ಆಂಧ್ರಪ್ರದೇಶ(ಜ.18): ಎಂ.ಎಸ್.ಧೋನಿ ತಂಡದಿಂದ ದೂರ ಉಳಿದ ಬಳಿಕ ಟೀಂ ಇಂಡಿಯಾ ಮತ್ತೆ ವಿಕೆಟ್ ಕೀಪರ್ ಸಮಸ್ಯೆ ಎದುರಿಸುತ್ತಿದೆ. ರಿಷಬ್ ಪಂತ್‌ಗೆ ಆಯ್ಕೆ ಸಮಿತಿ, ಬಿಸಿಸಿಐ, ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ರಿಷಬ್ ಪಂತ್ ಬೆನ್ನಿಗೆ ನಿಂತಿದೆ. ಆದರೆ ಪಂತ್ ಮಾತ್ರ ಪಂದ್ಯದಿಂದ ಪಂದ್ಯಕ್ಕೆ ಕಳಪೆಯಾಗುತ್ತಿದ್ದಾರೆ. ಇತ್ತ ಸಂಜು ಸಾಮ್ಸನ್ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸುತ್ತಿದ್ದರೂ ಅವಕಾಶ ಸಿಗುತ್ತಿಲ್ಲ. ಸಾಮ್ಸನ್‌ ಕಡೆಗಣಿಸಲಾಗುತ್ತಿದೆ ಅನ್ನೋದಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ.

ಇದನ್ನೂ ಓದಿ: ಆಸೀಸ್‌ ವಿರುದ್ಧದ ಸೋಲಿನ ಬೆನ್ನಲ್ಲೇ ಭಾರತಕ್ಕೆ ಮತ್ತೊಂದು ಆಘಾತ..!

ಪಂತ್ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್‌ಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೂ ಪಂತ್ ಆಯ್ಕೆಯಾಗಿದ್ದರು. ಇನ್ನು ಆಸೀಸ್ ಸರಣಿಯಿಂದ ಪಂತ್ ಕೈಬಿಡಲಾಗಿತ್ತು. ಇದೀಗ ಪಂತ್ ಇಂಜುರಿಯಾಗಿ ಹೊರಬಿದ್ದ ಬೆನ್ನಲ್ಲೇ,  ಆಂಧ್ರಪ್ರದೇಶದ ಯುವ ವಿಕೆಟ್‌ಕೀಪರ್‌ ಮತ್ತು ಬ್ಯಾಟ್ಸ್‌ಮನ್‌ ಕೆ.ಎಸ್‌.ಭರತ್‌ ಭಾರತ ತಂಡ ಸೇರಿಕೊಳ್ಳುವ ಮೂಲಕ ಅಚ್ಚರಿ ಆಯ್ಕೆಗೆ ಕಾರಣರಾಗಿದ್ದಾರೆ. ಮೊದಲ ಪಂದ್ಯದ ವೇಳೆ ತಲೆಗೆ ಪೆಟ್ಟು ಬಿದ್ದ ಪರಿಣಾಮ ರಿಷಭ್‌ ಪಂತ್‌ರನ್ನು 2ನೇ ಪಂದ್ಯಕ್ಕೆ ಕೈ ಬಿಡಲಾಯಿತು. ಪಂತ್‌ ಬದಲಿಗೆ ಅಂತಿಮ 11ರಲ್ಲಿ ಮನೀಶ್‌ ಸ್ಥಾನ ಪಡೆದರು. 

ಇದನ್ನೂ ಓದಿ: 17ರ ಹರೆಯದಲ್ಲಿ ಪ್ರೀತಿ ಆರಂಭ; ರಿಷಬ್ ಪಂತ್ ಗೆಳತಿ ಬಿಚ್ಚಿಟ್ಟ ರಹಸ್ಯ!

ಮೊದಲ ಪಂದ್ಯದಲ್ಲಿ ರಾಹುಲ್‌ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಿದ್ದರು. ಹಾಗಾಗಿ ತಂಡದಲ್ಲಿ ಮತ್ತೊಬ್ಬ ಹೆಚ್ಚುವರಿ ವಿಕೆಟ್‌ ಕೀಪರ್‌ ಇರಲಿ ಎನ್ನುವ ಉದ್ದೇಶದಿಂದ ಭರತ್‌ರನ್ನು ಆಯ್ಕೆ ಮಾಡಲಾಗಿದೆ. ಸಂಜು ಸ್ಯಾಮ್ಸನ್‌ ಮತ್ತು ಇಶಾನ್‌ ಕಿಶನ್‌ ಭಾರತ ಎ ತಂಡದ ಪರ ಆಡಲು ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಭರತ್‌ ಅವರನ್ನು ಆಯ್ಕೆ ಮಾಡಿರುವುದಾಗಿ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪಂತ್‌, ಬೆಂಗಳೂರಿನ ಎನ್‌ಸಿಎ ಪುನಶ್ಚೇತನ ಶಿಬಿರದಲ್ಲಿದ್ದಾರೆ. 3ನೇ ಏಕದಿನ ಪಂದ್ಯಕ್ಕೆ ಪಂತ್‌ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.