3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್ ಕ್ರಿಕೆಟಿಗರ ಹನಿಟ್ರ್ಯಾಪ್!
3 ಪ್ರಸಿದ್ಧ ಚಿತ್ರನಟಿಯರ ಬಳಸಿ ಕೆಪಿಎಲ್ ಕ್ರಿಕೆಟಿಗರ ಹನಿಟ್ರ್ಯಾಪ್!| ಗ್ಲಾಮರ್ ಗೊಂಬೆಗಳ ಬಳಸಿದ್ದ ಬುಕಿಗಳು| ಕ್ರಿಕೆಟಿಗರ ಕೊಠಡಿಗೂ ಹೋಗಿದ್ದ ನಟಿಯರು| ಶೀಘ್ರ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಬುಲಾವ್: ಬೆಂಗಳೂರು ಪೊಲೀಸ್ ಆಯುಕ್ತ
ಬೆಂಗಳೂರು[ಡಿ.05]: ಕೆಪಿಎಲ್ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಹಗರಣದ ಕಬಂಧ ಬಾಹುಗಳು ಕನ್ನಡ ಚಿತ್ರರಂಗಕ್ಕೂ ವ್ಯಾಪಿಸಿದ್ದು, ತಮ್ಮ ಬಲೆಗೆ ಆಟಗಾರರನ್ನು ಬೀಳಿಸಿಕೊಳ್ಳಲು ಬುಕ್ಕಿಗಳು ಮೂವರು ಖ್ಯಾತ ನಟಿಯರನ್ನು ‘ಹನಿಟ್ರ್ಯಾಪ್’ನಲ್ಲಿ ಬಳಸಿದ್ದಾರೆ ಎಂದು ಸಿಸಿಬಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಶಂಕೆ ಹಿನ್ನೆಲೆಯಲ್ಲಿ ಪ್ರಕರಣದ ಸಂಬಂಧ ಮೂವರು ನಟಿಯರಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ತನ್ಮೂಲಕ ಕೆಪಿಎಲ್ ತಂಡಗಳ ಮಾಲಿಕರ ಜತೆ ಆತ್ಮೀಯ ಸ್ನೇಹ ಹೊಂದಿದ್ದ ಚಲನಚಿತ್ರ ರಂಗದ ಗ್ಲಾಮರಸ್ ನಟಿಯರಿಗೆ ಸಿಸಿಬಿ ತನಿಖೆ ಸಂಕಷ್ಟಎದುರಾಗಿದೆ.
ಕೆಪಿಎಲ್ ಪಂದ್ಯಗಳು ಮುಗಿದ ನಂತರ ಆಟಗಾರರ ಜತೆ ಕೆಲ ನಟಿಯರು ಕಾಣಿಸಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆಟಗಾರರ ಜೊತೆ ಹೊಂದಿರುವ ಸ್ನೇಹದ ಕುರಿತು ಅವರನ್ನು ಪ್ರಶ್ನಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಹಿರೋಯಿನ್‌ಗಳು ಬೆರಳೆಣಿಕೆಯಷ್ಟುಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಅವರ ಜೀವನಶೈಲಿ ಮಾತ್ರ ದುಬಾರಿಯಾಗಿದೆ. ಬೆಂಟ್ಲಿ, ಆಡಿ ಕಾರ್‌ಗಳಲ್ಲಿ ನಟಿಯರು ಓಡಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದರ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತದೆ ಎಂದು ತೀಕ್ಷ್ಣವಾಗಿ ಹೇಳಿದರು.
ಕೆಪಿಎಲ್ ಪಂದ್ಯಗಳು ಮುಗಿದ ನಂತರ ಆಟಗಾರರಿಗೆ ರಾತ್ರಿ ಔತಣ ಕೂಟಗಳನ್ನು ತಂಡಗಳ ಮಾಲಿಕರು ಆಯೋಜಿಸುತ್ತಿದ್ದರು. ಆ ಪಾರ್ಟಿಗಳಲ್ಲಿ ಆಟಗಾರರೊಂದಿಗೆ ನಟಿಯರು ಕಾಣಿಸಿಕೊಂಡಿದ್ದಾರೆ. ಆಟಗಾರರ ಕೊಠಡಿಗೆ ಸಹ ಕೆಲ ನಟಿಯರು ಹೋಗಿರುವ ಮಾಹಿತಿ ಇದೆ. ಹೀಗಾಗಿ ಆ ರಾತ್ರಿ ಪಾರ್ಟಿಗಳಲ್ಲಿ ಏನಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಆಯುಕ್ತರು ಸ್ಫೋಟಕ ಮಾಹಿತಿ ಹೊರ ಹಾಕಿದರು.
