ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದ ನಂತರ, ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಪಾಲಿಸಲು ಕೆಎಸ್‌ಸಿಎ ಬದ್ಧವಾಗಿದೆ ಎಂದು ಅನಿಲ್ ಕುಂಬ್ಳೆ ತಿಳಿಸಿದ್ದಾರೆ. 

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ನ್ಯಾ. ಕುನ್ಹಾ ಅವರ ಸಮಿತಿ ನೀಡಿರುವ ಶಿಫಾರಸುಗಳನ್ನು ಕೆಎಸ್‌ಸಿಎ ಪಾಲಿಸಲಿದೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಸಲಹಾ ಸಮಿತಿ ಸದಸ್ಯರೂ ಆಗಿರುವ ಮಾಜಿ ಕ್ರಿಕೆಟಿಗ, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಅನಿಲ್‌ ಕುಂಬ್ಳೆ ಹೇಳಿದರು. 

ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲಿಸ್ತೇವೆ:

ಶುಕ್ರವಾರ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಜೊತೆಗಿನ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರದ ಮಾರ್ಗಸೂಚಿ ಪಾಲಿಸುತ್ತೇವೆ. ಬದಲಾವಣೆಗೆ ಸ್ವಲ್ಪ ಸಮಯ ಬೇಕಿದೆ. ಕೆಎಸ್‌ಸಿಎ ಎಲ್ಲಾ ಕ್ರಮ ಕೈಗೊಳ್ಳುತ್ತಿದೆ. ಕ್ರಿಕೆಟ್‌ ಮತ್ತೆ ನಡೆಯಬೇಕು ಎನ್ನುವುದು ಎಲ್ಲರ ಬಯಕೆ’ ಎಂದರು.

ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ಪ್ರಕರಣದ ನಂತರ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿ ನಡೆಸಲು ರಾಜ್ಯ ಸರ್ಕಾರ ಮಾರ್ಗಸೂಚಿ ರೂಪಿಸಿ ಪಾಲಿಸುವಂತೆ ತಿಳಿಸಿದೆ. ಅದನ್ನು ಪಾಲಿಸಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಎಂದು ಮಾಜಿ ಕ್ರಿಕೆಟಿಕ ಅನಿಲ್‌ ಕುಂಬ್ಳೆ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲ್‌ ಕುಂಬ್ಳೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಾವಳಿ ನಡೆಯಬೇಕು ಎಂಬುದು ಎಲ್ಲರ ಬಯಕೆ. ಇನ್ನು, ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ ಆಗಬಾರದಿತ್ತು. ಹನ್ನೊಂದು ಮಂದಿ ಸಾವಿಗೀಡಾಗಿದ್ದು, ಎಲ್ಲರಿಗೂ ನೋವಿದೆ. ಹೀಗಾಗಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಿಲ್ಲಿಸೋದು ಪರಿಹಾರವಲ್ಲ. ಒಂದು ವೇಳೆ ಪಂದ್ಯಾವಳಿ ನಡೆಸಬೇಕೆಂದರೆ ಮಾರ್ಗಸೂಚಿ ಪಾಲಿಸುವಂತೆ ಸರ್ಕಾರ ತಿಳಿಸಿದೆ. ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್‌ ಅವರ ತಂಡ ಮತ್ತೆ ಪಂದ್ಯಾವಳಿ ನಡೆಸಲು ಏನೇನು ಮಾಡಬೇಕೋ ಅದನ್ನು ಮಾಡುತ್ತಾರೆ. ಮಾರ್ಗಸೂಚಿ ಪಾಲಿಸುತ್ತಾರೆ ಎಂದರು.

ಚಿನ್ನಸ್ವಾಮಿ ಕಾಲ್ತುಳಿತಕ್ಕೆ 11 ಬಲಿ

ಕಳೆದ ವರ್ಷದ ಜೂನ್ 04ರಂದು ಆರ್‌ಸಿಬಿ ಸಂಭ್ರಮಾಚರಣೆ ವೇಳೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು. ಇದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಸುರಕ್ಷತೆಯ ಕುರಿತಂತೆ ಗಂಭೀರ ಪ್ರಶ್ನೆಗಳು ಎದ್ದಿದ್ದವು. ಇನ್ನು ಇದಾದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳು ಕೂಡಾ ಬೆಂಗಳೂರಿನಿಂದ ಎತ್ತಂಗಡಿಯಾಗಿದ್ದವು. ಕಳೆದ ಮೇ ತಿಂಗಳಿನಿಂದೀಚೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ.

ಇನ್ನು ಇತ್ತೀಚೆಗಷ್ಟೇ ಆರಂಭವಾದ ವಿಜಯ್ ಹಜಾರೆ ಟ್ರೋಫಿ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂದಾಗಿತ್ತಾದರೂ, ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಮೈದಾನದಲ್ಲಿ ನಡೆಸಲಾಗಿತ್ತು.

ಇನ್ನು ಆದಷ್ಟು ಬೇಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹಳೆ ಕ್ರಿಕೆಟ್ ವೈಭವ್‌ವನ್ನು ವಾಪಾಸ್ ತರಲು ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಸದ್ಯ ಮುಂಬರುವ ಐಪಿಎಲ್ ಟೂರ್ನಿಯು ಬೆಂಗಳೂರಿನಲ್ಲಿಯೇ ಆಯೋಜನೆಯಾಗುತ್ತೋ ಅಥವಾ ಬೇರೆಡೆಗೆ ಶಿಫ್ಟ್ ಆಗುತ್ತೋ ಎನ್ನುವ ಬಗ್ಗೆ ಇನ್ನು ಯಾವುದೇ ಮಾಹಿತಿ ಸಿಕ್ಕಿಲ್ಲ.