Asianet Suvarna News Asianet Suvarna News

Wrist Assured: ದಿಗ್ಗಜ ಕ್ರಿಕೆಟಿಗ ಜಿಆರ್‌ ವಿಶ್ವನಾಥ್ ಆತ್ಮಕಥನ ಬಿಡುಗಡೆ

* ದಿಗ್ಗಜ ಕ್ರಿಕೆಟಿಗ ಗುಂಡಪ್ಪ ವಿಶ್ವನಾಥ್ ಅವರ ಆತ್ಮಕಥೆ ಬಿಡುಗಡೆ

* ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಲಂಚ್ ಬ್ರೇಕ್ ವೇಳೆ ಪುಸ್ತಕ ಬಿಡುಗಡೆ

* ‘ರಿಸ್ಟ್‌ ಅಶ್ಯೂರ್ಡ್‌’ ಹೆಸರಿನ ಆತ್ಮಕಥೆ ಬಿಡುಗಡೆ ಮಾಡಿದ ಕಪಿಲ್ ದೇವ್, ಸುನಿಲ್ ಗವಾಸ್ಕರ್

Legendary Cricketer GR Viswanath autobiography Wrist Assured launched during India vs Sri Lanka Pink Ball Test kvn
Author
Bengaluru, First Published Mar 13, 2022, 10:19 AM IST

ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ, ದಿಗ್ಗಜ ಬ್ಯಾಟ್ಸ್‌ಮನ್‌ ಜಿ.ಆರ್‌.ವಿಶ್ವನಾಥ್‌ರ (GR Viswanath) ಆತ್ಮಕಥನ ‘ರಿಸ್ಟ್‌ ಅಶ್ಯೂರ್ಡ್‌’ (Wrist Assured) ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ 2ನೇ ಟೆಸ್ಟ್‌ನ ಮೊದಲ ದಿನದಾಟದ ಭೋಜನ ವಿರಾಮದ ವೇಳೆ ಬಿಡುಗಡೆಗೊಂಡಿತು. ಭಾರತ ತಂಡದ ಮಾಜಿ ನಾಯಕರಾದ ಕಪಿಲ್‌ ದೇವ್‌ (Kapil Dev) ಹಾಗೂ ಸುನಿಲ್‌ ಗವಾಸ್ಕರ್‌ (Sunil Gavaskar) ಪುಸ್ತಕವನ್ನು ಅನಾವರಣಗೊಳಿಸಿದರು. 

