IPL 2022: ಲಖನೌ ಸೂಪರ್‌ ಜೈಂಟ್ಸ್‌ ಕೂಡಿಕೊಂಡ ಜಿಂಬಾಬ್ವೆ ಮಾರಕ ವೇಗಿ..!

* 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಮಾರ್ಚ್ 26ರಿಂದ ಆರಂಭ

* ಟೂರ್ನಿ ಆರಂಭಕ್ಕೂ ಮುನ್ನ ಲಖನೌ ತಂಡದಿಂದ ಹೊರಗುಳಿದಿದ್ದ ಮಾರ್ಕ್‌ ವುಡ್

* ಇದೀಗ ಲಖನೌ ತಂಡ ಕೂಡಿಕೊಂಡ ಬ್ಲೆಸ್ಸಿಂಗ್‌ ಮುಜರಬಾನಿ

Lucknow Super Giants pacer Blessing Muzarabani only Zimbabwean player in IPL 2022 kvn

ನವದೆಹಲಿ(ಮಾ.23): ಮುಂಬರುವ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್ (Lucknow Super Giants) ತಂಡದ ಪರ ಜಿಂಬಾಬ್ವೆ ಮಾರಕ ವೇಗಿ ಬ್ಲೆಸ್ಸಿಂಗ್‌ ಮುಜರಬಾನಿ (Blessing Muzarabani) ಕಣಕ್ಕಿಳಿಯಲಿದ್ದಾರೆ. ಈ ಮೂಲಕ 2022ರ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಏಕೈಕ ಜಿಂಬಾಬ್ವೆ ಆಟಗಾರ ಎನ್ನುವ ಹಿರಿಮೆಗೆ ಬ್ಲೆಸ್ಸಿಂಗ್‌ ಮುಜರಬಾನಿ ಪಾತ್ರರಾಗಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ (IPL Mega Auction) ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿಯು 7.5 ಕೋಟಿ ರುಪಾಯಿ ನೀಡಿ ಇಂಗ್ಲೆಂಡ್ ವೇಗದ ಬೌಲರ್‌ ಮಾರ್ಕ್ ವುಡ್ (Mark Wood) ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಐಪಿಎಲ್ (IPL) ಟೂರ್ನಿ ಆರಂಭಕ್ಕೂ ಮುನ್ನವೇ ಮಾರ್ಕ್‌ ವುಡ್‌ ವೈಯುಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಜಿಂಬಾಬ್ವೆ ಆಟಗಾರರನ್ನು ತನ್ನತ್ತ ಸೆಳೆದುಕೊಂಡಿದೆ. ಆದರೆ ಬ್ಲೆಸ್ಸಿಂಗ್‌ ಮುಜರಬಾನಿ ನೆಟ್‌ ಬೌಲರ್ ಆಗಿ ತಂಡ ಸೇರಿಕೊಂಡಿದ್ದಾರೆಯೇ ಅಥವಾ ಮಾರ್ಕ್‌ ವುಡ್ ಬದಲಿ ಆಟಗಾರನಾಗಿ ತಂಡ ಸೇರಿಕೊಂಡಿದ್ದಾರೆಯೇ ಎನ್ನುವುದಕ್ಕೆ ಲಖನೌ ಫ್ರಾಂಚೈಸಿಯು ಇದುವರೆಗೂ ಸ್ಪಷ್ಟನೆ ನೀಡಿಲ್ಲ.

