ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವಂತ ಸೆಲೆಕ್ಟರ್ ಭಾರತದಲ್ಲಿನ್ನೂ ಹುಟ್ಟಿಲ್ಲ..!
ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗುತ್ತಿದ್ದಾರೆ. ಇಂಗ್ಲೆಂಡ್ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ಮೊತ್ತ ಗಳಿಸಿ ಫಾರ್ಮ್‌ಗೆ ಮರಳಲಿದ್ದಾರೆ ಎನ್ನುವ ವಿಶ್ವಾಸ ಹುಸಿಯಾಗಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕುರಿತಂತೆ ಸಾಕಷ್ಟು ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದಾಗಿ ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಇನ್ನು ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಕೂಡಿಕೊಂಡರಾದರೂ, ದೊಡ್ಡ ಮೊತ್ತ ಕಲೆಹಾಕುವಲ್ಲಿ ಕೊಹ್ಲಿ ಮತ್ತೊಮ್ಮೆ ವಿಫಲವಾದರು.
Image credit: Getty
ಕ್ರಿಕೆಟ್ ಕಾಶಿ ಎನಿಸಿಕೊಂಡಿರುವ ಲಾರ್ಡ್ಸ್ ಮೈದಾನದಲ್ಲಿ ಕಿಂಗ್ ಕೊಹ್ಲಿ ಅಬ್ಬರಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 25 ಎಸೆತಗಳನ್ನು ಎದುರಿಸಿ ಕೇವಲ 16 ರನ್ ಬಾರಿಸಿ ಡೇವಿಡ್ ವಿಲ್ಲಿಗೆ ವಿಕೆಟ್ ಒಪ್ಪಿಸಿದರು.
ಇನ್ನು ಇದೇ ಜುಲೈ 22ರಿಂದ ವೆಸ್ಟ್ ಇಂಡೀಸ್ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯಿಂದ ವಿರಾಟ್ ಕೊಹ್ಲಿಗೆ ಸ್ಥಾನ ನೀಡಿಲ್ಲ. ಆದರೆ ಯಾವ ಕಾರಣಕ್ಕಾಗಿ ಕೊಹ್ಲಿ ವಿಂಡೀಸ್ ಪ್ರವಾಸದಿಂದ ಹೊರಗುಳಿದಿದ್ದಾರೆ ಎನ್ನುವ ಬಗ್ಗೆ ಬಿಸಿಸಿಐ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈಗಾಗಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಪರ ಬ್ಯಾಟ್ ಬೀಸಿದ್ದಾರೆ. ಇದಷ್ಟೇ ಅಲ್ಲದೇ ಪಾಕಿಸ್ತಾನ ನಾಯಕ ಬಾಬರ್ ಅಜಂ ಕೂಡಾ ಕೊಹ್ಲಿ ಬೆಂಬಲಕ್ಕೆ ನಿಂತಿದ್ದು, ಈ ಸಂಕಷ್ಟದ ಸಮಯ ಆದಷ್ಟು ಬೇಗ ಕಳೆದು ಹೋಗಲಿದೆ. ಸದೃಢರಾಗಿರಿ ಎಂದು ಟ್ವೀಟ್ ಮಾಡಿದ್ದರು.
ಇದೆಲ್ಲದರಾಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಪ್, ಕೊಹ್ಲಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ್ದು, ವಿರಾಟ್ ಕೊಹ್ಲಿಯನ್ನು ತಂಡದಿಂದ ಕೈಬಿಡುವ ಧೈರ್ಯ ಸದ್ಯ ಯಾರಿಗೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕಾಟ್ ಬಿಹೈಂಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ರಶೀದ್ ಲತೀಪ್, ವಿರಾಟ್ ಕೊಹ್ಲಿಯನ್ನು ಭಾರತ ತಂಡದಿಂದ ಕೈ ಬಿಡಬೇಕೇ ಎನ್ನುವ ಪ್ರಶ್ನೆಗೆ ಭಾರತದಲ್ಲಿನ್ನು ವಿರಾಟ್ ಕೊಹ್ಲಿಯನ್ನು ಕೈಬಿಡುವಂತಹ ಸೆಲೆಕ್ಟರ್ ಹುಟ್ಟಿಲ್ಲ ಎಂದು ಹೇಳಿದ್ದಾರೆ.
Image credit: Getty
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೂ 78 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ, ಕಳೆದೊಂದ ದಶಕದಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆಹಾಕಿದ್ದಾರೆ. ಆದರೆ 2019ರಿಂದೀಚೆಗೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಲು ವಿಫಲವಾಗುತ್ತಲೇ ಬಂದಿದ್ದಾರೆ.
ಕೊಹ್ಲಿ 2019ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನಲ್ಲಿ ಬಾಂಗ್ಲಾದೇಶ ವಿರುದ್ದ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಕೊನೆಯ ಬಾರಿಗೆ ಶತಕ ಸಿಡಿಸದ್ದರು. ಇದಾದ ಬಳಿಕ ಕೊಹ್ಲಿ, ಮೂರಂಕಿ ಮೊತ್ತ ದಾಖಲಿಸಲು ಪದೇ ಪದೇ ವಿಫಲವಾಗುತ್ತಿದ್ದಾರೆ.