Asianet Suvarna News Asianet Suvarna News

ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ಭಾರೀ ಪೈಪೋಟಿ

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗಾಗಿ ಭಾರತ, ಅಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಹಲವು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

India vs New Zealand vs Australia Tight fight for ICC Test Championship final kvn
Author
Bengaluru, First Published Jan 7, 2021, 8:04 AM IST

ಬೆಂಗಳೂರು(ಜ.07): 2019-21ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವ ತಂಡಗಳು ಯಾವುವು ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ನ್ಯೂಜಿಲೆಂಡ್‌ ತವರಿನಲ್ಲಿ ನಡೆದ 4 ಪಂದ್ಯಗಳನ್ನು ಗೆದ್ದು 240 ಅಂಕಗಳನ್ನು ಸಂಪಾದಿಸಿದ್ದು, ಭಾರತ ಹಾಗೂ ಆಸ್ಪ್ರೇಲಿಯಾಗೆ ಪೈಪೋಟಿ ನೀಡುತ್ತಿದೆ.

ಕೋವಿಡ್‌-19ನಿಂದಾಗಿ ಕೆಲ ಸರಣಿಗಳು ರದ್ದಾದ ಕಾರಣ ಐಸಿಸಿ, ಫೈನಲ್‌ಗೇರಲು ಇದ್ದ ಮಾನದಂಡವನ್ನು ಬದಲಿಸಿದೆ. ಸದ್ಯ ಶೇ.76.7 ಅಂಕ ಪ್ರತಿಶತದೊಂದಿಗೆ ಆಸ್ಪ್ರೇಲಿಯಾ ಅಗ್ರಸ್ಥಾನದಲ್ಲಿದ್ದರೆ, ಶೇ.72.2 ಅಂಕ ಪ್ರತಿಶತದೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ತನ್ನೆಲ್ಲ ಪಂದ್ಯಗಳನ್ನು ಆಡಿ ಮುಗಿಸಿದ್ದು, 420 ಅಂಕಗಳೊಂದಿಗೆ ಶೇ.70 ಅಂಕ ಪ್ರತಿಶತ ಹೊಂದಿದೆ. ಸದ್ಯ ಭಾರತಕ್ಕೆ ಇನ್ನೂ 6 ಪಂದ್ಯ ಬಾಕಿ ಇದೆ. ಆಸ್ಪ್ರೇಲಿಯಾ ವಿರುದ್ಧ 2, ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ 4 ಪಂದ್ಯಗಳನ್ನು ಆಡಲಿದೆ. ಭಾರತ ವಿರುದ್ಧ ಸರಣಿ ಬಳಿಕ ಆಸ್ಪ್ರೇಲಿಯಾ ತಂಡ ದ.ಆಫ್ರಿಕಾಕ್ಕೆ ತೆರಳಲಿದ್ದು, 3 ಪಂದ್ಯಗಳನ್ನು ಆಡಲಿದೆ. ತಂಡಕ್ಕೆ ಇನ್ನೂ 5 ಪಂದ್ಯ ಬಾಕಿ ಇದೆ. ಭಾರತ ಹಾಗೂ ಆಸ್ಪ್ರೇಲಿಯಾ ಎಷ್ಟು ಗೆಲುವು ಸಾಧಿಸಲಿದೆ ಎನ್ನುವುದರ ಮೇಲೆ ಫೈನಲ್‌ಗೇರುವ ತಂಡಗಳು ನಿರ್ಧಾರವಾಗಲಿವೆ.

ಭಾರತಕ್ಕಿರುವ ಸವಾಲೇನು?: ನ್ಯೂಜಿಲೆಂಡ್‌ಗಿಂತ ಹೆಚ್ಚಿನ ಅಂಕ ಪ್ರತಿಶತ ಗಳಿಸಲು ಭಾರತ ಬಾಕಿ ಇರುವ 6 ಟೆಸ್ಟ್‌ಗಳಲ್ಲಿ ಕನಿಷ್ಠ 4ರಲ್ಲಿ ಗೆಲ್ಲಬೇಕು. ಇಲ್ಲವೇ 3ರಲ್ಲಿ ಗೆದ್ದು 3ರಲ್ಲಿ ಡ್ರಾ ಸಾಧಿಸಬೇಕು. ಆಗ ಭಾರತ ಒಟ್ಟು ಗಳಿಸಬಹುದಾಗಿದ್ದ 720 ಅಂಕಗಳಲ್ಲಿ 510 ಅಂಕ ಸಂಪಾದಿಸಿ ಶೇ.70.83 ಅಂಕ ಪ್ರತಿಶತದೊಂದಿಗೆ ಫೈನಲ್‌ ಸ್ಥಾನ ಪಡೆಯಲಿದೆ.

