ಬೆಂಗಳೂರು[ನ.08]: ಕರ್ನಾಟಕ ಪ್ರೀಮಿಯರ್ ಲೀಗ್[ಕೆಪಿಎಲ್] ಟಿ20 ಪಂದ್ಯಾವಳಿಯಲ್ಲಿ ನಡೆದಿದೆ ಎನ್ನಲಾಗಿರುವ ಮ್ಯಾಚ್ ಹಾಗೂ ಸ್ಪಾಟ್ ಫಿಕ್ಸಿಂಗ್  ಹಾಗೂ ಬೆಟ್ಟಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವರೆಗಿನ ಅತಿದೊಡ್ಡ ಬೇಟೆಯಾಡುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಪಿಎಲ್ ಫೈನಲ್ ಪಂದ್ಯದಲ್ಲಿ ಸೋಲಲು ಬಳ್ಳಾರಿ ಟಸ್ಕರ್ಸ್ ತಂಡದ ನಾಯಕ ಸಿ.ಎಂ. ಗೌತಮ್ ಹಾಗೂ ಆಲ್ರೌಂಡರ್ ಅಬ್ರಾರ್ ಖಾಜಿಯನ್ನು ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಭಾರತ ಎ, ರಣಜಿ, ಐಪಿಎಲ್ ಸೇರಿ ದಂತೆ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಆಡಿದ ಈ ಇಬ್ಬರ ಬಂಧನದೊಂದಿಗೆ ಕ್ರಿಕೆಟ್ ಕಳ್ಳಾಟಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯ ಬಂಧನವಾದಂತಾಗಿದೆ. 

ಕ್ರಿಕೆಟ್ ಪಂದ್ಯಾವಳಿ ಸಂದರ್ಭ ಬೆಟ್ಟಿಂಗ್ ನಡೆಸಿದ ಆರೋಪದ ಮೇರೆಗೆ ಕೆಲ ದಿನಗಳ ಹಿಂದೆ  ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲಿಕ ಅಶ್ಫಾಕ್ ಅಲಿ ತಾರಾನನ್ನು ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ  ಬೆಟ್ಟಿಂಗ್, ಫಿಕ್ಸಿಂಗ್ ಜಾಲದ ಬ್ರಹಾಂಡ  ದರ್ಶನವಾಗಿದ್ದು, ಕ್ರಿಕೆಟ್ ತಂಡವೊಂದರ ಕೋಚ್ ಹಾಗೂ ಇಬ್ಬರು ಕ್ರಿಕೆಟಿಗರನ್ನು ಬಂಧಿಸಿದ್ದರು. ತನಿಖೆ ಮುಂದುವರಿಸಿದ ಪೊಲೀಸರಿಗೆ ಕ್ರಿಕೆಟ್ ಫೈನಲ್ ಪಂದ್ಯವೂ ಫಿಕ್ಸ್ ಆಗಿರುವ ಮಾಹಿತಿ  ದೊರೆತಿದ್ದು, ಗೌತಮ್ ಹಾಗೂ ಕಾಜಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಹಾಗೂ ಕಾರು ವಶಪಡಿಸಿಕೊಳ್ಳಲಾಗಿದೆ. ಗುರುವಾರ ಮಧ್ಯಾಹ್ನ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಸಿಬಿ, ಹೆಚ್ಚಿನ ವಿಚಾರಣೆಗೆ ಏಳು ದಿನ ವಶಕ್ಕೆ ಪಡೆದಿದೆ. ವಿಚಾರಣೆಯಿಂದ ಮತ್ತಷ್ಟು ಮಾಹಿತಿ ಲಭಿಸುವ ಸಾಧ್ಯತೆಗಳಿವೆ ಎಂದು ಜಂಟಿ ಪೊಲೀಲ್ ಆಯುಕ್ತ(ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

