ಲಾರ್ಡ್ಸ್ ಟೆಸ್ಟ್ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು 192 ರನ್‌ಗೆ ಆಲೌಟ್ ಮಾಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಹೀಗಾಗಿ ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದ್ದು, ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ.

ಲಾರ್ಡ್ಸ್ (ಜು.13) ಲಾರ್ಡ್ಸ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ.ನಾಲ್ಕನೇ ದಿನ ಅದ್ಭುತ ಪ್ರದರ್ಶನ ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಇದರ ಪರಿಣಾಮ ಇಂಗ್ಲೆಂಡ್ ತಂಡವನ್ನು 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 192 ರನ್‍ಗೆ ಆಲೌಟ್ ಮಾಡಿದೆ. ಇದೀಗ ಲಾರ್ಡ್ಸ್ ಟೆಸ್ಟ್ ಗೆಲುವಿಗೆ ಭಾರತಕ್ಕೆ 193 ರನ್ ಟಾರ್ಗೆಟ್ ಸಿಕ್ಕಿದೆ. ನಾಲ್ಕನೇ ದಿನದಾಟದಲ್ಲೇ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಗೆಲುವಿನ ವಿಶ್ವಾಸದಲ್ಲಿದೆ.

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್

ಇಂಗ್ಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಲು ಪ್ಲಾನ್ ಮಾಡಿತ್ತು. ಆದರೆ ವಾಶಿಂಗ್ಟನ್ ಸುಂದರ್ ಮೋಡಿಗೆ ಇಂಗ್ಲೆಂಡ್ ಬಲಿಯಾಯಿತು. ಒಂದೆಡೆ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವೇಗ ದಾಳಿ ನಡೆಸಿದರೆ, ಮತ್ತೊದೆಡೆ ನಿತಿಶ್ ರೆಡ್ಡಿ ಹಾಗೂ ಆಕಾಶ್ ದೀಪ್ ಉತ್ತಮ ದಾಳಿ ಸಂಘಟಿಸಿದರು. ಇತ್ತ ವಾಶಿಂಗ್ಟನ್ ಸುಂದರ್ 4 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದರು.

ಜೋ ರೂಟ್ 40 ರನ್, ನಾಯಕ ಬೆನ್ ಸ್ಟೋಕ್ಸ್ 33 ರನ್ ಹ್ಯಾರಿ ಬ್ರೂಕ್ 23 ಹಾಗೂ ಜ್ಯಾಕ್ ಕ್ರಾವ್ಲೆ 22 ರನ್ ಸಿಡಿಸಿದರು. ಇನ್ನುಳಿ ಬ್ಯಾಟರ್ ರನ್ ಗಳಿಸಲು ಪರದಾಡಿದರು. ಹೀಗಾಗಿ ಇಂಗ್ಲೆಂಡ್ 192 ರನ್‌ಗೆ ಆಲೌಟ್ ಆಯಿತು. ಸುಂದರ್ 4, ಬುಮ್ರಾ, ಸಿರಾಜ್ ತಲಾ 2 ಹಾಗೂ ನೀತೀಶ್ ರೆಡ್ಡಿ, ಅಕಾಶ್ ದೀಪ್ ತಲಾ 1 ವಿಕೆಟ್ ಕಬಳಿಸಿದರು.

ಭಾರತ ಮೊದಲ ಇನ್ನಿಂಗ್ಸ್

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗೆ ಆಲೌಟ್ ಆಗಿತ್ತು. ವಿಶೇಷ ಅಂದರೆ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲೂ 387 ರನ್‌ಗೆ ಆಲೌಟ್ ಆಗಿತ್ತು. ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಕೆಎಲ್ ರಾಹುಲ್ ಶತಕ ಸಿಡಿಸಿ ಮಿಂಚಿದ್ದರು. ಇತ್ತ ಯಶಸ್ವಿ ಜೈಸ್ವಾಲ್ 13 ರನ್ ಸಿಡಿಸಿ ನಿರಾಸೆ ಅನುಭವಿಸಿದ್ದರು. ಕರುಣ್ ಈ ಪಂದ್ಯದಲ್ಲಿ 40 ರನ್ ಕಾಣಿಕೆ ನೀಡಿದರು. ಆದರೆ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಯಕ ಶುಬಮನ್ ಗಿಲ್ ಕೇವಲ 16 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ರಿಷಬ್ ಪಂತ್ ಹಾಗೂ ರವೀದ್ರ ಜಡೇಜಾ ಜೊತೆಯಾಟ ಮೂಲಕ ದಿಟ್ಟ ಹೋರಾಟ ನೀಡಿದರು. ಪಂತ್ 74 ರನ್ ಸಿಡಿಸಿದರೆ, ಜಡೇಜಾ 72 ರನ್ ಸಿಡಿಸಿದರು. ನಿತೀಶ್ ರೆಡ್ಡಿ 30 ಹಾಗೂ ವಾಶಿಂಗ್ಟನ್ ಸುಂದರ್ 23 ರನ್ ಸಿಡಿಸಿದರು.