ಸಿಡ್ನಿ ಟೆಸ್ಟ್: ಮಳೆ ನಡುವೆ ಮಿಂಚಿದ ಆಸೀಸ್ ಬ್ಯಾಟ್ಸ್‌ಮನ್‌ಗಳು
ಮಳೆಯ ಅಡಚಣೆಯ ನಡುವೆಯೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಭಾರತದೆದುರು ಕೊಂಚ ಮೇಲುಗೈ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿಡ್ನಿ(ಜ.07): ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿಲ್ ಪುಕೊವ್ಸಿಕ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದರೆ, ಮತ್ತೋರ್ವ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ (67*) ಸಮಯೋಚಿತ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾಗಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನ ಮಳೆಯ ಅಡಚಣೆಯ ನಡುವೆಯೂ 2 ವಿಕೆಟ್ ಕಳೆದುಕೊಂಡು 166 ರನ್ ಬಾರಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಆರಂಭದಲ್ಲೇ ಡೇವಿಡ್ ವಾರ್ನರ್ ವಿಕೆಟ್ ಕಬಳಿಸುವಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಇದಾಗಿ ಕೆಲಹೊತ್ತಿನಲ್ಲೇ ದಿಢೀರ್ ಸುರಿದ ಮಳೆಯಿಂದಾಗಿ ಒಂದು ಸೆಷನ್ ಸಂಪೂರ್ಣ ವ್ಯರ್ಥವಾಯಿತು. ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ವಿಲ್ ಪುಕೊವ್ಸಿಕ್ ಹಾಗೂ ಮಾರ್ನಸ್ ಲಬುಶೇನ್ ಸಾಕಷ್ಟು ಎಚ್ಚರಿಕೆಯ ಆಟವಾಡಿದರು. ಈ ಜೋಡಿ ಬರೋಬ್ಬರಿ 100 ರನ್‌ಗಳ ಜತೆಯಾಟವಾಡಿದರು.
ಟೆಸ್ಟ್ ವಿಶ್ವಕಪ್ ಫೈನಲ್‌ಗೆ ಭಾರೀ ಪೈಪೋಟಿ
ಸೈನಿಗೆ ವಿಲ್ ವಿಕೆಟ್: ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಿಲ್ ಪುಕೊವ್ಸಿಕ್ 110 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 62 ರನ್ ಬಾರಿಸಿದರು. ಇದರೊಂದಿಗೆ ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಸ್ಮರಣೀಯವಾಗಿಸಿಕೊಂಡರು. ಇನ್ನು ಭಾರತ ಪರ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಡೆಲ್ಲಿ ಮೂಲದ ವೇಗಿ ನವದೀಪ್ ಸೈನಿ ಭಾರತ ಎದುರು ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ವಿಲ್ ಪುಕೊವ್ಸಿಕ್ ವಿಕೆಟ್ ಕಬಳಿಸುವ ಮೂಲಕ ಟೆಸ್ಟ್‌ನಲ್ಲಿ ವಿಕೆಟ್ ಖಾತೆ ತೆರೆದರು.
ಲಬುಶೇನ್-ಸ್ಮಿತ್ ಜತೆಯಾಟದ ಕಂಟಕ: ಇನ್ನು ಮೂರನೇ ವಿಕೆಟ್‌ಗೆ ಜತೆಯಾದ ಸ್ಟೀವ್ ಸ್ಮಿತ್ ಹಾಗೂ ಲಬುಶೇನ್ ಜೋಡಿ ಮರಿಯದ 60 ರನ್‌ಗಳ ಜತೆಯಾಟವಾಡಿದ್ದಾರೆ. ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ್ದ ಲಬುಶೇನ್ 64 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ 31 ರನ್ ಬಾರಿಸಿ ಅಜೇಯರಾಗುಳಿದರೆ, ಮಾರ್ನಸ್ ಲಬುಶೇನ್ 149 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 67 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.