ನವದೆಹಲಿ(ನ.17): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಜನವರಿ ಆರಂಭದಲ್ಲಿ ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ ಸಯ್ಯದ್‌ ಮುಷ್ತಾಕ್‌ ಅಲಿ ಟ್ರೋಫಿಯನ್ನು ಆರಂಭಿಸಲಿದೆ.  ರಣಜಿ ಟ್ರೋಫಿಗೂ ಮುನ್ನ ಈ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. 

ಜನವರಿ ತಿಂಗಳಲ್ಲಿ 14ನೇ ಆವೃತ್ತಿ ಐಪಿಎಲ್‌ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಸುವ ಯೋಚನೆಯನ್ನು ಹೊಂದಿದೆ. ಬಿಸಿಸಿಐ ಈಗಾಗಲೇ ಕೆಲ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಟಿ20 ಟೂರ್ನಿ ನಡೆಸುವ ಬಗ್ಗೆ ಸೂಚನೆ ನೀಡಿದ್ದು, ಮೈದಾನಗಳು ಹಾಗೂ ಐಷಾರಾಮಿ ಹೋಟೆಲ್‌ಗಳನ್ನು ಬಯೋ-ಬಬಲ್‌ ವಾತಾವರಣ ಇರಿಸುವಂತೆ ಹೇಳಿದೆ. ಕನಿಷ್ಠ 10 ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಸೂಚನೆ ನೀಡಿದೆ.

ಡಿಸೆಂಬರ್‌ನಲ್ಲಿ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ

ಮುಂಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿಸೆಂಬರ್‌ನಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಹೆಚ್ಚು ತಂಡಗಳ ಸೇರ್ಪಡೆ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. 

ಯುಎಇಯಲ್ಲಿ ಯಶಸ್ವಿ ಐಪಿಎಲ್‌ ಟೂರ್ನಿ ಆಯೋಜಿಸಲಾಗಿತ್ತು. ಇದೀಗ ದೇಶೀಯ ಲೀಗ್‌ ರಣಜಿ ಟ್ರೋಫಿ ನಡೆಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.