ಲಖನೌ ಸೂಪರ್ ಜೈಂಟ್ಸ್ ತಂಡದ ನೂತನ ಜೆರ್ಸಿ ಅನಾವರಣಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ಜಯ್ ಶಾ ಭಾಗಿಇನ್ನಾದರೂ ಲಖನೌ ತಂಡದ ಅದೃಷ್ಟ ಬದಲಾಗುತ್ತಾ?

ನವದೆಹಲಿ(ಮಾ.07): ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಲಖನೌ ಸೂಪರ್ ಜೈಂಟ್ಸ್‌ ತಂಡವು ಟೂರ್ನಿಗೆ ಎಲ್ಲರಿಗಿಂತ ಮುಂಚಿತವಾಗಿಯೇ ಸಜ್ಜಾದಂತೆ ಕಂಡು ಬರುತ್ತಿದ್ದು, ಇದೀಗ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಲಖನೌ ಸೂಪರ್‌ ಜೈಂಟ್ಸ್ ತಂಡದ ಜೆರ್ಸಿ ಅನಾವರಣ ಮಾಡಿದ್ದಾರೆ. ಈ ಬಾರಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಕಡು ನೀಲಿ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ.

ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಖನೌ ಸೂಪರ್ ಜೈಂಟ್ಸ್‌ ತಂಡವು ತಿಳಿ ನೀಲಿ ಮಿಶ್ರಿತ ಜೆರ್ಸಿಯಲ್ಲಿ ಕಣಕ್ಕಿಳಿದಿತ್ತು. ತಾನಾಡಿದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲೇ ಲಖನೌ ಸೂಪರ್ ಜೈಂಟ್ಸ್ ತಂಡವು ಪ್ಲೇ ಆಫ್ ಹಂತವನ್ನು ಪ್ರವೇಶಿಸಿತ್ತಾದರೂ, ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. 

ಜೆರ್ಸಿ ಅನಾವರಣ ಸಂದರ್ಭದಲ್ಲಿ ಲಖನೌ ಸೂಪರ್ ಜೈಂಟ್ಸ್‌ ಫ್ರಾಂಚೈಸಿಯು ಫ್ಯಾಷನ್ ಶೋ ಏರ್ಪಡಿಸಿತ್ತು. ಈ ಫ್ಯಾಷನ್ ಶೋನಲ್ಲಿ ಲಖನೌ ಸೂಪರ್ ಜೈಂಟ್ಸ್‌ನ ಹಲವು ತಾರೆಯರು ಪಾಲ್ಗೊಂಡಿದ್ದರು. ಲಖನೌ ಸೂಪರ್ ಜೈಂಟ್ಸ್ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮದಲ್ಲಿ ರವಿ ಬಿಷ್ಣೋಯಿ, ಆವೇಶ್ ಖಾನ್, ಜಯದೇವ್ ಉನಾದ್ಕತ್, ದೀಪಕ್ ಹೂಡಾ ಹಾಗೂ ನಾಯಕ ಕೆ ಎಲ್ ರಾಹುಲ್ ಅವರು ಹಾಜರಿದ್ದರು. ಇನ್ನುಳಿದಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ, ಹಾಗೂ ಟೀಂ ಮೆಂಟರ್ ಗೌತಮ್ ಗಂಭೀರ್ ಕೂಡಾ ಉಪಸ್ಥಿತರಿದ್ದರು. ನೂತನ ಜೆರ್ಸಿಯು ಲಖನೌ ಸೂಪರ್ ಜೈಂಟ್ಸ್ ತಂಡದ ಅದೃಷ್ಟವನ್ನು ಬದಲಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Scroll to load tweet…

ಆತ್ಮೀಯ ಗೆಳೆಯ ವಿರಾಟ್ ಕೊಹ್ಲಿಯನ್ನೇ ಮರೆತ ಎಬಿಡಿ..! ವಿರಾಟ್-ಗೇಲ್‌ಗಿಂತ ಈತನೇ ಅತಿದೊಡ್ಡ ಮ್ಯಾಚ್ ವಿನ್ನರ್‌ ಅಂತೆ..!

ಕಳೆದ ಆವೃತ್ತಿಯಲ್ಲಿ ನೂತನವಾಗಿ ಇಂಡಿಯನ್‌ ಪ್ರೀಮಿಯರ್ ಲೀಗ್‌ಗೆ ಪ್ರವೇಶ ಪಡೆದ ಲಖನೌ ಸೂಪರ್ ಜೈಂಟ್ಸ್‌ ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದ ಅಂತ್ಯದ ವೇಳೆಗೆ ಮೂರನೇ ಸ್ಥಾನ ಪಡೆದಿತ್ತು. 14 ಪಂದ್ಯಗಳನ್ನಾಡಿ 9 ಗೆಲುವು ಹಾಗೂ 5 ಸೋಲು ಸಹಿತ 18 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು. ಇನ್ನು ರಾಜಸ್ಥಾನ ರಾಯಲ್ಸ್ ಕೂಡಾ 18 ಅಂಕ ಪಡೆದಿತ್ತಾದರೂ, ನೆಟ್‌ರನ್‌ ರೇಟ್‌ ಉತ್ತಮವಾಗಿದ್ದರಿಂದ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದು, ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿತ್ತು. ಇನ್ನು ನಾಯಕನ ಆಟವಾಡಿದ್ದ ಕೆ ಎಲ್ ರಾಹುಲ್ 15 ಪಂದ್ಯಗಳನ್ನಾಡಿ 51.33ರ ಬ್ಯಾಟಿಂಗ್ ಸರಾಸರಿಯಲ್ಲಿ 616 ರನ್ ಚಚ್ಚಿದ್ದರು. ಆದರೆ ಈ ಬಾರಿಯ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವ ಕೆ ಎಲ್ ರಾಹುಲ್, ಐಪಿಎಲ್‌ನಲ್ಲಿ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.