15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ಆತುರ ಬೇಡ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡೇರಲ್ ಕೊಲಿನನ್ ಸಲಹೆ ನೀಡಿದ್ದಾರೆ. ವೈಭವ್ ತನ್ನ ಬಾಲ್ಯವನ್ನು ಆನಂದಿಸಬೇಕು, ಪರೀಕ್ಷೆಗಳಿಗೆ ಸಿದ್ಧರಾಗಬೇಕು ಮತ್ತು ತರಾತುರಿಯಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇಳಿಸಬಾರದು ಎಂದು ಕೊಲಿನನ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ತನ್ನ ಅದ್ಬುತ ಪ್ರದರ್ಶನದ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ದೊಡ್ಡ ಕನಸು ಕಾಣುತ್ತಿರುವ 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಬಗ್ಗೆ ಹಾತೊರೆಯಬೇಡಿ ಎಂದು ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇರಲ್ ಕೊಲಿನನ್ ಅಚ್ಚರಿ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ.
ದಕ್ಷಿಣ ಆಫ್ರಿಕಾ ಪರ 70 ಟೆಸ್ಟ್ ಹಾಗೂ 138 ಏಕದಿನ ಪಂದ್ಯಗಳನ್ನಾಡಿರುವ ಡೇರಲ್ ಕೊಲಿನನ್ ಪ್ರಕಾರ ವೈಭವ್ ಸೂರ್ಯವಂಶಿ ತಮ್ಮ ಬಾಲ್ಯದ ಸುಂದರ ಕ್ಷಣಗಳನ್ನು ಎಂಜಾಯ್ ಮಾಡಲು ಸಲಹೆ ನೀಡಿದ್ದಾರೆ. ಈಗಿನ ಯುವಜನತೆ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದರ ಜತೆಗೆ ಸೋಷಿಯಲ್ ಮೀಡಿಯಾದಲ್ಲೇ ಮುಳುಗಿರುತ್ತಾರೆ ಎಂದು Cricinfo ಗೆ ಬರೆದ ಅಂಕಣ ಬರಹದಲ್ಲಿ ವೈಭವ್ ಸೂರ್ಯವಂಶಿಗೆ ಕಿವಿಮಾತು ಹೇಳಿದ್ದಾರೆ.
'ನಾವೀಗ ನೋಡುತ್ತಿರುವ ವೈಭವ್ ಸೂರ್ಯವಂಶಿ ಅವರೊಬ್ಬ ಅತ್ಯದ್ಭುತ ಪ್ರತಿಭೆಯಾಗಿದ್ದು, ತಮ್ಮ ವಯಸ್ಸಿಗೆ ಮೀರಿದ ಆಟವನ್ನು ಆಡುತ್ತಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಆಟಗಾರರು ಬೆಳಕಿಗೆ ಬರುವುದು ಅಪರೂಪ. ವೈಭವ್ ಸೂರ್ಯವಂಶಿ ಇದೀಗ ಭಾರತೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಜಾಗತಿಕವಾಗಿ ಗಮನ ಸೆಳೆದ ಯುವ ಪ್ರತಿಭೆಯಾಗಿದ್ದಾರೆ ಎಂದು ಡೇರಲ್ ಕೊಲಿನನ್ ಹೇಳಿದ್ದಾರೆ.
'ಕ್ರಿಕೆಟ್ ಅಸಾಧಾರಣ ಪ್ರತಿಭೆಗಳನ್ನು ಕಂಡಿದೆ. ಯುವ ಆಟಗಾರರು ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಆಗಮಿಸಿ ತಾವು ಬಯಸದ ಹಣೆಪಟ್ಟಿಗಳನ್ನು ಹೊತ್ತುಕೊಳ್ಳುವುದನ್ನು ಕಂಡಿದ್ದೇವೆ. ವೈಭವ್ ಸೂರ್ಯವಂಶಿಯ ವಯಸ್ಸು ಇನ್ನು ಕೇವಲ 15 ವರ್ಷ. ಆತ ಸಹಜ ಜೀವನ ನಡೆಸುವುದಕ್ಕಿಂತ ಭಿನ್ನ ಜೀವನವನ್ನು ನಡೆಸುತ್ತಿದ್ದಾನೆ. ತೀರಾ ತಡವಾಗುವ ಮುನ್ನವೇ ಈ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ' ಎಂದು ಕೊಲಿನನ್ ಕಿವಿಮಾತು ಹೇಳಿದ್ದಾರೆ.
