* ಗುಜರಾತ್ ಟೈಟಾನ್ಸ್ ಎದುರು ಆಘಾತಕಾರಿ ಸೋಲು ಕಂಡ ಆರ್‌ಸಿಬಿ* ಆರ್‌ಸಿಬಿ ಸೋಲಿನ ಬೆನ್ನಲ್ಲೇ ನವೀನ್ ಉಲ್‌ ಹಕ್‌ ಇನ್‌ಸ್ಟಾ ಸ್ಟೋರಿ ವೈರಲ್* ನವೀನ್ ಉಲ್ ಹಕ್ ಮೇಲೆ ಮುಗಿಬಿದ್ದ ವಿರಾಟ್ ಫ್ಯಾನ್ಸ್

ಬೆಂಗಳೂರು(ಮೇ.22): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್-ಹಕ್ ನಡುವೆ ಮತ್ತೊಂದು ಮುಖಾಮುಖಿಯಾಗಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ನಿರೀಕ್ಷೆ ಹುಸಿಯಾಗಿದೆ. ಗುಜರಾತ್ ಟೈಟಾನ್ಸ್ ಎದುರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ರೋಚಕ ಸೋಲು ಅನುಭವಿಸಿದ ಬೆನ್ನಲ್ಲೇ ಫಾಫ್ ಡು ಪ್ಲೆಸಿಸ್‌ ಪಡೆಯ ಪ್ಲೇ ಆಫ್‌ ಕನಸು ಭಗ್ನವಾಗಿದೆ. ಇದರ ಬೆನ್ನಲ್ಲೇ ಆಫ್ಘಾನಿಸ್ತಾನ ಮೂಲದ ಲಖನೌ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್‌-ಹಕ್ ಇನ್‌ಸ್ಟಾಗ್ರಾಂ ಸ್ಟೋರಿಯೊಂದು ವಿರಾಟ್ ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

16ನೇ ಆವೃತ್ತಿಯ ಐಪಿಎಲ್‌ನಲ್ಲೂ ಆರ್‌ಸಿಬಿಯ ಕಪ್‌ ಗೆಲ್ಲುವ ಕನಸು ಈಡೇರಲಿಲ್ಲ. ಕಳೆದ 3 ವರ್ಷ ಪ್ಲೇ-ಆಫ್‌ನಲ್ಲಿ ಎಡವಿದ್ದ ಆರ್‌ಸಿಬಿ ಈ ಬಾರಿ ಗುಂಪು ಹಂತದಲ್ಲೇ ಹೊರಬಿದ್ದಿದೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 6 ವಿಕೆಟ್‌ ಸೋಲು ಅನುಭವಿಸಿ ತವರಿನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಭಾನುವಾರದ ಮೊದಲ ಪಂದ್ಯದಲ್ಲಿ ಸನ್‌ರೈಸ​ರ್‍ಸ್ ವಿರುದ್ಧ ಮುಂಬೈ ಗೆಲುವು ಸಾಧಿಸಿದ್ದರಿಂದ ಆರ್‌ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ವಿರಾಟ್‌ ಕೊಹ್ಲಿಯ ಹೋರಾಟದ ಶತಕ ಆರ್‌ಸಿಬಿಯನ್ನು 5 ವಿಕೆಟ್‌ಗೆ 197 ರನ್‌ಗೆ ತಲುಪಿಸಿತು. ಆದರೆ ಕೊಹ್ಲಿಯಷ್ಟೇ ಮನಮೋಹಕ ಆಟವಾಡಿದ ಶುಭ್‌ಮನ್‌ ಗಿಲ್‌ 52 ಎಸೆತದಲ್ಲಿ ಔಟಾಗದೆ 104 ರನ್‌ ಸಿಡಿಸಿ ಆರ್‌ಸಿಬಿ ಆಸೆಗೆ ಕೊಳ್ಳಿಯಿಟ್ಟರು.

