ್ವಾಮಿಯಲ್ಲೇ ಆಡಲಿದೆಯೇ ಇಲ್ಲವೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಇದರ ಬಗ್ಗೆ ಕೆಎಸ್‌ಸಿಎ ಪದಾಧಿಕಾರಿಗಳು ಆರ್‌ಸಿಬಿ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು, ಚಿನ್ನಸ್ವಾಮಿಯಲ್ಲೇ ಪಂದ್ಯಗಳನ್ನು ಆಡುವಂತೆ ಮನವೊಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು:

ಇನ್ನು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡು ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಯುವ ಕ್ರಿಕೆಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಪ್ರತಿಭಾನ್ವಿತ ಯುವ ಕ್ರಿಕೆಟಿಗರು ಹಾಗೂ ಆರ್‌ಸಿಬಿ ಅಭಿಮಾನಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮನಬಿಚ್ಚಿ ಮಾತನಾಡಿದ್ದಾರೆ.