ಲಕ್ನೋ ಸೂಪರ್‌ ಜೈಂಟ್ಸ್‌ ತಂಡ 5 ರನ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸಿದೆ. ಆ ಮೂಲಕ ಐಪಿಎಲ್‌ನ ಪ್ಲೇ ಆಫ್‌ಗೇರುವ ಹಾದಿಯಲ್ಲಿ ತೀರಾ ಸನಿಹದಲ್ಲಿದೆ.

ಲಕ್ನೋ (ಮೇ.16): ಸವಾಲಿನ ಮೊತ್ತವನ್ನು ಚೇಸ್‌ ಮಾಡುವಲ್ಲಿ ಎಡವಿದ ಮುಂಬೈ ಇಂಡಿಯನ್ಸ್‌ ತಂಡ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಸೋಲು ಕಂಡಿದೆ. ಮಂಗಳವಾರ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ 3 ವಿಕೆಟ್‌ಗೆ 177 ರನ್‌ ಪೇರಿಸಿತ್ತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್‌ ತಂಡ ರೋಚಕ ಹೋರಾಟ ತೋರಿತಾದರೂ 5 ವಿಕೆಟ್‌ಗೆ 172 ರನ್‌ ಬಾರಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಈ ಗೆಲುವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್‌ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 15 ಅಂಕ ಸಂಪಾದನೆ ಮಾಡಿದ್ದು ಪ್ಲೇ ಆಫ್‌ನ ಸನಿಹದಲ್ಲಿದೆ. 18 ಅಂಕ ಸಂಪಾದನೆ ಮಾಡಿರುವ ಗುಜರಾತ್‌ ತಂಡದ ಪ್ಲೇ ಆಫ್‌ ಖಚಿತವಾಗಿದ್ದರೆ, ತಲಾ 15 ಅಂಕ ಸಂಪಾದನೆ ಮಾಡಿರುವ ಚೆನ್ನೈ ಹಾಗೂ ಲಕ್ನೋ ರೇಸ್‌ನಲ್ಲಿದೆ. ಅದರೊಂದಿಗೆ 14 ಅಂಕ ಸಂಪಾದನೆ ಮಾಡಿರುವ ಮುಂಬೈ, 12 ಅಂಕದಲ್ಲಿರುವ ಆರ್‌ಸಿಬಿ, ರಾಜಸ್ಥಾನ, ಕೆಕೆಆರ್‌ ಹಾಗೂ ಪಂಜಾಬ್‌ ತಂಡಗಳಿಗೂ ಪ್ಲೇ ಆಫ್‌ ಅವಕಾಶ ಮುಕ್ತವಾಗಿದೆ.

ಚೇಸಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮೊದಲ ವಿಕೆಟ್‌ಗೆ ರೋಹಿತ್‌ ಶರ್ಮ ಹಾಗೂ ಇಶಾನ್‌ ಕಿಶನ್‌ 90 ರನ್‌ಗಳ ಜೊತೆಯಾಟವಾಡಿದರು. ಕೇವಲ 58 ಎಸೆತಗಳಲ್ಲಿ 90 ರನ್‌ ಜೊತೆಯಾಟವಾಡಿದ್ದು ವಿಶೇಷವಾಗಿತ್ತು. ಚೇಸಿಂಗ್‌ನ ಸಮಯದ 2ನೇ ಎಸೆತವನ್ನೇ ಬೌಂಡರಿಗಟ್ಟಿದ ಇಶಾನ್‌ ಕಿಶನ್‌, ಕೇವಲ 39 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 59 ರನ್‌ ಬಾರಿಸಿ ಗಮನಸೆಳೆದರು. ಇಶಾನ್‌ ಕಿಶನ್‌ ಅವರ ಅಬ್ಬರದ ಆಟದಿಂದಾಗಿ ಮುಂಬೈ ಇಂಡಿಯನ್ಸ್‌ ಪವರ್ ಪ್ಲೇ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಬಾರಿಸಿತ್ತು.

