ಮುಂಬೈ ಇಂಡಿಯನ್ಸ್ ಎದುರು ಗೆದ್ದು ಬೀಗಿದ ಲಖನೌ ಸೂಪರ್ ಜೈಂಟ್ಸ್ಲಖನೌ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ ಮೊಹ್ಸಿನ್ ಖಾನ್ತಮ್ಮ ಅದ್ಭುತ ಪ್ರದರ್ಶನವನ್ನು ತಂದೆಗೆ ಅರ್ಪಿಸಿದ ಎಡಗೈ ವೇಗಿ
ಲಖನೌ(ಮೇ.17): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ದಿನದಿಂದ ದಿನಕ್ಕೆ ರೋಚಕತೆ ಹೆಚ್ಚುತ್ತಾ ಸಾಗುತ್ತಿದೆ. ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಕೃನಾಲ್ ಪಾಂಡ್ಯ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು 5 ರನ್ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಲಕನೌ ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಡುವುದರ ಜತಗೆ ಪ್ಲೇ ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಈ ಪಂದ್ಯದ ಗೆಲುವಿನಲ್ಲಿ ಲಖನೌ ವೇಗಿ ಮೊಹ್ಸಿನ್ ಖಾನ್ ಕೂಡಾ ಮಹತ್ತರ ಪಾತ್ರವನ್ನು ವಹಿಸಿದ್ದು, ಈ ಗೆಲುವನ್ನು ಐಸಿಯುನಲ್ಲಿದ್ದು ಸಾವನ್ನು ಗೆದ್ದು ಬಂದ ತಂದೆಗೆ ಅರ್ಪಿಸಿದ್ದಾರೆ.
ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ 10 ದಿನಗಳ ಕಾಲ ಚಿಕಿತ್ಸೆ ಪಡೆದು ಇತ್ತೀಚೆಗಷ್ಟೇ ವಾಪಾಸ್ಸಾದ ತಮ್ಮ ತಂದೆಗೆ ಈ ಗೆಲುವನ್ನು ಮೊಹ್ಸಿನ್ ಖಾನ್ ಅರ್ಪಿಸಿದ್ದಾರೆ. 24 ವರ್ಷದ ಮೊಯ್ಸಿನ್ ಖಾನ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಆದರೆ ಭುಜದ ನೋವಿನ ಸಮಸ್ಯೆಯಿಂದಾಗಿ ಮೊಹ್ಸಿನ್ ಖಾನ್, ಈ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುತೇಕ ಪಂದ್ಯಗಳಿಂದ ಹೊರಗುಳಿದಿದ್ದರು.
ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎರಡನೇ ಪಂದ್ಯವನ್ನಾಡಿದ ಮೊಹ್ಸಿನ್ ಖಾನ್, ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಮೊಹ್ಸಿನ್ ಖಾನ್‌ರ ಕೊನೆಯ ಓವರ್ ಪಂದ್ಯದ ಟರ್ನಿಂಗ್ ಪಾಯಿಂಟ್. ಕೊನೆಯ 6 ಎಸೆತದಲ್ಲಿ ಮುಂಬೈಗೆ 11 ರನ್ ಬೇಕಿತ್ತು. ಸ್ಫೋಟಕ ಬ್ಯಾಟರ್‌ಗಳಾದ ಟಿಮ್ ಡೇವಿಡ್ ಹಾಗೂ ಕ್ಯಾಮರೂನ್ ಗ್ರೀನ್ ಕ್ರೀಸ್‌ನಲ್ಲಿದ್ದರೂ ಮುಂಬೈ ಗೆಲ್ಲಲಾಗಲಿಲ್ಲ. ಮೊಹ್ಸಿನ್‌ರ ನಿಖರವಾದ ಯಾರ್ಕರ್‌ಗಳು ಗ್ರೀನ್ ಹಾಗೂ ಡೇವಿಡ್‌ರನ್ನು ಕಟ್ಟಿಹಾಕಿದವು.
"ನಾನು ಗಾಯಗೊಂಡಿದ್ದು, ನನ್ನ ಪಾಲಿಗೆ ಕಠಿಣ ಸಂದರ್ಭಗಳಲ್ಲಿ ಒಂದು. ನನ್ನ ತಂದೆ ನಿನ್ನೆಯಷ್ಟೇ ಐಸಿಯುನಿಂದ ಡಿಸ್ಚಾರ್ಜ್ ಆಗಿದ್ದಾರೆ. ಕಳೆದ 10 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದರು. ನಾನು ಅವರಿಗೆ ಈ ಗೆಲುವನ್ನು ಅರ್ಪಿಸುತ್ತೇನೆ. ಅವರು ಈ ಪಂದ್ಯವನ್ನು ನೋಡುತ್ತಿರಬಹುದು" ಎಂದು ಮೊಹ್ಸಿನ್ ಖಾನ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾನು ನನ್ನ ತಂಡ, ಸಹಾಯಕ ಸಿಬ್ಬಂದಿಗಳಿಗೆ ಹಾಗೂ ಗೌತಮ್ ಗಂಭೀರ್ ಮತ್ತು ವಿಜಯ್ ದಹಿಯಾ ಸರ್‌ಗೆ ಋಣಿಯಾಗಿದ್ದೇನೆ. ಯಾಕೆಂದರೆ ಕಳೆದ ಪಂದ್ಯದಲ್ಲಿ ನಾನು ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಮತ್ತೊಂದು ಪಂದ್ಯ ಆಡಲು ಅವಕಾಶ ನೀಡಿದರು ಎಂದು ಮೊಹ್ಸಿನ್ ಖಾನ್ ಹೇಳಿದ್ದಾರೆ.
