ಬೆಂಗಳೂರು(ನ.20): ಕೊರೋನಾ ಲಾಕ್‌ಡೌನ್‌ ಬಳಿಕ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಕಿ ಉಳಿದಿದ್ದ 2 ಫೈನಲ್‌ ಪಂದ್ಯವನ್ನು ಯಶಸ್ವಿಯಾಗಿ ನಡೆಸಿದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನ.20 ರಿಂದ ಡಿ. 6ರ ವರೆಗೆ 2020-21ನೇ ಋುತುವಿನ ವೈ.ಎಸ್‌. ರಾಮಸ್ವಾಮಿ ಮೆಮೋರಿಯಲ್‌ ಏಕದಿನ ಟೂರ್ನಿಯನ್ನು ಆಯೋಜಿಸಿದೆ. ಈ ಟೂರ್ನಿಯಲ್ಲಿ ಬೆಂಗಳೂರು ಮೂಲದ 133 ಕ್ಲಬ್‌ಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಟೂರ್ನಿಯಲ್ಲಿ ಒಟ್ಟು 118 ಪಂದ್ಯಗಳು ನಡೆಯಲಿದ್ದು, ನಾಕೌಟ್‌ ಮಾದರಿಯಾಗಿದ್ದು, ಬೆಂಗಳೂರಿನ ವಿವಿಧ 20 ಮೈದಾನಗಳಲ್ಲಿ ಪಂದ್ಯ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್‌ ಮೃತ್ಯುಂಜಯ ತಿಳಿಸಿದ್ದಾರೆ. 16 ತಂಗಳು ಸೂಪರ್‌ ಲೀಗ್‌ ಹಂತ ಪ್ರವೇಶಿಸಲಿವೆ. 4 ಗುಂಪುಗಳಾಗಿ ವಿಂಗಡಿಸಲಾಗುವುದು. ಇದರಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಒಟ್ಟು 8 ಕ್ವಾರ್ಟರ್‌ಫೈನಲ್‌ಗೇರಲಿವೆ. ಬಳಿಕ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ನಡೆಯಲಿದೆ.

ರಣಜಿಗೂ ಮುನ್ನ ಸಯ್ಯದ್‌ ಮುಷ್ತಾಕ್‌ ಅಲಿ ಟಿ20?

ಕೊರೋನಾ ಬಳಿಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುತ್ತಿರುವ ಅತಿ ದೊಡ್ಡ ಕ್ರಿಕೆಟ್‌ ಟೂರ್ನಿ ಇದಾಗಿದೆ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮವನ್ನು ಅನುಸರಿಸಲಾಗಿದೆ. ಬಿಸಿಸಿಐ ನೀಡಿರುವ ಸುರಕ್ಷತಾ ಕ್ರಮಗಳನ್ನು ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ ಎಂದು ವಿನಯ್‌ ಮೃತ್ಯುಂಜಯ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.