ದೊಡ್ಡ ಗುರಿ ಬೆನ್ನತ್ತಲು ಇಳಿದ ಗುಜರಾತ್‌ಗೆ ಗಿಲ್‌ ಹಾಗೂ ವಿಜಯ್‌ ಶಂಕರ್‌ 2ನೇ ವಿಕೆಟ್‌ಗೆ 123 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. 23 ರನ್‌ ಅಂತರದಲ್ಲಿ ಗುಜರಾತ್‌ 3 ವಿಕೆಟ್‌ ಕಳೆದುಕೊಂಡರೂ ಕೊನೆವರೆಗೂ ಕ್ರೀಸ್‌ನಲ್ಲಿ ಉಳಿದ ಗಿಲ್‌ 5 ಬೌಂಡರಿ, 8 ಸಿಕ್ಸರ್‌ನೊಂದಿಗೆ ಕೂಡಿದ್ದ ತಮ್ಮ ಅಮೋಘ ಇನ್ನಿಂಗ್‌್ಸ ಮೂಲಕ ಇನ್ನೂ 5 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು. ಸತತ 2ನೇ ಪಂದ್ಯದಲ್ಲಿ ಗಿಲ್‌ ಶತಕ ದಾಖಲಿಸಿದರು.

ಮಳೆಯಿಂದಾಗಿ 45 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಆರ್‌ಸಿಬಿ ಪವರ್‌-ಪ್ಲೇನಲ್ಲಿ ವಿಕೆಟ್‌ ನಷ್ಟವಿಲ್ಲದೆ 62 ರನ್‌ ಗಳಿಸಿತು. ಆದರೆ 10 ಓವರ್‌ ವೇಳೆಗೆ 3 ವಿಕೆಟ್‌ಗೆ 93 ರನ್‌ ಗಳಿಸಿ ಹಿನ್ನಡೆ ಕಂಡ ತಂಡವನ್ನು ಕೊಹ್ಲಿ ಮೇಲೆತ್ತಿದರು. 61 ಎಸೆತದಲ್ಲಿ 13 ಬೌಂಡರಿ, 1 ಸಿಕ್ಸರನೊಂದಿಗೆ ಕೊಹ್ಲಿ ಔಟಾಗದೆ 101 ರನ್‌ ಗಳಿಸಿದರು.

ಈ ಐಪಿಎಲ್‌ನಲ್ಲಿ 11 ಶತಕ: ಹೊಸ ದಾಖಲೆ!

ಇನ್ನು ಆರ್‌ಸಿಬಿ ಸೋಲಿನ ಬೆನ್ನಲ್ಲೇ ನವೀನ್ ಉಲ್-ಹಕ್‌ ಇನ್‌ಸ್ಟಾ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಆ ಪೋಸ್ಟ್ ಇದೀಗ ವಿರಾಟ್ ಕೊಹ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಲವು ಅಭಿಮಾನಿಗಳು, ನವೀನ್ ಉಲ್‌-ಹಕ್ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Scroll to load tweet…
Scroll to load tweet…
Scroll to load tweet…

ನೆನಪಿದೆಯಾ ವಿರಾಟ್-ನವೀನ್ ಜಗಳ: ಕಳೆದ ಮೇ 01ರಂದು ಲಖನೌನ ಏಕಾನ ಮೈದಾನದಲ್ಲಿ ಆರ್‌ಸಿಬಿ ಹಾಗೂ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ವ್ಯಾಪಕ ಮಾತಿನ ಚಕಮಕಿ ನಡೆದಿತ್ತು. ಇದಾದ ಬಳಿಕ ನವೀನ್ ಉಲ್ ಹಕ್ ಸಮಯ ಸಿಕ್ಕಾಗಲೆಲ್ಲಾ ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡವನ್ನು ಕೆಣಕುತ್ತಲೇ ಬಂದಿದ್ದಾರೆ. ಒಂದು ವೇಳೆ ಗುಜರಾತ್ ಎದುರು ಆರ್‌ಸಿಬಿ ಜಯ ಸಾಧಿಸಿದ್ದರೇ, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮತ್ತೊಮ್ಮೆ ಲಖನೌ ಹಾಗೂ ಆರ್‌ಸಿಬಿ ತಂಡಗಳು ಮುಖಾಮುಖಿಯಾಗುತ್ತಿದ್ದವು. ಆಗ ಮತ್ತೊಮ್ಮೆ ವಿರಾಟ್ ಹಾಗೂ ನವೀನ್ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆಯಿತ್ತು. ಆದರೆ ಆರ್‌ಸಿಬಿ ಕೊನೆಯ ಪಂದ್ಯದಲ್ಲಿ ಸೋಲುಂಡಿದ್ದು, ಈ ಅವಕಾಶ ಕೈತಪ್ಪಿದಂತಾಗಿದೆ.