'ಎಕ್ಸಾಂಗೆ ರೆಡಿಯಾಗು ಮತ್ತು ಗಲ್ಲಿ ಕ್ರಿಕೆಟ್ ಆಡು'
ನನ್ನ ಪ್ರಕಾರ ಹೇಳಬೇಕೆಂದರೆ ವೈಭವ್ ಸೂರ್ಯವಂಶಿ ಮನೆಯಲ್ಲಿದ್ದುಕೊಂಡು ಆತನ ಎಕ್ಸಾಂಗೆ ರೆಡಿಯಾಗಬೇಕು. ತಮ್ಮ ಓರಗೆಯ ಹುಡುಗರ ಜತೆ ಗಲ್ಲಿ ಕ್ರಿಕೆಟ್ ಆಡಬೇಕು. ಆತನಿಗೆ ಇನ್ನೂ ಚಿಕ್ಕ ವಯಸ್ಸು, ಹೀಗಾಗಿ ಬೆಳೆಯಲು ಸಾಕಷ್ಟು ಅವಕಾಶವಿದೆ. ಅದರರ್ಥ ಆತನ ಪ್ರತಿಭೆಯನ್ನು ಕಡೆಗಣಿಸಬೇಕು ಎಂದಲ್ಲ. ಆತನ ಸಮಗ್ರ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು. ಆತನನ್ನು ತರಾತುರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿಸಬಾರದು ಎಂದು ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.
16ನೇ ವಯಸ್ಸಿಗೆ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾಗ ಅವರ ಆರಂಭಿಕ ದಿನಗಳಲ್ಲಿ ಜವಾಬ್ದಾರಿಯುತ ವ್ಯಕ್ತಿಗಳ ಮಾರ್ಗದರ್ಶನವನ್ನು ಪಡೆದಿದ್ದರು. ಆದರೆ ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಎದುರಿಸಬೇಕಿದೆ. ಇದಕ್ಕೆ ಎಚ್ಚರಿಕೆಯ ಯೋಜನೆ ಅಗತ್ಯವಾಗಿದೆ.
ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲೂ ವೈಭವ್‌ಗಿಲ್ಲ ಸ್ಥಾನ:
ಈಗಾಗಲೇ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೈಭವ್ ಸೂರ್ಯವಂಶಿ ಇನ್ನೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ. ಐರ್ಲೆಂಡ್ ಎದುರಿನ ಮೊದಲೆರಡು ಪಂದ್ಯಗಳಲ್ಲಿ ಬಿಹಾರ ಮೂಲದ ವೈಭವ್ ಬೆಂಚ್ ಕಾಯಿಸಿದ್ದರು. ಇನ್ನು ಐರ್ಲೆಂಡ್ ಎದುರಿನ ಎರಡು ಪಂದ್ಯಗಳ ಟಿ20 ಪಂದ್ಯಗಳಲ್ಲಿ ಭಾರತದ ಅಗ್ರಕ್ರಮಾಂಕದ ಬ್ಯಾಟರ್‌ಗಳಾದ ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ವೈಭವ್‌ಗೆ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲೂ ವೈಭವ್‌ಗೆ ಅವಕಾಶ ಸಿಕ್ಕಿರಲಿಲ್ಲ. ಇಂಗ್ಲೆಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 1 ಹಾಗೂ ಇಶಾನ್ ಕಿಶನ್ ಶೂನ್ಯ ಸಂಪಾದನೆ ಮಾಡಿದ್ದರು. ಹೀಗಾಗಿ ಎರಡನೇ ಟಿ20 ಪಂದ್ಯದಲ್ಲಾದರೂ ವೈಭವ್ ಸೂರ್ಯವಂಶಿಗೆ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.