ಮೊಹ್ಸಿನ್ ಸಾಹಸ: ಪ್ಲೇ-ಆಫ್ ಸನಿಹಕ್ಕೆ ಲಖನೌ
ಪ್ಲೇ-ಆಫ್ ಪ್ರವೇಶಕ್ಕೆ ಪೈಪೋಟಿ ಹೆಚ್ಚುತ್ತಿದ್ದು ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ 5 ರನ್ ರೋಚಕ ಗೆಲುವು ಸಾಧಿಸಿದ ಲಖನೌ ಸೂಪರ್ ಜೈಂಟ್ಸ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿ ಪ್ಲೇ-ಆಫ್ ಸನಿಹಕ್ಕೆ ತಲುಪಿದೆ. ಮುಂಬೈ 4ನೇ ಸ್ಥಾನಕ್ಕೆ ಕುಸಿದಿದ್ದು, ಕೊನೆ ಪಂದ್ಯದಲ್ಲಿ ಗೆದ್ದರೂ ಇತರೆ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಾದ ಪರಿಸ್ಥಿತಿ ತಂದುಕೊಂಡಿದೆ.
ಗೆಲ್ಲಲು 178 ರನ್ ಗುರಿ ಬೆನ್ನತ್ತಿದ ಮುಂಬೈ 9.3 ಓವರಲ್ಲಿ ವಿಕೆಟ್ ನಷ್ಟವಿಲ್ಲದೆ 90 ರನ್ ಗಳಿಸಿತ್ತು. ಆದರೆ ರೋಹಿತ್ ಶರ್ಮಾ(37) ಔಟಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡಿತು. ಇಶಾನ್ ಕಿಶನ್(37), ಸೂರ್ಯಕುಮಾರ್(07) ಸಹ ನಾಯಕನನ್ನು ಹಿಂಬಾಲಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಮುಂಬೈ ಎಡವಟ್ಟು ಮಾಡಿಕೊಂಡಿತು. ಕ್ಯಾಮರೂನ್ ಗ್ರೀನ್‌ಗೂ ಮೊದಲು ನೇಹಲ್ ವಧೇರಾ ಹಾಗೂ ವಿಷ್ಣು ವಿನೋದ್‌ರನ್ನು ಕಣಕ್ಕಿಳಿಸಿದ್ದು ದುಬಾರಿಯಾಯಿತು. ನೇಹಲ್ 16 ರನ್ ಗಳಿಸಲು 20 ಎಸೆತ ತೆಗೆದುಕೊಂಡರೆ, ವಿಷ್ಣು 4 ಎಸೆತದಲ್ಲಿ 2 ರನ್ ಗಳಿಸಿ ಔಟಾದರು. ಟಿಮ್ ಡೇವಿಡ್ 19 ಎಸೆತದಲ್ಲಿ 32 ರನ್ ಗಳಿಸಿ ಔಟಾಗದೆ ಉಳಿದರೂ, ಭಾರೀ ಒತ್ತಡ ಎದುರಿಸಿದ ಗ್ರೀನ್ 6 ಎಸೆತದಲ್ಲಿ ಕೇವಲ 4 ರನ್ ಗಳಿಸಿ ನಿರಾಸೆ ಅನುಭವಿಸಿದರು.
IPL 2023: ಮುಂಬೈ ವಿರುದ್ಧ ಗೆದ್ದ ಲಕ್ನೋ, ಆರ್‌ಸಿಬಿ ಸರಳ ಹಾದಿ ಮಾಡಿದ ಸೂಪರ್‌ಜೈಂಟ್ಸ್!
ಕೊನೆಯ 2 ಓವರಲ್ಲಿ ಗೆಲ್ಲಲು 30 ರನ್ ಬೇಕಿದ್ದಾಗ ನವೀನ್ ಉಲ್-ಹಕ್ ಎಸೆದ 19ನೇ ಓವರಲ್ಲಿ 19 ರನ್ ದೋಚಿದ ಮುಂಬೈ ಕೊನೆಯ ಓವರಲ್ಲಿ 11 ರನ್ ಗಳಿಸಲು ವಿಫಲವಾಯಿತು. ಎಡಗೈ ವೇಗಿ ಮೊಹ್ಸಿನ್ ಖಾನ್ ತಮ್ಮ ಶಿಸ್ತುಬದ್ಧ ದಾಳಿಯಿಂದ ಡೇವಿಡ್ ಹಾಗೂ ಗ್ರೀನ್‌ರನ್ನು ಕಟ್ಟಿಹಾಕಿದರು. 5 ವಿಕೆಟ್‌ಗೆ 172 ರನ್ ಗಳಿಸಿ ಮುಂಬೈ ಸೋಲೊಪ್ಪಿಕೊಂಡಿತು.
