ಮಹಾರಾಜ ಟ್ರೋಫಿ: KSCA ಹೊಸ ಟಿ20 ಲೀಗ್ ಟೂರ್ನಿಗೆ ವೇಳಾಪಟ್ಟಿ ಫಿಕ್ಸ್‌

* ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಿಂದ ಹೊಸ ಮಾದರಿಯ ಟಿ20 ಲೀಗ್ ಆಯೋಜನೆ
* ‘ಮಹಾರಾಜ ಟ್ರೋಫಿ ಟಿ20’ ಟೂರ್ನಿ ಆರಂಭಿಸಲು ಕೆಎಸ್‌ಸಿಎ ಮಹತ್ವದ ತೀರ್ಮಾನ
* ಆಗಸ್ಟ್ 7ರಿಂದ 26ರ ವರೆಗೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ನಡೆಯಲಿರುವ ಟೂರ್ನಿ

KSCA to host Maharaja Trophy T20 from August 7 in Mysuru and Bengaluru kvn

ಬೆಂಗಳೂರು(ಜು.17): 8 ಆವೃತ್ತಿಗಳಲ್ಲಿ ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ಆಯೋಜಿಸಿ ಯಶಸ್ವಿಯಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಹೊಸದಾಗಿ ‘ಮಹಾರಾಜ ಟ್ರೋಫಿ ಟಿ20’ ಟೂರ್ನಿ ಆರಂಭಿಸಿದ್ದು, ಚೊಚ್ಚಲ ಆವೃತ್ತಿಯ ಟೂರ್ನಿ ಆ.7ರಿಂದ 26ರ ವರೆಗೆ ನಡೆಯಲಿದೆ. ಶನಿವಾರ ಕೆಎಸ್‌ಸಿಎದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೂರ್ನಿಯ ಟ್ರೋಫಿ ಅನಾವರಣಗೊಳಿಸಲಾಯಿತು.  ‘ಲೀಗ್‌ ಕೆಪಿಎಲ್‌ನಂತೆ ಫ್ರಾಂಚೈಸಿ ಆಧಾರಿತವಾಗಿರುವುದಿಲ್ಲ. ತಂಡದ ಮಾಲಿಕತ್ವವನ್ನು ಯಾವುದೇ ಸಂಸ್ಥೆಗಳು ವಹಿಸಿಕೊಳ್ಳಲು ಅವಕಾಶವಿಲ್ಲ. ಸಂಸ್ಥೆಗಳು ತಂಡದ ಪ್ರಾಯೋಜಕತ್ವ ಮಾತ್ರ ನೋಡಿಕೊಳ್ಳಲಿದ್ದು, ಮಾಲಿಕತ್ವವನ್ನು ಕೆಎಸ್‌ಸಿಎ ತಾನೇ ಉಳಿಸಿಕೊಳ್ಳಲಿದೆ’ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್‌ ಮೆನನ್‌ ತಿಳಿಸಿದ್ದಾರೆ. ಪ್ರತೀ ಪಂದ್ಯಗಳು ಸ್ಟಾರ್‌ ಸ್ಟೋರ್ಟ್ಸ್‌ 2, ಸ್ಟಾರ್‌ ಸ್ಪೋರ್ಟ್ಸ್ ಕನ್ನಡ ಹಾಗೂ ಫ್ಯಾನ್‌ಕೋಡ್‌ ಆ್ಯಪ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ ಎಂದಿದ್ದಾರೆ.

ಮೈಸೂರು, ಬೆಂಗಳೂರು ಆತಿಥ್ಯ

ಹೊಸ ಲೀಗ್‌ 6 ತಂಡಗಳ ಟೂರ್ನಿಯಾಗಿದ್ದು, ಮೈಸೂರು, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ರಾಯಚೂರು ಹಾಗೂ ಶಿವಮೊಗ್ಗ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಈ ತಂಡಗಳ ಪ್ರಾಯೋಜಕತ್ವವನ್ನು ವಿವಿಧ ಸಂಸ್ಥೆಗಳು ವಹಿಸಿಕೊಂಡಿವೆ. ಟೂರ್ನಿಯ ಪಂದ್ಯಗಳಿಗೆ ಮೈಸೂರು ಹಾಗೂ ಬೆಂಗಳೂರು ಆತಿಥ್ಯ ವಹಿಸಲಿವೆ. ಆರಂಭಿಕ 18 ಪಂದ್ಯಗಳು ಮೈಸೂರಿನಲ್ಲಿ ನಡೆಯಲಿದ್ದು, ಫೈನಲ್‌ ಸೇರಿದಂತೆ 16 ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಜುಲೈ 30ಕ್ಕೆ ಆಟಗಾರರ ಆಯ್ಕೆ

ಟೂರ್ನಿಗೆ ಆಟಗಾರರ ಆಯ್ಕೆ ಜುಲೈ 30ಕ್ಕೆ ನಡೆಯಲಿವೆ. ಆಟಗಾರರನ್ನು ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ಗುಂಪುಗಳಾಗಿ ವಿಂಗಡಿಸಲಾಗಿದ್ದು, ‘ಎ’ ಗುಂಪಿನ ಆಟಗಾರರು ತಲಾ 5 ಲಕ್ಷ ರುಪಾಯಿ ಪಡೆಯಲಿದ್ದಾರೆ. ‘ಬಿ’ ಗುಂಪಿಗೆ 2 ಲಕ್ಷ, ‘ಸಿ’ ಗುಂಪಿಗೆ 1 ಲಕ್ಷ ಹಾಗೂ ‘ಡಿ’ ಗುಂಪಿಗೆ 50,000 ರು. ನಿಗದಿಪಡಿಸಲಾಗಿದೆ.

ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತ ಸೆಲೆಕ್ಟರ್ ಭಾರತದಲ್ಲಿನ್ನೂ ಹುಟ್ಟಿಲ್ಲ..!

ಪಾಕ್‌ ವಿರುದ್ಧ ಟೆಸ್ಟ್‌: ಲಂಕಾ 222ಕ್ಕೆ ಆಲೌಟ್‌

ಗಾಲೆ: ದಿನೇಶ್‌ ಚಾಂಡಿಮಲ್‌(76)ರ ಹೋರಾಟದ ನೆರವಿನಿಂದ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್‌್ಸನಲ್ಲಿ ಶ್ರೀಲಂಕಾ 222 ರನ್‌ಗಳಿಗೆ ಆಲೌಟ್‌ ಆಗಿದೆ. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಲಂಕಾ, 133 ರನ್‌ಗೆ 8 ವಿಕೆಟ್‌ ಕಳೆದುಕೊಂಡಿತ್ತು. 9ನೇ ವಿಕೆಟ್‌ಗೆ ತೀಕ್ಷಣ ಜೊತೆ ಚಾಂಡಿಮಲ್‌ 44 ರನ್‌ ಜೊತೆಯಾಟವಾಡಿದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 24 ರನ್‌ ಗಳಿಸಿದ್ದು ಇನ್ನೂ 198 ರನ್‌ ಹಿನ್ನಡೆಯಲ್ಲಿದೆ.

ಕಿವೀಸ್‌ ವಿರುದ್ಧ 1 ರನ್‌ ಸೋಲುಂಡ ಐರ್ಲೆಂಡ್‌

ಡಬ್ಲಿನ್‌: ಅದ್ಭುತ ಪ್ರದರ್ಶನದ ಹೊರತಾಗಿಯೂ ನ್ಯೂಜಿಲೆಂಡ್‌ ವಿರುದ್ಧ ಕೊನೆ ಏಕದಿನ ಪಂದ್ಯದಲ್ಲಿ ಆತಿಥೇಯ ಐರ್ಲೆಂಡ್‌ 1 ರನ್‌ ವೀರೋಚಿತ ಸೋಲುಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಕಿವೀಸ್‌ 3-0 ಕ್ಲೀನ್‌ಸ್ವೀಪ್‌ ಮಾಡಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌, ಮಾರ್ಟಿನ್‌ ಗಪ್ಟಿಲ್‌(115), ಹೆನ್ರಿ ನಿಕೋಲ್ಸ್‌(79) ಅಬ್ಬರದ ನೆರವಿನಿಂದ 6 ವಿಕೆಟ್‌ಗೆ 360 ರನ್‌ ಕಲೆ ಹಾಕಿತು. ಕಠಿಣ ಗುರಿ ಬೆನ್ನತ್ತಿದರೂ ಕೊನೆ ಎಸೆತದವರೆಗೂ ಹೋರಾಡಿದ ಐರ್ಲೆಂಡ್‌ 9 ವಿಕೆಟ್‌ಗೆ 359 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಸ್ಟಿರ್ಲಿಂಗ್‌(120) ಹಾಗೂ ಹ್ಯಾರಿ ಟೆಕ್ಟರ್‌(108) ಹೋರಾಟ ವ್ಯರ್ಥವಾಯಿತು.

ಐಸಿಸಿ ಟಿ20 ವಿಶ್ವಕಪ್‌ಗೆ ನೆದರ್‌ಲೆಂಡ್ಸ್‌, ಜಿಂಬಾಬ್ವೆ

ದುಬೈ: ಈ ವರ್ಷ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ನೆದರ್‌ಲೆಂಡ್ಸ್ ಮತ್ತು ಜಿಂಬಾಬ್ವೆ ತಂಡಗಳು ಅರ್ಹತೆ ಪಡೆದಿವೆ. ಅರ್ಹತಾ ಸುತ್ತಿನ ‘ಬಿ’ ಗುಂಪಿನ ಸೆಮಿಫೈನಲ್‌ನಲ್ಲಿ ನೆದರ್‌ಲೆಂಡ್ಸ್ ತಂಡ ಅಮೆರಿಕ ವಿರುದ್ಧ, ಜಿಂಬಾಬ್ವೆ ತಂಡ ಪಪುವಾ ನ್ಯೂ ಗಿನಿ ವಿರುದ್ಧ ಗೆದ್ದು ಫೈನಲ್‌ಗೇರುವ ಮೂಲಕ ವಿಶ್ವಕಪ್‌ಗೆ ಪ್ರವೇಶ ಪಡೆದವು. ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿರುವ 16 ತಂಡಗಳು ಅಂತಿಮಗೊಂಡಿವೆ.

Latest Videos
Follow Us:
Download App:
  • android
  • ios