73 ವರ್ಷದ ಗುಂಡಪ್ಪ ವಿಶ್ವನಾಥ್‌, ಭಾರತ ಪರ 91 ಟೆಸ್ಟ್‌ಗಳಲ್ಲಿ 6,080 ರನ್‌ ಕಲೆಹಾಕಿದ್ದಾರೆ. ಈ ಆತ್ಮಕಥನವನ್ನು ಹೊರತರಲು ಖ್ಯಾತ ಕ್ರಿಕೆಟ್‌ ಬರಹಗಾರ ಆರ್‌.ಕೌಶಿಕ್‌ ಸಹ ಲೇಖಕರಾಗಿ ಕಾರ‍್ಯನಿರ್ವಹಿಸಿದ್ದಾರೆ. 266 ಪುಟಗಳನ್ನು ಒಳಗೊಂಡಿರುವ ‘ರಿಸ್ಟ್‌ ಅಶ್ಯೂರ್ಡ್‌’ ಹೆಸರಿನ ಆತ್ಮಕಥೆಯು ಕ್ರಿಕೆಟ್ ಜಗತ್ತಿನ ಹಲವು ಸ್ವಾರಸ್ಯಕರ ಘಟನೆಗಳನ್ನು ಒಳಗೊಂಡಿದೆ. ಈ ಆತ್ಮಕಥೆ ಬಿಡುಗಡೆ ಸಂದರ್ಭದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರಾದ ಕಪಿಲ್ ದೇವ್, ಸುನಿಲ್ ಗವಾಸ್ಕರ್, ಸೌರವ್ ಗಂಗೂಲಿ ಹಾಗೂ ರೋಜರ್ ಬಿನ್ನಿ ಜತೆಗೆ ಟೀಂ ಇಂಡಿಯಾ ಹೆಡ್ ಕೋಚ್‌ ರಾಹುಲ್ ದ್ರಾವಿಡ್ (Rahul Dravid), ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಪಂದ್ಯದ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಕಪಿಲ್ ದೇವ್, ವಿಶ್ವನಾಥ್ ಅವರು ನನ್ನ ಪಾಲಿನ ಮೊದಲ ಹೀರೋ ಎಂದು ಬಣ್ಣಿಸಿದ್ದಾರೆ. ಜಿ.ಆರ್ ವಿಶ್ವನಾಥ್ ಅವರು ಓರ್ವ ಸುಸಂಸ್ಕೃತ ಕ್ರಿಕೆಟಿಗ. ನಾನು ಕೂಡಾ ಅವರಂತೆಯೇ ಆಗಬೇಕು ಎಂದು ಬಯಸಿದ್ದೆ. ಇವರ ಪುಸ್ತಕ 20 ವರ್ಷಗಳ ಹಿಂದೆಯೇ ಬರಬೇಕಾಗಿತ್ತು. ಅಂತೂ ಈಗಲಾದರೂ ಅವರ ಆತ್ಮಕಥೆ ಹೊರಬಂದಿರುವುದು ನನಗೆ ಖುಷಿ ಕೊಟ್ಟಿದೆ ಎಂದು ದೇಶಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಸಂತಸ ವ್ಯಕ್ತಪಡಿಸಿದ್ದಾರೆ.

India vs Sri Lanka 2nd Test ಕಪಿಲ್ ದೇವ್ ಜತೆ ಭಾರತ- ಲಂಕಾ ಟೆಸ್ಟ್ ವೀಕ್ಷಿಸಿದ ಬೊಮ್ಮಾಯಿ

ಇನ್ನು ಬಿಸಿಸಿಐ ಅಧ್ಯಕ್ಷ  ಸೌರವ್ ಗಂಗೂಲಿ (Sourav Ganguly) ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು. ತಾವು ಕ್ರಿಕೆಟ್‌ನತ್ತ ಪ್ರೇರೇಪಿತರಾಗಲೂ ವಿಶ್ವನಾಥ್ ಅವರೂ ಕೂಡಾ ಕಾರಣ ಎಂದು ಹೇಳಿದ್ದಾರೆ, ನಾನು ಐದು ವರ್ಷಕ್ಕಿಂತಲೂ ಚಿಕ್ಕವನಿರುವಾಗಲೇ ನಮ್ಮ ತಂದೆ ಈಡನ್ ಗಾರ್ಡನ್ಸ್‌ ಮೈದಾನದ ಬಗ್ಗೆ ಮಾತನಾಡುತ್ತಿದ್ದರು. ನನ್ನ ಬಾಲ್ಯದ ದಿನಗಳಲ್ಲಿ ಕಪಿಲ್ ದೇವ್ ಹಾಗೂ ಗುಂಡಪ್ಪ ವಿಶ್ವನಾಥ್ ಅವರ ಆಟವನ್ನು ನೋಡುತ್ತಾ ಬೆಳೆದೆ. ಈಗ ನಿಮ್ಮ ಜತೆ ಈ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ ಎಂದು ಟೀಂ ಇಂಡಿಯಾ (Team India) ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ 40 ವಿಕೆಟ್‌: ಜೂಲನ್‌ ಹೊಸ ದಾಖಲೆ

