ಬೆಂಗಳೂರು(ಆ.16): ಎಂ .ಎಸ್.ಧೋನಿ. ಈ ಹೆಸರೇ ಸಾಕು. ಕ್ರಿಕೆಟ್ ಲೋಕದಲ್ಲಿ ಏನಿಲ್ಲವೆಂದರೂ ಹಲವು ದಶಕಗಳ ಕಾಲ ಈ ಹೆಸರು ಚಾಲ್ತಿಯಲ್ಲಿ ಇರುತ್ತದೆ. ಪ್ರತಿ ಬಾರಿ ಈ ಹೆಸರು ಕೇಳಿದಾಗಲೂ ಒಂದೊಂದು ರೋಚಕ ಪ್ರಸಂಗಗಳು, ಹುಬ್ಬೇರಿಸುವಂತಹ ಕಥೆಗಳು ನೆನಪಾಗುತ್ತವೆ. ಭಾರತೀಯ ಕ್ರಿಕೆಟ್‌ಗೆ ಎಲ್ಲವನ್ನೂ ಕೊಟ್ಟ ಧೋನಿ, ವಿಶ್ವ ಕ್ರಿಕೆಟ್‌ಗೇ ಮಾದರಿ. ಅವರೊಬ್ಬ ದಂತಕಥೆ.

"

ವಿಕೆಟ್ ಕೀಪರ್ ಆಗಿ ಭಾರತ ತಂಡಕ್ಕೆ ಕಾಲಿಟ್ಟು, ಸ್ಫೋಟಕ ಬ್ಯಾಟಿಂಗ್‌ನಿಂದ ಕ್ರಿಕೆಟ್ ಜಗತ್ತು ತಮ್ಮತ್ತ ಮುಖ ಮಾಡುವಂತೆ ಮಾಡಿ, ನಾಯಕತ್ವ ವಹಿಸಿಕೊಳ್ಳುವ ಮುನ್ನವೇ ತಂಡದಲ್ಲಿದ್ದ ದಿಗ್ಗಜ ಆಟಗಾರರ ವಿಶ್ವಾಸಗಳಿಸಿ ತಮ್ಮಲ್ಲೊಬ್ಬ ಅದ್ಭುತ ನಾಯಕನಿದ್ದಾನೆ ಎನ್ನುವುದನ್ನು ತೋರಿಸಿಕೊಟ್ಟಿದ್ದ ಧೋನಿ, ನಾಯಕನಾದ ಮೇಲೆ ಮಾಡಿದ ಸಾಧನೆಗಳನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.
ತಾನು ಬೆಳೆದು ತನ್ನೊಂದಿಗಿರುವವರನ್ನೂ ಬೆಳೆಸುವವನು ನಿಜವಾದ ನಾಯಕ. ಧೋನಿಯಿಂದಾಗಿ ಬೆಳಗುತ್ತಿರುವ ಪ್ರತಿಭೆಗಳು ಒಂದೇ ಎರಡೇ.

