Roger Federer ಖುಷಿಗೆಂದು ಟೆನಿಸ್ ಆರಂಭಿಸಿದೆ, ಕ್ರೀಡೆ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ!
ಟೆನಿಸ್ ವೃತ್ತಿಬದುಕಿಗೆ ದಿಗ್ಗಜ ಆಟಗಾರ ರೋಜರ್ ಫೆಡರರ್ ಗುಡ್ ಬೈ
ಲೆವರ್ ಕಪ್ ಟೂರ್ನಿಯಲ್ಲಿ ಕೊನೆಯ ಪಂದ್ಯವನ್ನಾಡಿದ ಟೆನಿಸ್ ದಂತಕಥೆ
ಕೇವಲ ಖುಷಿಗಾಗಿ ಟೆನಿಸ್ ಆಡಲು ಆರಂಭಿಸಿದೆ, ಕ್ರೀಡೆಯು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದ ಫೆಡರರ್
ಲಂಡನ್(ಸೆ.25): ಈ ದಿನ, ಈ ಪಂದ್ಯ ಬರಲೇ ಬೇಕಿತ್ತು. ರೋಜರ್ ಫೆಡರರ್‌ಗೆ, ಟೆನಿಸ್‌ಗೆ ಅಷ್ಟೇ ಏಕೆ ಪ್ರತಿಯೊಬ್ಬ ವೃತ್ತಿಪರ ಆಟಗಾರನ ಜೀವನದಲ್ಲಿ ಈ ದಿನ ಬಂದೇ ಬರುತ್ತದೆ. ಶುಕ್ರವಾರ ರಾತ್ರಿ ಟೆನಿಸ್ ಮಾಂತ್ರಿಕ, ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ವೃತ್ತಿಪರ ಟೆನಿಸ್‌ಗೆ ಗುಡ್‌ಬೈ ಹೇಳಿದರು. 41 ವರ್ಷದ ಫೆಡರರ್ ತಮ್ಮ ಎರಡು ದಶಕಗಳ ಪಯಣವನ್ನು 20 ಗ್ರ್ಯಾನ್ ಸ್ಲಾಂ ಟ್ರೋಫಿಗಳೊಂದಿಗೆ, ಸಾರ್ವಕಾಲಿಕ ಶ್ರೇಷ್ಠ ಟೆನಿಸಿಗರ ಪಟ್ಟಿಯಲ್ಲಿ ಸ್ಥಾನದೊಂದಿಗೆ ಮುಕ್ತಾಯಗೊಳಿಸಿದರು.
ಲೇವರ್ ಕಪ್ ಟೂರ್ನಿಯ ಡಬಲ್ಸ್‌ನಲ್ಲಿ ತಮ್ಮ ಬಹು ಕಾಲದ ಸ್ನೇಹಿತ, ಎದುರಾಳಿ ರಾಫೆಲ್ ನಡಾಲ್ ಜೊತೆ ಯುರೋಪ್ ತಂಡದ ಪರ ಕಣಕ್ಕಿಳಿದರು. ವಿಶ್ವ ತಂಡದ ಫ್ರಾನ್ಸೆಸ್ ಟಿಯಾಫೋ ಹಾಗೂ ಜ್ಯಾಕ್ ಸಾಕ್ ವಿರುದ್ಧ ಎರಡೂವರೆ ಗಂಟೆಗಳ ಸೆಣಸಾಟದಲ್ಲಿ ಸೋಲುಂಡರು.
ಈ ಪಂದ್ಯದಲ್ಲಿ ಯಾರು ಗೆದ್ದರು, ಅಂಕಿ-ಅಂಶ, ಏನು ಅಂತರ(4-6, 7-6(2), 11-9) ಯಾವುದೂ ಲೆಕ್ಕಕ್ಕಿರಲಿಲ್ಲ. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು, ಟೀವಿ, ಆನ್‌ಲೈನ್‌ನಲ್ಲಿ ವೀಕ್ಷಿಸುತ್ತಿದ್ದ ಕೋಟ್ಯಂತರ ಪ್ರೇಕ್ಷಕರು ತಮ್ಮ ನೆಚ್ಚಿನ ಆಟಗಾರನ ಆಟವನ್ನು ಕೊನೆಯ ಬಾರಿಗೆ ಕಣ್ತುಂಬಿಕೊಂಡರು. ಪಂದ್ಯಕ್ಕಿಂತಲೂ ಫೆಡರರ್‌ಗೆ ಟೆನಿಸ್‌ನ ದಿಗ್ಗಜ ಹಾಗೂ ಯುವ ಆಟಗಾರರು ಸೇರಿ ನೀಡಿದ ಬೀಳ್ಕೊಡುಗೆ ಜಗತ್ತಿನ ಗಮನ ಸೆಳೆಯಿತು. ಫೆಡರರ್‌ರನ್ನು ಗೌರವಿಸಿದ, ಅವರ ಆಟವನ್ನು ಎಷ್ಟರ ಮಟ್ಟಿಗೆ ಅವರ ಎದುರಾಳಿಗಳೂ ಮಿಸ್ ಮಾಡಿಕೊಳ್ಳಲಿದ್ದಾರೆ ಎನ್ನುವುದು ತಿಳಿಯಿತು.
