* ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣ* ಲೀಗ್ ಹಂತದಲ್ಲೇ 11 ಶತಕಗಳು ಬಂದಿವೆ

ಮುಂಬೈ(ಮೇ.22): 2023ರ ಐಪಿಎಲ್‌ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗುತ್ತಿದ್ದು, ಟೂರ್ನಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಆವೃತ್ತಿಯಲ್ಲಿ 11 ಶತಕಗಳು ದಾಖಲಾಗಿವೆ. 2022ರ ಆವೃತ್ತಿಯಲ್ಲಿ ಒಟ್ಟು 8 ಶತಕ ದಾಖಲಾಗಿದ್ದವು. ಆ ದಾಖಲೆ ಈಗ ಉತ್ತಮಗೊಂಡಿದೆ. ಈ ಬಾರಿ ಕೇವಲ ಲೀಗ್ ಹಂತದಲ್ಲಿಯೇ 11 ವಿವಿಧ ಬ್ಯಾಟರ್‌ಗಳು ಶತಕ ಸಿಡಿಸಿದ್ದಾರೆ.

ಸನ್‌ರೈಸ​ರ್ಸ್‌ ಹೈದರಾಬಾದ್‌ನ ಹ್ಯಾರಿ ಬ್ರೂಕ್‌ ಕೆಕೆಆರ್‌ ವಿರುದ್ಧ ಈಡನ್‌ ಗಾರ್ಡನ್ಸ್‌ನಲ್ಲಿ ಔಟಾಗದೆ 100 ರನ್‌ ಗಳಿಸಿದರೆ, ಕೆಕೆಆರ್‌ನ ವೆಂಕಟೇಶ್‌ ಅಯ್ಯರ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ವಾಂಖೇಡೆ ಕ್ರೀಡಾಂಗಣದಲ್ಲಿ 104 ರನ್‌ ಸಿಡಿಸಿದರು. ಮುಂಬೈ ವಿರುದ್ಧ ರಾಜಸ್ಥಾನದ ಯಶಸ್ವಿ ಜೈಸ್ವಾಲ್‌ ಸಿಡಿಸಿದ 124 ರನ್‌ ಈ ಆವೃತ್ತಿಯ ವೈಯಕ್ತಿಕ ಗರಿಷ್ಠ ಮೊತ್ತ ಎನಿಸಿದೆ.

ಇನ್ನು ಗುಜರಾತ್‌ ಟೈಟಾನ್ಸ್‌ ವಿರುದ್ಧ ಮುಂಬೈನ ಸೂರ್ಯಕುಮಾರ್‌ ಯಾದವ್‌ ಔಟಾಗದೆ 103, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಪಂಜಾಬ್‌ನ ಪ್ರಭ್‌ಸಿಮ್ರನ್‌ ಸಿಂಗ್‌ 103, ಗುಜರಾತ್‌ನ ಶುಭ್‌ಮನ್‌ ಗಿಲ್‌ ಸನ್‌ರೈಸ​ರ್ಸ್‌ ಹೈದರಾಬಾದ್ ವಿರುದ್ಧ 101, ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ನ ಹೆನ್ರಿಚ್‌ ಕ್ಲಾಸೆನ್‌ 104, ಆರ್‌ಸಿಬಿಯ ವಿರಾಟ್‌ ಕೊಹ್ಲಿ ಸನ್‌ರೈಸ​ರ್ಸ್‌ ವಿರುದ್ಧ 100 ಹಾಗೂ ಮುಂಬೈನ ಕ್ಯಾಮರೂನ್‌ ಗ್ರೀನ್‌ ಸನ್‌ರೈಸ​ರ್ಸ್‌ ವಿರುದ್ಧ ಔಟಾಗದೆ 100 ರನ್‌ ಚಚ್ಚಿದರು.

