ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಹೆಸರು & ಲೋಗೋ ಬದಲಾವಣೆ..?
ಕಳೆದ 13 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಹೊಸ ಹೆಸರು ಹಾಗೂ ಲೋಗೋದೊಂದಿಗೆ ಕಣಕ್ಕಿಳಿಯಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಫೆ.11): ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿ ಪ್ರೀತಿ ಜಿಂಟಾ ಸಹಾ ಒಡೆತನದ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಲುಕ್‌ನೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಪಂಜಾಬ್ ಫ್ರಾಂಚೈಸಿ ತನ್ನ ತಂಡದ ಹೆಸರು ಹಾಗೂ ಲೋಗೋ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದೆ ಎಂದು ವರದಿಯಾಗಿದೆ.
13ನೇ ಆವೃತ್ತಿಯ ಟೂರ್ನಿಯಲ್ಲಿ ಹೊಸ ನಾಯಕ ಕೆ.ಎಲ್. ನಾಯಕತ್ವದಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿದಿತ್ತು. ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಮಾರ್ಗದರ್ಶನ ಸಹ ಪಂಜಾಬ್ ತಂಡಕ್ಕಿತ್ತು. ಹೀಗಿದ್ದು ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಮೊದಲಾರ್ಧದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿತ್ತು. ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೊದಲ 7 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿತ್ತು.
ಇನ್ನು ಟೂರ್ನಿಯ ದ್ವಿತಿಯಾರ್ಧದಲ್ಲಿ ಕ್ರಿಸ್ ಗೇಲ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುತ್ತಿದ್ದಂತೆಯೇ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಅದೃಷ್ಟವೇ ಬದಲಾಯಿತು. ಸತತ 5 ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ನೆಟ್ ರನ್ ರೇಟ್ ಹಿನ್ನಡೆ ಅನುಭವಿಸಿದ್ದರಿಂದ ಪ್ಲೇ ಆಫ್ ಪ್ರವೇಶಿಸುವ ಅವಕಾಶವನ್ನು ಕೆ.ಎಲ್ ರಾಹುಲ್ ಪಡೆ ಕೈಚೆಲ್ಲಿತ್ತು.
ಐಪಿಎಲ್ ಹರಾಜು 2021: ಯಾವ ಫ್ರಾಂಚೈಸಿ ಎಷ್ಟು ಆಟಗಾರರನ್ನು ಖರೀದಿಸಬಹುದು..?
ಕಿಂಗ್ಸ್ ಇಲೆವನ್ ಪಂಜಾಬ್ ಸೋಲಿಗೆ ಪ್ರಮುಖ ಕಾರಣ, ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವೈಫಲ್ಯತೆ. 13 ಪಂದ್ಯಗಳನ್ನಾಡಿದ್ದ ಮ್ಯಾಕ್ಸ್‌ವೆಲ್ ಒಂದೇ ಒಂದು ಸಿಕ್ಸರ್ ಬಾರಿಸದೇ ಕೇವಲ 108 ರನ್ ಬಾರಿಸಲಷ್ಟೇ ಶಕ್ತರಾದರು. ಇನ್ನು ಶೆಲ್ಡನ್ ಕಾಟ್ರೆಲ್, ಕೆ. ಗೌತಮ್ ಕೂಡಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಹೀಗಾಗಿ ಮುಂಬರುವ ಹರಾಜಿಗೂ ಮುನ್ನ ಈ ಎಲ್ಲಾ ಆಟಗಾರರಿಗೆ ಪಂಜಾಬ್ ಮೂಲದ ಫ್ರಾಂಚೈಸಿ ಗೇಟ್‌ಪಾಸ್ ನೀಡಿದೆ.
ಸದ್ಯ ಕಿಂಗ್ಸ್ ಇಲೆವನ್ ಪಂಜಾಬ್ ಫ್ರಾಂಚೈಸಿಯ ಖಾತೆಯಲ್ಲಿ ಅತಿಹೆಚ್ಚು ಅಂದರೆ, 53.20 ಕೋಟಿ ರುಪಾಯಿ ಹಣವಿದ್ದು, 5 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 9 ಆಟಗಾರರನ್ನು ಖರೀದಿಸಲು ಅವಕಾಶವಿದೆ.
ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಖರೀದಿಸುವ ಮೂಲಕ ಬಲಿಷ್ಠ ತಂಡವನ್ನು ಕಟ್ಟುವ ಲೆಕ್ಕಾಚಾರದಲ್ಲಿದೆ ಪ್ರೀತಿ ಜಿಂಟಾ ಪಡೆ. ಇನ್ನು ಹೊಸ ಲೋಗೋದಿಂದಾರೂ ಪಂಜಾಬ್ ತಂಡದ ಅದೃಷ್ಟ ಬದಲಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.