18ನೇ ಐಪಿಎಲ್‌ನಲ್ಲಿನ ನೀರಸ ಪ್ರದರ್ಶನದ ನಂತರ, ರಾಜಸ್ಥಾನ ರಾಯಲ್ಸ್ 2026ರ ಟೂರ್ನಿಗೆ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ ಬಳಿಕ, ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕಾರ ಅವರನ್ನು ತಂಡದ ಹೊಸ ಹೆಡ್‌ಕೋಚ್ ಆಗಿ ನೇಮಿಸಲಾಗಿದೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಪ್ಲೇ ಆಫ್‌ಗೇರಲು ವಿಫಲವಾಗಿತ್ತು. ಇದರ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಮ್ಯಾನೇಜ್‌ಮೆಂಟ್ ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ತಂಡಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಈಗಾಗಲೇ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್‌ಗೆ ಟ್ರೇಡ್ ಮಾಡಿ, ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರ್ರನ್ ಅವರನ್ನು ಕರೆ ತಂದಿರುವ ಫ್ರಾಂಚೈಸಿ, ಇದೀಗ ದಿಗ್ಗಜ ಕ್ರಿಕೆಟರ್ ಕುಮಾರ ಸಂಗಕ್ಕಾರಗೆ ತಂಡದ ಹೆಡ್‌ಕೋಚ್ ಪಟ್ಟ ಕಟ್ಟಿದೆ.
ಹೌದು, 2026ರ ಐಪಿಎಲ್ ಟೂರ್ನಿಗೆ ಕುಮಾರ ಸಂಗಕ್ಕಾರ ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ಆಗಿ ನೇಮಕವಾಗಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ಆಗಿ ನೇಮಕವಾಗಿದ್ದಾರೆ. ಆದರೆ ರಾಯಲ್ಸ್ ತಂಡವು ನೀರಸ ಪ್ರದರ್ಶನ ತೋರಿದ ಬೆನ್ನಲ್ಲೇ 18ನೇ ಆವೃತ್ತಿಯ ಐಪಿಎಲ್ ಮುಗಿಯುತ್ತಿದ್ದಂತೆಯೇ ದ್ರಾವಿಡ್ ತಮ್ಮ ಕೋಚ್ ಹುದ್ದೆಗೆ ರಾಜಿನಾಮೆ ನೀಡಿದ್ದರು. ಇದೀಗ ದ್ರಾವಿಡ್ ಸ್ಥಾನಕ್ಕೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಲಂಕಾದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕುಮಾರ ಸಂಗಕ್ಕಾರ ಅವರನ್ನು ನೇಮಕ ಮಾಡಿಕೊಂಡಿದೆ. ಈ ಹಿಂದೆ ಸಂಗಕ್ಕಾರ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಪರವಾಗಿ ಹಲವು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಕುಮಾರ ಸಂಗಕ್ಕಾರ ಹೆಗಲೇರಿದ ಮಹತ್ವದ ಜವಾಬ್ದಾರಿ!
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 2024ರ ಐಪಿಎಲ್ ಟೂರ್ನಿಯ ವೇಳೆಯಲ್ಲಿಯೇ ಕುಮಾರ ಸಂಗಕ್ಕಾರ ಅವರನ್ನು ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಿಸಿತ್ತು. ಇದೀಗ ದ್ರಾವಿಡ್ ಅವರಿಂದ ತೆರವಾದ ಕೋಚ್ ಹುದ್ದೆಗೆ ಸಂಗಕ್ಕಾರ ನೇಮಕವಾಗಿದ್ದಾರೆ. ಹೀಗಾಗಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಸಂಗಕ್ಕಾರ ರಾಜಸ್ಥಾನ ರಾಯಲ್ಸ್ ತಂಡದ ಡೈರೆಕ್ಟರ್ ಆಫ್ ಕ್ರಿಕೆಟ್ ಜತೆಗೆ ತಂಡದ ಹೆಡ್‌ಕೋಚ್ ಆಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಸಂಗಕ್ಕಾರ ಅವರನ್ನು ತಂಡದ ಹೆಡ್‌ಕೋಚ್ ಆಗಿ ನೇಮಕ ಮಾಡಿದ್ದರ ಕುರಿತಂತೆ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಸಂತಸ ವ್ಯಕ್ತಪಡಿಸಿದೆ. 'ಈ ಹಂತದಲ್ಲಿ ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಗಮನದಲ್ಲಿಟ್ಟುಕೊಂಡು ಕುಮಾರ ಸಂಗಕ್ಕಾರ ಅವರನ್ನು ತಂಡದ ಹೆಡ್‌ಕೋಚ್ ಆಗಿ ನೇಮಿಸಿದ್ದೇವೆ. ತಂಡದ ಕುರಿತಾದ ಅವರ ಒಳನೋಟ, ಅವರ ನಾಯಕತ್ವ ಗುಣ ಹಾಗೂ ರಾಯಲ್ಸ್ ಕುಟುಂಬದ ಸಂಸ್ಕೃತಿಯ ಆಳವಾದ ಪರಿಚಯ ಅವರಿಗಿದೆ. ಓರ್ವ ಲೀಡರ್ ಆಗಿ ಕುಮಾರ ಸಂಗಕ್ಕಾರ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ದಿನಗಳಲ್ಲಿ ಮಹತ್ವದ ಪಾತ್ರ ನಿಭಾಯಿಸುವ ವಿಶ್ವಾಸವಿದೆ ಎಂದು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಸ್ಥಾನ ರಾಯಲ್ಸ್ ತಂಡದ ಸಂಪೂರ್ಣ ಕೋಚಿಂಗ್ ಸ್ಟಾಫ್ ರೆಡಿ:
ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕಾರ 2021ರಿಂದ 2024ರ ವರೆಗೆ ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿಯೇ 2022ರಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಫೈನಲ್‌ಗೇರಿತ್ತು. ಇನ್ನು 2024ರ ಐಪಿಎಲ್‌ನಲ್ಲಿ ರಾಯಲ್ಸ್ ತಂಡವು ಪ್ಲೇ ಆಫ್ ಪ್ರವೇಶಿಸಿತ್ತು. ಇನ್ನು ಸಂಗಕ್ಕಾರಗೆ ಸಾಥ್ ನೀಡಲು ಮುಖ್ಯ ಸಹಾಯಕ ಕೋಚ್ ಆಗಿ ವಿಕ್ರಂ ರಾಥೋಡ್ ಅವರನ್ನು ರಾಯಲ್ಸ್ ಫ್ರಾಂಚೈಸಿ ನೇಮಿಸಿಕೊಂಡಿದೆ. ಇದರ ಜತೆಗೆ ಶೇನ್ ಬಾಂಡ್ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