ರೋಜರ್ ಫೆಡರರ್ ತಮ್ಮ ವಿದಾಯದ ಭಾಷಣದಲ್ಲಿ ತಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರ ಬಗ್ಗೆಯೂ ನೆನೆದರು. ಎಲ್ಲರಿಗೂ ಧನ್ಯವಾದ ಹೇಳಿದರು. ಬಾಲಕನಾಗಿ ಕೇವಲ ಖುಷಿಗಾಗಿ ಟೆನಿಸ್ ಆಡಲು ಆರಂಭಿಸಿದೆ, ಕ್ರೀಡೆಯು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ಖುಷಿ ಪಟ್ಟರು.
ವಿದಾಯದ ಪಂದ್ಯದಲ್ಲಿ ಕಣ್ಣೀರಿಟ್ಟ ಫೆಡರರ್-ರಾಫಾ ಜೋಡಿ; ಇದೇ ಕ್ರೀಡೆಯ ಸೊಗಸು ಎಂದ ಕಿಂಗ್ ಕೊಹ್ಲಿ
‘ಇದೊಂದು ಪರ್ಫೆಕ್ಟ್ ಜರ್ನಿ. ಅವಕಾಶ ಸಿಕ್ಕರೆ ಮತ್ತೊಮ್ಮೆ ಪ್ರಯತ್ನಿಸಲು ಇಚ್ಛಿಸುತ್ತೇನೆ. ನಾನು ನೂರಾರು ಜನರಿಗೆ ಧನ್ಯವಾದ ಹೇಳಬೇಕು. ಪ್ರಮುಖವಾಗಿ ನನ್ನ ತಾಯಿ. ಅವರೇ ನನ್ನನ್ನು ಟೆನಿಸ್‌ಗೆ ಕರೆತಂದಿದ್ದು. ನನ್ನ ಪತ್ನಿ ಹಾಗೂ ಮಕ್ಕಳು. ಹಲವು ವರ್ಷಗಳ ಹಿಂದೆಯೇ ನನ್ನ ಪತ್ನಿ ನಾನು ಆಡುವುದನ್ನು ನಿಲ್ಲಿಸಬಹುದಿತ್ತು. ಆದರೆ ಆಕೆ ನನ್ನನ್ನು ಹುರಿದುಂಬಿಸುತ್ತಾ ಬಂದಿದ್ದಾಳೆ. ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದು ಹೇಳುತ್ತಾ ಫೆಡರರ್ ಭಾವುಕರಾದರು.
ರೋಜರ್‌ರನ್ನು ಮೇಲೆತ್ತಿ ಸಂಭ್ರಮಿಸಿದ ಟೆನಿಸಿಗರು!
ನಡಾಲ್ ಮಾತ್ರವಲ್ಲ, ಫೆಡರರ್‌ಗೆ ಬೀಳ್ಕೊಡುಗೆ ನೀಡಲು 21 ಗ್ರ್ಯಾನ್ ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ಸಹ ಉಪಸ್ಥಿತರಿದ್ದರು. ತಮ್ಮ ಜೊತೆಗಿದ್ದ ಯುವ ಆಟಗಾರರಾದ ಸ್ಟೆಫಾನೋಸ್ ಸಿಟ್ಸಿಪಾಸ್, ಫ್ರಾನ್ಸೆಸ್ ಟಿಯಾಫೋ, ಮ್ಯಾಟಿಯೊ ಬೆರಟ್ಟಿನಿ, ಜ್ಯಾಕ್ ಸಾಕ್, ಕ್ಯಾಸ್ಪರ್ ರುಡ್, ಕ್ಯಾಮರೂನ್ ನೂರಿ, ಥಾಮಸ್ ಎನ್ಕಿಸ್ಟ್ ಅವರುಗಳನ್ನು ಉತ್ತೇಜಿಸಿ ಫೆಡರರ್‌ರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ನಡಾಲ್ ಹಾಗೂ ಮಾಜಿ ವಿಶ್ವ ನಂ.1 ಆ್ಯಂಡಿ ಮರ್ರೆ ಸಹ ಕೈಜೋಡಿಸಿದರು. ದಿಗ್ಗಜ ಟೆನಿಸಿಗರಾದ ರಾಡ್ ಲೇವರ್, ಸ್ಟೆಫಾನ್ ಎಡ್‌ಬಗ್‌ರ್ ಸಹ ಇದ್ದರು.ಫೆಡರರ್ ಖುಷಿಯ ಅಲೆಯಲ್ಲಿ ತೇಲಿದರು. ಬಳಿಕ ತಮ್ಮ ಸಹ ಆಟಗಾರರನ್ನು ಹಲವು ಬಾರಿ ತಬ್ಬಿಕೊಂಡು ಧನ್ಯವಾದ ಹೇಳಿದರು.