ಯುವ ಪೀಳಿಗೆಗೆ ಸ್ಫೂರ್ತಿ: ವಿಶ್ವದ ಶ್ರೇಷ್ಠ ನಾಯಕರ ಸಾಲಿನಲ್ಲಿ ನಿಲ್ಲುವ ಧೋನಿ, ಯುವ ಪೀಳಿಗೆಗೆ ಸ್ಫೂರ್ತಿ. ಅವರ ನಾಯಕತ್ವ ಒಂದು ಅಧ್ಯಯನದ ವಿಷಯ. ವಾಸ್ತವವಾಗಿ ಹಲವು ವಿಶ್ವ ವಿದ್ಯಾಲಯಗಳು ಧೋನಿಯ ನಾಯಕತ್ವ ಗುಣಗಳನ್ನು ಒಂದು ವಿಷಯವಾಗಿ ವಿದ್ಯಾರ್ಥಿಗಳಿಗೆ ಬೋಧಿಸಿವೆ. 2011ರಲ್ಲಿ ಬೆಂಗಳೂರಿನ ಐಎಫ್‌ಐಎಂ ವಾಣಿಜ್ಯ ಕಾಲೇಜು ತನ್ನ ಪಠ್ಯದಲ್ಲಿ ಧೋನಿ ನಾಯಕತ್ವದ ವಿಷಯವನ್ನು ಸೇರಿಸಿತ್ತು. ಕಳೆದ ಐಪಿಎಲ್ ವೇಳೆ ಮದ್ರಾಸ್ ಐಐಟಿಯ ಪ್ರಶ್ನೆ ಪತ್ರಿಕೆಯಲ್ಲಿ ಧೋನಿ ಟಾಸ್ ಗೆದ್ದರೆ ಏನು ಮಾಡಬೇಕು ಎನ್ನುವುದನ್ನು ಪಿಚ್, ಸ್ಥಳೀಯ ವಾತಾವರಣ, ಎದುರಾಳಿಯ ಬಲಾಬಲ, ಚೆನ್ನೈ ತಂಡದ ಪ್ರಾಬಲ್ಯ-ದೌರ್ಬಲ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸಿ ಎಂದು ಕೇಳಲಾಗಿತ್ತು. ಇವೆಲ್ಲವೂ ಧೋನಿಯ ನಾಯಕತ್ವ ಕ್ರಿಕೆಟ್‌ಗೆ ಮಾತ್ರ ಸೀಮಿತವಲ್ಲ, ಸಾಮಾನ್ಯರಿಗೂ ಅವರಿಂದ ಕಲಿಯುವುದಿದೆ ಎನ್ನುವುದಕ್ಕೆ ನಿದರ್ಶನ.

ಎಂ ಎಸ್ ಧೋನಿ ಸರಿಯಾಗಿ ಸಂಜೆ 7.29ಕ್ಕೆ ನಿವೃತ್ತಿ ಘೋಷಿಸಿದ್ದೇಕೆ..? ಇಲ್ಲಿದೆ ನಿಜವಾದ ಕಾರಣ

ಒಂದೇ ಯೋಜನೆಯೊಂದಿಗೆ ಆಡುವುದಕ್ಕಿಂತ ಸಮಯಕ್ಕೆ ತಕ್ಕಂತೆ ಯೋಜನೆ ಬದಲಿಸುವ ತಂತ್ರವನ್ನೂ ಧೋನಿ ಪ್ರದರ್ಶಿಸಿದ್ದಾರೆ. ಕ್ರಿಕೆಟ್‌ನಲ್ಲಿ ಪ್ಲ್ಯಾನ್ ‘ಬಿ’ನ ಮಹತ್ವವನ್ನು ಅವರಿಗಿಂತ ಚೆನ್ನಾಗಿ ತೋರಿಸಿಕೊಟ್ಟ ಮತ್ತೊಬ್ಬ ಆಟಗಾರನಿಲ್ಲ. ಇದಷ್ಟೇ ಅಲ್ಲ, ಕ್ರಿಕೆಟ್‌ನಲ್ಲಿ ವೈಯಕ್ತಿಕ ಪ್ರದರ್ಶನಕ್ಕಿಂತ ಸಂಘಟಿತ ಪ್ರದರ್ಶನ ಮುಖ್ಯ ಎನ್ನುವುದನ್ನೂ ಧೋನಿ ತೋರಿಸಿಕೊಟ್ಟಿದ್ದಾರೆ. ಪ್ರತಿ ಆಟಗಾರನ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ಸು ಸಿಗಲಿದೆ ಎನ್ನುವುದನ್ನು ಅವರು ಪ್ರತಿ ಬಾರಿಯೂ ಸಾಬೀತುಪಡಿಸಿದ್ದಾರೆ.