ಇನ್ನು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಮಾಜಿ ನಾಯಕ ವಿರಾಟ್ ಕೊಹ್ಲಿ ಅಜೇಯ 101 ರನ್ ಬಾರಿಸಿದರು. ವಿರಾಟ್ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಶತಕ ಸಿಡಿಸಿ ಮಿಂಚಿದರು. ಇನ್ನು ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ಪರ ಆರಂಬಿಕ ಬ್ಯಾಟರ್ ಶುಭ್‌ಮನ್ ಅಜೇಯ 100 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಐಪಿಎಲ್‌ನಲ್ಲಿ ಕೊಹ್ಲಿ 7ನೇ ಶತಕ; ಹೊಸ ದಾಖಲೆ ನಿರ್ಮಾಣ

ಬೆಂಗಳೂರು: ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 7ನೇ ಶತಕ ಪೂರ್ತಿಗೊಳಿಸಿದ್ದು, ಟೂರ್ನಿಯ ಇತಿಹಾಸದಲ್ಲೇ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ. ಭಾನುವಾರ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿ ಅಜೇಯ 101 ರನ್ ಸಿಡಿಸಿದರು. 

2016ರಲ್ಲಿ ವಿರಾಟ್ ಕೊಹ್ಲಿ ಒಂದೇ ಆವೃತ್ತಿಯಲ್ಲಿ 4 ಶತಕ ಸಿಡಿಸಿದ್ದರು. ಇದಾದ ಬಳಿಕ 2019ರಲ್ಲಿ ಮತ್ತೊಂದು ಶತಕ ಸಿಡಿಸಿದ್ದ ವಿರಾಟ್, ಈ ವರ್ಷ ಎರಡು ಐಪಿಎಲ್ ಶತಕ ಬಾರಿಸುವ ಮೂಲಕ ಕ್ರಿಸ್ ಗೇಲ್(6 ಶತಕ) ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕುವಲ್ಲಿ ಯಶಸ್ವಿಯಾದರು. ಇನ್ನುಳಿದಂತೆ ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್(5 ಶತಕ), ಡೇವಿಡ್ ವಾರ್ನರ್, ಶೇನ್ ವಾಟ್ಸನ್‌ ಹಾಗೂ ಕೆ ಎಲ್ ರಾಹುಲ್ ತಲಾ 4 ಶತಕ ಬಾರಿಸಿದ್ದಾರೆ. 

ವಿರಾಟ್ ಕೊಹ್ಲಿ ಬಾರಿಸಿರುವ 7 ಐಪಿಎಲ್ ಶತಕಗಳ ಪೈಕಿ 4 ಶತಕಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಮೂಡಿ ಬಂದಿವೆ. ಇನ್ನುಳಿದಂತೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ ಗೇಲ್‌ ಬೆಂಗಳೂರಿನಲ್ಲಿ, ಡೇವಿಡ್‌ ವಾರ್ನರ್, ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ತಲಾ 3 ಶತಕ ಸಿಡಿಸಿದ್ದಾರೆ. 

ನಾಳೆಯಿಂದ ಪ್ಲೇ-ಆಫ್‌

ಐಪಿಎಲ್‌ 16ನೇ ಆವೃತ್ತಿಯ ಪ್ಲೇ-ಆಫ್‌ ಹಂತ ಮಂಗಳವಾರ(ಮೇ 23) ದಿಂದ ಆರಂಭಗೊಳ್ಳಲಿದೆ. ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್‌ ಹಾಗೂ ಚೆನ್ನೈ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೇರಲಿದ್ದು, ಸೋಲುವ ತಂಡಕ್ಕೆ ಪ್ಲೇ-ಆಫ್‌ಗೇರಲು ಇನ್ನೊಂದು ಅವಕಾಶವಿರಲಿದೆ. ಮೇ 24ರಂದು ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಸೋಲುವ ತಂಡ ಟೂರ್ನಿಯಿಂದ ಹೊರಬೀಳಲಿದೆ. ಗೆಲ್ಲುವ ತಂಡ ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡದ ವಿರುದ್ಧ 2ನೇ ಕ್ವಾಲಿಫೈಯರ್‌ನಲ್ಲಿ ಆಡಲಿದೆ.