37 ಎಸೆತಕ್ಕೆ 29 ರನ್ ಗಳಿಸಿದ್ದ ಗೌತಮ್: ಕ್ರಿಕೆಟಿಗರಾದ ಗೌತಮ್ ಹಾಗೂ ಅಬ್ರಾರ್ ಖಾಜಿ, ತಮ್ಮ ಆಟದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಕರ್ನಾಟಕ ದ ರಣಜಿ ತಂಡದ ವಿಕೆಟ್ ಕೀಪರ್ ಆಗಿದ್ದ ಗೌತಮ್, ಐಪಿಎಲ್’ನಲ್ಲಿ RCB, ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್’ ಡೆವಿಲ್ಸ್ ತಂಡಗಳಲ್ಲಿ ಆಡಿದ್ದರು. ಈ ಹಿಂದೆ ಕರ್ನಾಟಕ ರಣಜಿ ತಂಡದ ಸದಸ್ಯರಾಗಿದ್ದ ಅಬ್ರಾರ್ ಖಾಜಿ, ಪ್ರಸುತ್ತ ಮಿಜೋರಂನ ಪ್ರಮುಖ ಆಲ್ರೌಂಡರ್ ಆಗಿದ್ದಾರೆ  ಗೌತಮ್  ಬ್ಯಾಂಕ್ ಉದ್ಯೋಗಿಯಾಗಿದ್ದು, ತಮ್ಮ ಕುಟುಂಬದ ಜೊತೆ  ದೊಮ್ಮಲೂರಿನಲ್ಲಿ ನೆಲೆಸಿದ್ದರು. ಕೆಪಿಎಲ್’ನಲ್ಲಿ ಬಳ್ಳಾರಿ ತಂಡದ ನಾಯಕ ಗೌತಮ್ ಹಾಗೂ ಖಾಜಿ ಅವರಿಗೆ ಹಣದಾಸೆ ತೋರಿಸಿ ತನ್ನ ಸ್ನೇಹದ ಬಲೆಗೆ ಬೀಳಿಸಿಕೊಂಡ  ಬೆಳಗಾವಿ ತಂಡದ ಮಾಲಿಕ ಅಶ್ಫಾಕ್ ಅಲಿ, ಬಳಿಕ ಆ ಇಬ್ಬರು ಆಟಗಾರರನ್ನು  ಬೆಟ್ಟಿಂಗ್ ಖೆಡ್ಡಾಕ್ಕೆ ಕೆಡವಿದ್ದಾನೆ. ಅಶ್ಫಾಕ್ ಅಲಿ ಮೂಲಕವೇ ಈ ಇಬ್ಬರು ಆಟಗಾರರಿಗೆ ಬುಕ್ಕಿಗಳ ಪರಿಚಯವಾಗಿದೆ. ಅದರಂತೆ ಇದೇ ವರ್ಷದ ಜುಲೈನಲ್ಲಿ ಮುಕ್ತಾಯವಾದ ಕೆಪಿಎಲ್ ಟೂರ್ನಿಯ ಕೆಲ ಪಂದ್ಯಾವಳಿಗಳಲ್ಲಿ ಗೌತಮ್ ಹಾಗೂ ಖಾಜಿ ಫಿಕ್ಸ್ ಆಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

KPL ಮ್ಯಾಚ್ ಫಿಕ್ಸಿಂಗ್: RCB ಮಾಜಿ ಕ್ರಿಕೆಟಿಗ ಸೇರಿ ಇಬ್ಬರು ಸ್ಟಾರ್ ಆಟಗಾರರು ಅರೆಸ್ಟ್..!

ಕೆಪಿಎಲ್ ಟೂರ್ನಿಯ ಫೈನಲ್’ನಲ್ಲಿ ಹುಬ್ಬಳ್ಳಿ ಮತ್ತು ಬಳ್ಳಾರಿ ತಂಡಗಳು ಮುಖಾಮುಖಿಯಾಗಿದ್ದವು. ಆಗ ಸ್ಫಾಟ್ ಫಿಕ್ಸಿಂಗ್ ಮಾಡಿಕೊಂಡಿದ್ದ ಗೌತಮ್ ಹಾಗೂ ಖಾಜಿ, ಆ ಪಂದ್ಯದಲ್ಲಿ  ನಿಧಾನಗತಿಯ ಆಟವಾಡಿ ಪಂದ್ಯದ ಸೋಲಿಗೆ ಕಾರಣರಾಗಿದ್ದರು. ಇದಕ್ಕೆ ಪ್ರತಿಯಾಗಿ ಬುಕ್ಕಿಯಿಂದ ಅವರಿಬ್ಬರಿಗೂ ಸೇರಿ ₹20 ಲಕ್ಷ ಸಂದಾಯವಾಗಿತ್ತು. ಅಲ್ಲದೆ, ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಒಂದು ಓವರ್’ನಲ್ಲಿ ಹೆಚ್ಚಿಗೆ ರನ್ ನೀಡಲು ₹5 ಲಕ್ಷವನ್ನು ಖಾಜಿ ಪಡೆದಿದ್ದ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ವಿವರಿಸಿದ್ದಾರೆ.

ಫೈನಲ್’ನಲ್ಲಿ ಆರಂಭಿಕ  ದಾಂಡಿಗನಾಗಿ ಅಖಾಡಕ್ಕಿಳಿದಿದ್ದ ಗೌತಮ್, 37 ಚೆಂಡುಗಳನ್ನು ಎದುರಿಸಿ 29 ರನ್ ಬಾರಿಸಿದ್ದರು. ಆಲ್ರೌಂಡರ್ ಖಾಜಿ, 4 ಓವರ್ ಬೌಲಿಂಗ್ ಮಾಡಿ 26 ರನ್  ನೀಡಿ ಒಂದು ವಿಕೆಟ್ ಪಡೆದಿದ್ದ. ಅಲ್ಲದೆ  ಬ್ಯಾಟಿಂಗ್’ನಲ್ಲಿ 16 ರನ್ ಗಳಿಸಿ ರನ್ ಔಟ್ ಆಗಿದ್ದ. ಈ ಪಂದ್ಯಾವಳಿಯ ವಿಡಿಯೋ ವೀಕ್ಷಿಸಿದಾಗ ಇಬ್ಬರು ಆಟಗಾರರ ನಡವಳಿಕೆ ಮೇಲೆ ಅನುಮಾನ ಮೂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.