ಬೆಸ್ಟ್ ಫಿನಿಶರ್, ಶ್ರೇಷ್ಠ ಕೀಪರ್: ಧೋನಿ ಕ್ರೀಸ್‌ನಲ್ಲಿದ್ದಾರೆ ಎಂದರೆ ಎಷ್ಟೇ ರನ್ ಬೇಕಿದ್ದರೂ ಪಂದ್ಯ ಗೆಲ್ಲಲಿದ್ದೇವೆ ಎನ್ನುವ ನಂಬಿಕೆ ಭಾರತ ತಂಡಕ್ಕಿತ್ತು. ಏಕದಿನ ಕ್ರಿಕೆಟ್‌ನ ಯಶಸ್ವಿ ರನ್ ಚೇಸ್ ಗಳಲ್ಲಿ ಧೋನಿ ಹತ್ತಿರತ್ತಿರ 100 ಸರಾಸರಿ ಹೊಂದಿದ್ದಾರೆ. ಶ್ರೇಷ್ಠ ಫಿನಿಶರ್ ಎನ್ನಲು ಈ ಅಂಕಿ-ಅಂಶ ಸಾಕಲ್ಲವೇ. 18 ಫಿಫ್ಟಿ ಬಾರಿಸಿರುವ ಧೋನಿ, ಸುಮಾರು 2700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಇನ್ನು, ಧೋನಿ ಸ್ಟಂಪ್ಸ್ ಹಿಂದೆ ಇದ್ದಾರೆ ಎಂದರೆ ಬ್ಯಾಟ್ಸ್‌ಮನ್‌ಗಳು ಒಂದೇ ಒಂದು ಸೆಕೆಂಡ್‌ಗೂ ಕ್ರೀಸ್ ಬಿಟ್ಟು ಮುಂದೆ ಹೋಗಲು ಹೆದರುತ್ತಿದ್ದರು. ಕಾರಣ ಅವರ ಮಾಂತ್ರಿಕ ಸ್ಟಂಪಿಂಗ್. ವೇಗದ ಸ್ಟಂಪಿಂಗ್‌ನ ವಿಶ್ವ ದಾಖಲೆ ಧೋನಿ ಹೆಸರಲ್ಲೇ ಇದೆ. ಕೇವಲ 0.08 ಸೆಕೆಂಡ್ ಗಳಲ್ಲಿ ಆಸ್ಟ್ರೇಲಿಯಾದ ಜಾರ್ಜ್ ಬೇಲಿಯನ್ನು ಸ್ಟಂಪ್ ಮಾಡಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 321 ಕ್ಯಾಚ್ ಹಿಡಿದಿರುವ ಧೋನಿ, 123 ಸ್ಟಂಪಿಂಗ್ ಮಾಡಿದ್ದಾರೆ. 100ಕ್ಕೂ ಹೆಚ್ಚು ಸ್ಟಂಪ್ ಮಾಡಿದ ವಿಶ್ವದ ಏಕೈಕ ವಿಕೆಟ್ ಕೀಪರ್ ಎನ್ನುವ ದಾಖಲೆ ಅವರ ಹೆಸರಲ್ಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧೋನಿ ಒಟ್ಟು 634 ಕ್ಯಾಚ್, 195 ಸ್ಟಂಪಿಂಗ್ ಮಾಡಿದ್ದಾರೆ.

ಫಿಟ್ನೆಸ್‌ಗೆ ಹೊಸ ವ್ಯಾಖ್ಯಾನ: ಸದ್ಯ ಭಾರತೀಯ ಕ್ರಿಕೆಟ್‌ನ ಫಿಟ್ನೆಸ್ ಐಕಾನ್ ವಿರಾಟ್ ಕೊಹ್ಲಿ. ಆದರೆ ಕೊಹ್ಲಿಗೂ ಮೊದಲೇ ಫಿಟ್ನೆಸ್‌ನ ಮಹತ್ವ ತಿಳಿಸಿಕೊಟ್ಟಿದ್ದು ಧೋನಿ. 39 ವರ್ಷದ ಧೋನಿಗಿರುವ ಫಿಟ್ನೆಸ್, ಹಲವು ಯುವ ಕ್ರಿಕೆಟಿಗರಿಗೂ ಇಲ್ಲ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಧೋನಿ ರನ್ ಪಡೆಯುವಾಗ ಗಂಟೆಗೆ 31 ಕಿ.ಮೀ ವೇಗ ದಾಖಲಿಸಿದ್ದರು. ಅಲ್ಲದೆ ಎನ್‌ಸಿಎನಲ್ಲಿ ನಡೆದಿದ್ದ ಫಿಟ್ನೆಸ್ ಪರೀಕ್ಷೆಯಲ್ಲಿ 3 ರನ್‌ಗಳನ್ನು ಕೇವಲ 8.90 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿದ ದಾಖಲೆಯನ್ನೂ ಬರೆದಿದ್ದರು. 
"