ಫೆಡರರ್ ಆಟ ನೋಡಲು ಕ್ರೀಡಾಂಗಣ ಹೌಸ್‌ಫುಲ್!
ಲೇವರ್ ಕಪ್ ಎನ್ನುವುದು ಫೆಡರರ್‌ರ ಸಂಸ್ಥೆಯೇ ನಡೆಸುವ ಖಾಸಗಿ ಟೂರ್ನಿ. ಅವರ ವಿದಾಯದ ಪಂದ್ಯವನ್ನು ವೀಕ್ಷಿಸಲು ದುಬಾರಿ ಮೊತ್ತ ನೀಡಿ ಟಿಕೆಟ್‌ಗಳನ್ನು ಖರೀದಿಸಿ ಅಭಿಮಾನಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಕ್ರೀಡಾಂಗಣ ಹೌಸ್‌ಫುಲ್ ಆಗಿತ್ತು. 17500 ಮಂದಿ ಉಪಸ್ಥಿತರಿದ್ದರು. ಕೊನೆಯಲ್ಲಿ ಫೆಡರರ್ ತಮ್ಮ ಅಭಿಮಾನಿಗಳತ್ತ ಕೈ ಬೀಸುತ್ತಾ, ಎದೆಯ ಮೇಲೆ ಕೈಯಿಟ್ಟುಕೊಂಡು ಹಲವು ಬಾರಿ ‘ಥ್ಯಾಂಕ್ಯೂ’ ಎಂದು ಹೇಳಿದರು.
ಫೆಡರರ್ ವಿದಾಯಕ್ಕೆ, ನಡಾಲ್ ಕಣ್ಣೀರು!
ಇವರಿಬ್ಬರು ಲೆಕ್ಕವಿಲ್ಲದಷ್ಟುಗಂಟೆಗಳ ಕಾಲ ಅಂಕಣದಲ್ಲಿ ಸೆಣಸಾಡಿದ್ದಾರೆ. ಒಬ್ಬರ ಮೇಲೊಬ್ಬರು ಮೇಲುಗೈ ಸಾಧಿಸಿದ್ದಾರೆ. ಇವರಿಬ್ಬರಿಗೂ ಪ್ರತ್ಯೇಕವಾಗಿ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫೆಡರರ್ 20 ಗ್ರ್ಯಾನ್ ಸ್ಲಾಂಗಳನ್ನು ಗೆದ್ದರೆ, ಅವರ ಉಗ್ರ ಪ್ರತಿಸ್ಪರ್ಧಿ ರಾಫೆಲ್ ನಡಾಲ್ ದಾಖಲೆಯ 22 ಗ್ರ್ಯಾನ್ ಸ್ಲಾಂ ಟ್ರೋಫಿಗಳಿಗೆ ಮುತ್ತಿಟ್ಟಿದ್ದಾರೆ. ಇಷ್ಟಾದರೂ ಫೆಡರರ್ ನಿವೃತ್ತಿ ಪಡೆಯುವ ವೇಳೆ ಅವರಿಗಿಂತ ಹೆಚ್ಚು ಕಣ್ಣೀರು ಹಾಕಿದ್ದು ನಡಾಲ್. ಅಂಕಣದಲ್ಲಿ ಎಷ್ಟೇ ದೊಡ್ಡ ವೈರಿಗಳಾಗಿದ್ದರೂ ಸ್ನೇಹಿತರಾಗಿಯೇ ಉಳಿಯಬಹುದು ಎನ್ನುವುದನ್ನು ಫೆಡರರ್ ಹಾಗೂ ನಡಾಲ್ ಜಗತ್ತಿಗೆ ತೋರಿಸಿಕೊಟ್ಟರು. ವೃತ್ತಿಬದುಕು, ವೈಯಕ್ತಿಕ ಬದುಕು ಎರಡೂ ಬೇರೆ ಬೇರೆ ಎನ್ನುವುದಕ್ಕೂ ಇವರಿಬ್ಬರು ನಡೆದುಕೊಂಡ ರೀತಿ ಉದಾಹರಣೆಯಾಗಿ ಉಳಿಯಲಿದೆ. ಇಬ್ಬರೂ ಕೈಹಿಡಿದು ಕಣ್ಣೀರಿಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.