47ನೇ ವಸಂತಕ್ಕೆ ಕಾಲಿರಿಸಿದ ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್
ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 47ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ. ವಿಶ್ವಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ಅವರ ಹುಟ್ಟುಹಬ್ಬಕ್ಕೆ ಬಿಸಿಸಿಐ ಶುಭಕೋರಿದೆ.
ಮುಂಬೈ(ಏ.24): ಕ್ರಿಕೆಟ್ ದಂತಕಥೆ, ವಾಮನಮೂರ್ತಿ, ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ತೆಂಡುಲ್ಕರ್ 47ನೇ ವಸಂತಕ್ಕೆ ಕಾಲಿರಿಸಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾದರೆ, ಸಚಿನ್ ಅದಕ್ಕೆ ದೇವರು ಎನ್ನುವ ಮಾತೊಂದಿದೆ. 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಲಿಟ್ಲ್ ಮಾಸ್ಟರ್ ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತಗೆ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಬಿಸಿಸಿಐ ವಿನೂತನವಾಗಿ ಶುಭಕೋರಿದೆ.
ಸಚಿನ್ ತೆಂಡುಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 16 ವರ್ಷದ ಹಾಲುಗಲ್ಲದ ಹುಡುಗ ಮುಂದೊಂದು ದಿನ 22 ಗಜಗಳ ಕ್ರಿಕೆಟ್ ಪಿಚ್ ಆಳುತ್ತಾನೆ ಎಂದು ಬಹುಶಃ ಯಾರಯ ಊಹಿಸಿರಲಿಕ್ಕೆ ಸಾಧ್ಯವಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ಗಳನ್ನು ಗುಡ್ಡೆಹಾಕಿದ್ದರು.
ತಮ್ಮ ಹೇರ್‌ಕಟ್ ತಾವೇ ಮಾಡಿಕೊಂಡ ಸಚಿನ್ ತೆಂಡುಲ್ಕರ್..!
ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ, ಟೆಸ್ಟ್ ಟೆಸ್ಟ್ ಪಂದ್ಯಗಳನ್ನಾಡಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆ ಸೇರಿದಂತೆ ಹಲವು ಅಪರೂಪದ ದಾಖಲೆಗಳು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿವೆ.
ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ತೆಂಡುಲ್ಕರ್:
ದೇಶಾದ್ಯಂತ ಕೊರೋನಾ ವೈರಸ್ ತಲ್ಲಣ ಮೂಡಿಸಿರುವುದರಿಂದ ಸಚಿನ್ ತೆಂಡುಲ್ಕರ್ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ.
ಇದು ಸಂಭ್ರಮಾಚರಣೆ ಮಾಡುವ ಸಮಯವಲ್ಲ. ಡಾಕ್ಟರ್ಸ್, ನರ್ಸ್, ಪ್ಯಾರಾ ಮೆಡಿಕಲ್, ಪೊಲೀಸ್ ಸಿಬ್ಬಂದಿ ಮುಂತಾದ ಕೊರೋನಾ ವಾರಿಯರ್ಸ್‌ಗೆ ಗೌರವಾರ್ಥವಾಗಿ ಸಚಿನ್ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.
ಈಗಾಗಲೇ ಸಚಿನ್ ತೆಂಡುಲ್ಕರ್ ಕೊರೋನಾ ಸಂಕಷ್ಟಕ್ಕೆ 50 ಲಕ್ಷ ರುಪಾಯಿ ದೇಣಿಗೆ ನೀಡಿದ್ದಾರೆ. ಇದಷ್ಟೇ ಅಲ್ಲದೇ 5 ಸಾವಿರ ಕುಟುಂಬಕ್ಕೆ ಪಡಿತರ ಆಹಾರ ನೀಡಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.