ಇನ್ನೊಂದೆಡೆ ಇಶಾನ್‌ ಕಿಶನ್‌ಗೆ ಹೆಚ್ಚಿನ ಅವಕಾಶ ಕೊಟ್ಟು ಬ್ಯಾಟಿಂಗ್‌ ಆನಂದಿಸಿದ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ, 25 ಎಸೆತಗಳಲ್ಲಿ ಮೂರು ಅಬ್ಬರದ ಸಿಕ್ಸರ್‌, 1 ಬೌಂಡರಿಯ ನೆರವಿನಿಂದ 37 ರನ್‌ ಬಾರಿಸಿ ಗಮನಸೆಳೆದರು. ಈ ಜೋಡಿಗೆ ಒಂದೇ ಒಂದು ಬೌಂಡರಿ ಬಿಟ್ಟುಕೊಡದ ಬೌಲರ್‌ ಆಗಿದ್ದ ರವಿ ಬಿಷ್ಣೋಯಿ, 10ನೇ ಓವರ್‌ನಲ್ಲಿ ರೋಹಿತ್‌ ಶರ್ಮ ವಿಕೆಟ್‌ ಉರುಳಿಸುವ ಮೂಲಕ ಜೊತೆಯಾಟ ಬೇರ್ಪಡಿಸಿದರು. ಬಳಿಕ ಬಂದ ವನ್‌ಡೌನ್‌ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ ಮತ್ತೊಮ್ಮೆ ಮುಂಬೈ ಹೊರಗಿನ ಮೈದಾನದಲ್ಲಿ ವೈಫಲ್ಯ ಕಂಡರು. ಮುಂಬೈ ಹೊರಗಿನ ಮೈದಾನದಲ್ಲಿ 7ನೇ ಇನ್ನಿಂಗ್ಸ್‌ ಆಡಿದ ಸೂರ್ಯಕುಮಾರ್‌ ಯಾದವ್‌ ಕೇವಲ 144 ರನ್‌ ಬಾರಿಸಿದ್ದಾರೆ. ಇದಕ್ಕೂ ಮುನ್ನ ರವಿ ಬಿಷ್ಣೋಯಿ, ಇಶಾನ್‌ ಕಿಶನ್‌ ವಿಕೆಟ್‌ಅನ್ನು ಉರುಳಿಸುವ ಮೂಲಕ ಮುಂಬೈಗೆ ಆಘಾತ ನೀಡಿದ್ದರು.

'ಮುಂದಿನ ತಲೆಮಾರು ಆಳು': ಶತಕ ಸಿಡಿಸಿದ ಶುಭ್‌ಮನ್‌ ಗಿಲ್‌ಗೆ ವಿಶೇಷ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!

ಮುಂಬೈ ಇಂಡಿಯನ್ಸ್‌ ಪಾಲಿಗೆ ಮೈದಾನದಲ್ಲಿ ಕಂಟಕವಾಗಿ ಕಾಡಿದ ಬೌಲರ್‌ಗಳಾದ ಕೃನಾಲ್‌ ಪಂದ್ಯ 4 ಓವರ್‌ ಕೋಟಾದಲ್ಲಿ ಕೇವಲ 27 ರನ್‌ ನೀಡಿದರೆ, ರವಿ ಬಿಷ್ಣೋಯಿ ತಮ್ಮ 4 ಓವರ್‌ ಕೋಟಾದಲ್ಲಿ 26 ರನ್‌ ನೀಡಿ 2 ವಿಕೆಟ್‌ ಉರುಳಿಸಿದ್ದರು. ಇವರಿಬ್ಬರ ಓವರ್‌ಗಳು ಮುಕ್ತಾಯವಾದಾಗ ಮುಂಬೈ ತಂಡದ ಗೆಲುವಿಗೆ 6 ಓವರ್‌ಗಳಲ್ಲಿ 63 ರನ್‌ ಬೇಕಿದ್ದವು.
ಕೊನೆಯವರೆಗೂ ಮುಂಬೈ ತಂಡ ಹೋರಾಟ ಮಾಡಿತಾದರೂ 5 ವಿಕೆಟ್‌ಗೆ 172 ರನ್‌ ಬಾರಿಸಲಷ್ಟೇ ಶಕ್ತವಾಗಿ 5 ರನ್‌ ಸೋಲು ಕಂಡಿತು.

ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರ್ಯಾನಿ ಬಾರಿಸಿದ ಆರ್‌ಸಿಬಿ..!