IPL 2022: ಪಂಜಾಬ್ ಕಿಂಗ್ಸ್ ತೊರೆದಿದ್ದೇಕೆ? ಮೊದಲ ಬಾರಿಗೆ ತುಟಿಬಿಚ್ಚಿದ ಕೆ.ಎಲ್. ರಾಹುಲ್..!
ಬೆಂಗಳೂರು: ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ 10 ತಂಡಗಳು ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಿರುವಾಗಲೇ ಕೆ.ಎಲ್. ರಾಹುಲ್ (KL Rahul), ತಾವು ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ತೊರೆದಿದ್ದೇಕೆ ಎನ್ನುವುದರ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಐಪಿಎಲ್ ಜ್ವರ ನಿಧಾನವಾಗಿ ಕಾವೇರತೊಡಗಿದೆ. ಸಂತಸದ ವಿಚಾರವೆಂದರೆ, ಈ ಬಾರಿಯ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ನಡೆಸಲು ಬಿಸಿಸಿಐ ನಿರ್ಧರಿಸಿದೆ.
ಇದೀಗ ಲಖನೌ ಸೂಪರ್ ಜೈಂಟ್ಸ್ ತಂಡದ ನೂತನ ನಾಯಕ ಕೆ.ಎಲ್. ರಾಹುಲ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ, ತಾವು ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿದ್ದೇಕೆ ಎನ್ನುವುದರ ಬಗ್ಗೆ ತುಟಿ ಬಿಚ್ಚಿದ್ದಾರೆ.
29 ವರ್ಷದ ಕರ್ನಾಟಕ ಮೂಲದ ಬ್ಯಾಟರ್ ಕೆ.ಎಲ್. ರಾಹುಲ್ ಕೇವಲ ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿರದೇ, ತಂಡದ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿಯೂ ಹೊರಹೊಮ್ಮಿದ್ದರು. ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್‌ವಾಲ್ ಜತೆ ರಾಹುಲ್ ಆರಂಭಿಕನಾಗಿ ಯಶಸ್ವಿ ಜತೆಯಾಟ ನಿಭಾಯಿಸುವ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದರು.
ರೆಡ್ ಬುಲ್ ಕ್ರಿಕೆಟ್ ಜತೆ ಮಾತನಾಡಿದ ಕೆ.ಎಲ್. ರಾಹುಲ್, ತಾವೇಕೆ ಪಂಜಾಬ್ ಕಿಂಗ್ಸ್ ತಂಡವನ್ನು ತೊರಿದ್ದಿದ್ದು ಎನ್ನುವುದಕ್ಕೆ ಸ್ಪಷ್ಟನೆ ನೀಡಿದ್ದಾರೆ. 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಹೊಸ ಸವಾಲನ್ನು ಸ್ವೀಕರಿಸುವ ಉದ್ದೇಶದಿಂದಾಗಿಯೇ ತಾವು ಪಂಜಾಬ್ ಕಿಂಗ್ಸ್ ತಂಡವನ್ನು ತೊರೆದಿದ್ದಾಗಿ ಹೇಳಿದ್ದಾರೆ.
(photo Source- Google)
ನಾನು ಆ ತಂಡದ ಜತೆ ನಾಲ್ಕು ವರ್ಷಗಳ ಕಾಲ ಆಡಿದ್ದೇನೆ ಹಾಗೂ ಅತ್ಯುತ್ತಮವಾಗಿಯೇ ರನ್ ಗಳಿಸಿದ್ದೇನೆ. ಹೀಗಿದ್ದೂ ಪಂಜಾಬ್ ತಂಡವನ್ನು ತೊರೆಯುವುದು ನನ್ನ ಪಾಲಿಗೆ ಕಠಿಣ ನಿರ್ಧಾರವಾಗಿತ್ತು. ಯಾಕೆಂದರೆ ದೀರ್ಘಕಾಲ ಪಂಜಾಬ್ ತಂಡದ ಜತೆಗಿರುವುದರಿಂದ ಆ ತಂಡದ ಜತೆ ನನಗೆ ಉತ್ತಮ ಬಾಂಧವ್ಯವಿದೆ. ಹೊಸ ಸವಾಲು ಸ್ವೀಕರಿಸುವ ಉದ್ದೇಶದಿಂದ ತಾವು ತಂಡ ತೊರೆದಿದ್ದೇನೆಂದು ರಾಹುಲ್ ಹೇಳಿದ್ದಾರೆ.
ಬ್ಯಾಟಿಂಗ್‌ನಲ್ಲಿ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್‌ವಾಲ್ ಅಮೋಘ ಪ್ರದರ್ಶನ ತೋರಿದರೂ, ಸಹ ತಂಡವಾಗಿ ಪಂಜಾಬ್ ಉತ್ತಮ ಪ್ರದರ್ಶನ ತೋರಲು ವಿಫಲವಾಗಿತ್ತು. ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲೂ ಪಂಜಾಬ್ ತಂಡವು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಐಪಿಎಲ್ ಆಟಗಾರರ ಹರಾಜಿಗೂ ಮುನ್ನ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಕೆ.ಎಲ್. ರಾಹುಲ್ ಅವರನ್ನು ರೀಟೈನ್ ಮಾಡಿಕೊಳ್ಳಲು ಬಯಸಿತ್ತು. ಆದರೆ ಕೆ.ಎಲ್. ರಾಹುಲ್ ಪಂಜಾಬ್ ತಂಡವನ್ನು ತೊರೆಯುವುದಾಗಿ ಇಂಗಿತ ವ್ಯಕ್ತಪಡಿಸಿದ್ದರಿಂದ ಅವರನ್ನು ಪಂಜಾಬ್ ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಂಜಾಬ್ ಕಿಂಗ್ಸ್ ತಂಡದ ಹೆಡ್ ಕೋಚ್ ಅನಿಲ್ ಕುಂಬ್ಳೆ, ಖಂಡಿತವಾಗಿಯೂ ನಾವು ಕೆ.ಎಲ್. ರಾಹುಲ್ ಅವರನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಬಯಸಿದ್ದೆವು. ಆದರೆ ಅವರು ಹರಾಜಿನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು, ನಾವು ರಾಹುಲ್ ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದು ಸ್ಟಾರ್ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯೆ ನೀಡಿದ್ದರು.