ಹ್ಯಾಮಿಲ್ಟನ್‌: ಭಾರತದ ಹಿರಿಯ ವೇಗಿ ಜೂಲನ್‌ ಗೋಸ್ವಾಮಿ ಶನಿವಾರ ವಿಂಡೀಸ್‌ನ ಅನಿಸಾ ಮೊಹಮದ್‌ರನ್ನು ಔಟ್‌ ಮಾಡುವ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ದಾಖಲೆ ಬರೆದರು. 22 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿನಲ್ಲಿ 5ನೇ ವಿಶ್ವಕಪ್‌ ಆಡುತ್ತಿರುವ ಜೂಲನ್‌ 40 ವಿಕೆಟ್‌ ಕಬಳಿಸಿದ್ದು, ಆಸ್ಪ್ರೇಲಿಯಾದ ಲಿನ್‌ ಫುಲ್ಸ್‌ಟನ್‌ರ 39 ವಿಕೆಟ್‌ಗಳ ದಾಖಲೆಯನ್ನು ಮುರಿದಿದ್ದಾರೆ. 

ಜೂಲನ್‌ 40 ವಿಕೆಟ್‌ ಮೈಲಿಗಲ್ಲು ತಲುಪಲು 31 ಪಂದ್ಯಗಳನ್ನು ತೆಗೆದುಕೊಂಡರು. ಫುಲ್ಸ್‌ಟನ್‌ ಕೇವಲ 20 ಪಂದ್ಯಗಳಲ್ಲಿ 39 ವಿಕೆಟ್‌ ಕಬಳಿಸಿದ್ದರು. ಇಂಗ್ಲೆಂಡ್‌ನ ಕ್ಯಾರೊಲ್‌ ಹೋಡ್ಜಸ್‌ (37 ವಿಕೆಟ್‌), ಕ್ಲೇರಿ ಟೇಲರ್‌(36) ಹಾಗೂ ಆಸ್ಪ್ರೇಲಿಯಾದ ಕ್ಯಾಥರೀನ್‌ ಫಿಟ್‌್ಜಪ್ಯಾಟ್ರಿಕ್‌(33) ನಂತರದ ಸ್ಥಾನಗಳಲ್ಲಿದ್ದಾರೆ.

ಅತಿಹೆಚ್ಚು ವಿಶ್ವಕಪ್‌ ಪಂದ್ಯಗಳಲ್ಲಿ ನಾಯಕಿ: ಮಿಥಾಲಿ ದಾಖಲೆ

ಹ್ಯಾಮಿಲ್ಟನ್‌: ಭಾರತದ ಮಿಥಾಲಿ ರಾಜ್‌ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ನಾಯಕಿಯಾದ ದಾಖಲೆ ಬರೆದಿದ್ದಾರೆ. ವಿಂಡೀಸ್‌ ವಿರುದ್ಧದ ಪಂದ್ಯ ಅವರ ನಾಯಕತ್ವದಲ್ಲಿ ಭಾರತ ಆಡಿದ 24ನೇ ಪಂದ್ಯ. 14 ಗೆಲುವು ಕಂಡಿರುವ ಮಿಥಾಲಿ, 8 ಸೋಲು ಅನುಭವಿಸಿದ್ದಾರೆ. ಒಂದು ಪಂದ್ಯದಲ್ಲಿ ಫಲಿತಾಂಶ ಹೊರಬಿದ್ದಿಲ್ಲ.  ಆಸ್ಪ್ರೇಲಿಯಾದ ಬೆಲಿಂಡಾ ಕ್ಲಾರ್ಕ್(23 ಪಂದ್ಯ) ದಾಖಲೆಯನ್ನು ಮಿಥಾಲಿ ಮುರಿದರು. 6ನೇ ಬಾರಿಗೆ ವಿಶ್ವಕಪ್‌ನಲ್ಲಿ ಆಡುತ್ತಿರುವ ಮಿಥಾಲಿ, ಈ ಸಾಧನೆ ಮಾಡಿದ ಮೊದಲ ಮಹಿಳಾ ಕ್ರಿಕೆಟರ್‌ ಎನಿಸಿದ್ದಾರೆ.
 

Follow Us:
Download App:
  • android
  • ios