ಸಿಡ್ನಿ ಟೆಸ್ಟ್‌; ವಾರ್ನರ್ ಔಟ್‌, ಪಂದ್ಯಕ್ಕೆ ವರುಣನ ಅಡ್ಡಿ

ಆಸ್ಪ್ರೇಲಿಯಾಗಿರುವ ಸವಾಲೇನು?: ಆಸ್ಪ್ರೇಲಿಯಾ ಪರಿಸ್ಥಿತಿ ಸಹ ಹೆಚ್ಚೂ ಕಡಿಮೆ ಭಾರತದ ರೀತಿಯೇ ಇದೆ. ಭಾರತ ವಿರುದ್ಧ 3-1ರಲ್ಲಿ ಸರಣಿ ಗೆದ್ದರೆ, ದ.ಆಫ್ರಿಕಾ ವಿರುದ್ಧ 3 ಪಂದ್ಯಗಳಲ್ಲಿ 1 ಗೆಲುವು ಸಾಕು. ಇಲ್ಲವೇ 3ರಲ್ಲೂ ಡ್ರಾ ಮಾಡಿಕೊಂಡರೂ ಪರವಾಗಿಲ್ಲ. ಒಂದೊಮ್ಮೆ ಭಾರತ ವಿರುದ್ಧ 1-3ರಲ್ಲಿ ಸೋತರೆ, ಆಗ ನ್ಯೂಜಿಲೆಂಡ್‌ಗಿಂತ ಹೆಚ್ಚು ಅಂಕ ಪ್ರತಿಶತ ಗಳಿಸಲು ದ.ಆಫ್ರಿಕಾ ವಿರುದ್ಧ 3-0ಯಲ್ಲಿ ಗೆಲ್ಲಬೇಕು.

ಅಂಕ ಪ್ರತಿಶತ ಲೆಕ್ಕಾಚಾರ ಹೇಗೆ?

ಹೊಸ ನಿಯಮದ ಪ್ರಕಾರ ತಂಡವೊಂದು ಗಳಿಸಿರುವ ಅಂಕಗಳನ್ನು ಒಟ್ಟು ಗೆಲ್ಲಬಹುದಾಗಿದ್ದ ಅಂಕದಿಂದ ಭಾಗಿಸಿದರೆ ಬರುವ ಸಂಖ್ಯೆಯನ್ನು 100ರಿಂದ ಗುಣಿಸಲಾಗುತ್ತದೆ. ಉದಾಹರಣೆಗೆ ನ್ಯೂಜಿಲೆಂಡ್‌ ಎಲ್ಲ ಸರಣಿಗಳನ್ನು ಸೇರಿದಂತೆ ಒಟ್ಟಾರೆ 600 ಅಂಕಗಳಿಗೆ ಸ್ಪರ್ಧಿಸಿತ್ತು. ತಂಡ 420 ಅಂಕ ಗಳಿಸಿದೆ. ಹೀಗಾಗಿ ತಂಡದ ಅಂಕ ಪ್ರತಿಶತ ಶೇ.70ರಷ್ಟಿದೆ. ಯಾವ ಎರಡು ತಂಡಗಳು ಹೆಚ್ಚು ಅಂಕ ಪ್ರತಿಶತ ಹೊಂದಿರುತ್ತವೆಯೋ ಆ ತಂಡಗಳು ಜೂ.10ರಿಂದ ಆರಂಭಗೊಳ್ಳಲಿರುವ ಫೈನಲ್‌ನಲ್ಲಿ ಆಡಲಿವೆ.
 

Follow Us:
Download App:
  • android
  • ios