ಇದೀಗ ಭಾರತಕ್ಕೆ ತೆರಳಲು ಸಿದ್ದರಾಗಿರುವ 25 ವರ್ಷದ ಬ್ಲೆಸ್ಸಿಂಗ್‌ ಮುಜರಬಾನಿ ಅವರನ್ನು ಭಾರತೀಯ ರಾಯಭಾರಿ ಕಚೇರಿಯು, ಅವರನ್ನು ಆಮಂತ್ರಿಸಿ, ಶುಭ ಹಾರೈಸಿ ಬೀಳ್ಕೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಜಿಂಬಾಬ್ವೆಯಲ್ಲಿರುವ ಭಾರತೀಯ ರಾಯಭಾರಿಯು ಟ್ವೀಟ್ ಮಾಡಿದ್ದು, ಐಪಿಎಲ್‌ಗೆ ಸಿದ್ದತೆ ನಡೆಸುತ್ತಿರುವ ಜಿಂಬಾಬ್ವೆಯ ಬೌಲರ್, ರಾಯಭಾರಿ ಕಚೇರಿಯಲ್ಲಿ ಭೇಟಿಯಾಗಿದ್ದರು. ಈ ವೇಳೆ ರಾಯಭಾರಿ ಕಚೇರಿಯು ಅವರಿಗೆ ಹಾಗೂ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಶುಭ ಹಾರೈಸಲಾಯಿತು ಎಂದು ಟ್ವೀಟ್ ಮಾಡಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬ್ಲೆಸ್ಸಿಂಗ್‌ ಮುಜರಬಾನಿ, ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕು ಎನ್ನುವುದು ನನ್ನ ಬಾಲ್ಯದ ಕನಸಾಗಿತ್ತು ಎಂದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬ್ಲೆಸ್ಸಿಂಗ್‌ ಮುಜರಬಾನಿ, ಐಪಿಎಲ್ ಆಡಲು ಅವಕಾಶ ಮಾಡಿಕೊಟ್ಟ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಧನ್ಯವಾದಗಳು. ಇದು ನನ್ನ ಬಾಲ್ಯದ ಕನಸಾಗಿತ್ತು. ನನ್ನ ಕನಸು ನನಸಾಗಿದ್ದಕ್ಕೆ ನನಗೆ ಖುಷಿಯಾಗುತ್ತಿದೆ. ಜಗತ್ತಿನ ಅತಿದೊಡ್ಡ ಟಿ20 ಲೀಗ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕನಾಗಿದ್ಧೇನೆ ಎಂದು ಟ್ವೀಟ್ ಮಾಡಿದ್ದಾರೆ. ಬ್ಲೆಸ್ಸಿಂಗ್‌ ಮುಜರಬಾನಿ ಜಿಂಬಾಬ್ವೆ ತಂಡದ ಪರ 30 ಏಕದಿನ ಹಾಗೂ 21 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 64 ವಿಕೆಟ್ ಕಬಳಿಸಿದ್ದಾರೆ. ಇನ್ನು 6 ಟೆಸ್ಟ್ ಪಂದ್ಯಗಳಿಂದ ನೀಳಕಾಯದ ವೇಗಿ 19 ವಿಕೆಟ್ ಕಬಳಿಸಿದ್ದಾರೆ.

ಬ್ಲೆಸ್ಸಿಂಗ್‌ ಮುಜರಬಾನಿ ಅವರಿಗಿಂತ ಮೊದಲು  ಬ್ರೆಂಡನ್ ಟೇಲರ್‌ ಐಪಿಎಲ್‌ನಲ್ಲಿ ಕೊನೆಯ ಬಾರಿಗೆ ಪಾಲ್ಗೊಂಡ ಜಿಂಬಾಬ್ವೆಯ ಆಟಗಾರ ಎನಿಸಿದ್ದರು. 2015ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಬ್ರೆಂಡನ್ ಟೇಲರ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಇನ್ನು ಇದಕ್ಕೂ ಮೊದಲು ರೇ ಪ್ರಿನ್ಸ್‌(ಮುಂಬೈ ಇಂಡಿಯನ್ಸ್) ಹಾಗೂ ಟಟೇಡ ತೈಬು(ಕೋಲ್ಕತಾ ನೈಟ್ ರೈಡರ್ಸ್‌) ಐಪಿಎಲ್‌ನಲ್ಲಿ ಪಾಲ್ಗೊಂಡ ಇತರೇ ಜಿಂಬಾಬ್ವೆ ಆಟಗಾರರೆನಿಸಿದ್ದಾರೆ.

IPL 2022: ಪಂಜಾಬ್ ಕಿಂಗ್ಸ್‌ ತೊರೆದಿದ್ದೇಕೆ? ಮೊದಲ ಬಾರಿಗೆ ತುಟಿಬಿಚ್ಚಿದ ಕೆ.ಎಲ್. ರಾಹುಲ್..!

ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಆವೇಶ್ ಖಾನ್, ದುಸ್ಮಂತ್ ಚಮೀರಾ, ಅಜಿಂಕ್ ರಜಪೂತ್, ವರುಣ್ ಆರೋನ್ ಅವರಂತಹ ವೇಗಿಗಳಿದ್ದು, ಇದೀಗ ಬ್ಲೆಸ್ಸಿಂಗ್‌ ಮುಜರಬಾನಿ ಅವರ ಸೇರ್ಪಡೆ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Latest Videos
Follow Us:
Download App:
  • android
  • ios