ಈ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ನಟಿಯರಿಗೆ ನೋಟಿಸ್ ನೀಡಿ ವಿಚಾರಣೆ ಕರೆಯಲಾಗುತ್ತದೆ. ಆಟಗಾರರೊಂದಿಗಿನ ಸ್ನೇಹದ ಕುರಿತು ಅವರು ವಿವರ ನೀಡಿದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ. ಎರಡ್ಮೂರು ಸಿನಿಮಾ ಮಾಡಿದ ತಕ್ಷಣ ಅಷ್ಟೊಂದು ಹಣ ಮಾಡಲು ಸಾಧ್ಯವೇ ಎಂದು ಖಾರವಾಗಿ ಪ್ರಶ್ನಿಸಿದರು.
ಸ್ವಯಂ ತಪ್ಪು ಒಪ್ಪಿದರೆ ಮಾಫಿ:
ಮೋಸದಾಟದ ಸುಳಿಯಲ್ಲಿ ಸಿಲುಕಿರುವ ಆಟಗಾರರಿಗೆ ಗಂಡಾಂತರದಿಂದ ತಪ್ಪಿಸಿಕೊಳ್ಳಲು ಸುವರ್ಣಾವಕಾಶ ನೀಡಿರುವ ಪೊಲೀಸರು, ತಪ್ಪು ಮಾಡಿರುವುದನ್ನು ಸ್ವಯಂ ಒಪ್ಪಿದರೆ ಪ್ರಕರಣದಲ್ಲಿ ಅಪ್ರೂವರ್‌ಗಳು (ಸಾಕ್ಷಿಗಳು) ಎಂದು ಪರಿಗಣಿಸಲು ನಿರ್ಧರಿಸಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಾಕಷ್ಟುಮಂದಿ ಪಾಲ್ಗೊಂಡಿದ್ದಾರೆ. ಪ್ರತಿಯೊಬ್ಬರ ಬಗ್ಗೆ ಮಾಹಿತಿ ಕೆದಕಿ ಸಾಕ್ಷ್ಯ ಸಮೇತ ಕಾನೂನು ಪ್ರಕ್ರಿಯೆಗೊಳಪಡಿಸಲಾಗುತ್ತಿದೆ. ತಪ್ಪು ಮಾಡಿದ್ದರೆ ಅಂಥವರು ಸ್ವಯಂ ತನಿಖೆಗೆ ಸಹಕರಿಸಿದರೆ ಅಪ್ರೂವರ್‌ಗಳೆಂದು ಪರಿಗಣಿಸಲಾಗುತ್ತದೆ ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ನಿಮ್ಮ ಮನೆಗಳಿಗೆ ಪೊಲೀಸರು ಹುಡುಕಿಕೊಂಡು ಬರುವುದನ್ನು ತಡೆಯಿರಿ. ಯಾವುದೇ ಕಾರಣಕ್ಕೂ ತಪ್ಪು ಮಾಡಿದವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈಗಲಾದರೂ ಆಟಗಾರರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಅಲಿ-ರೆಡ್ಡಿ ಬಲೆಯಲ್ಲಿ ನಟಿಯರು!
ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧಿತನಾಗಿರುವ ಬೆಳಗಾವಿ ತಂಡದ ಮಾಲಿಕ ತಾರಾ ಅಶ್ಫಾಕ್ ಅಲಿ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬಳ್ಳಾರಿ ತಂಡದ ಮಾಲಿಕ ಅರವಿಂದ ರೆಡ್ಡಿ ಅವರ ಸಂಪರ್ಕ ಕೊಂಡಿಗಳನ್ನು ಸಿಸಿಬಿ ಶೋಧಿಸಿದಾಗ ನಟಿಯರ ನಂಟು ಬೆಳಕಿಗೆ ಬಂದಿದೆ ಎಂದು ತಿಳಿದುಬಂದಿದೆ.
ಕೆಪಿಎಲ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಅಲಿ ಮತ್ತು ರೆಡ್ಡಿ ಪ್ರಮುಖ ಆರೋಪಿಗಳಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಬುಕ್ಕಿ ಸಯ್ಯಾಂ ಜತೆ ಸ್ನೇಹ ಹೊಂದಿದ್ದ ಈ ಮಾಲಿಕರು, ತಮ್ಮ ಬಲೆಗೆ ಆಟಗಾರರನ್ನು ಬೀಳಿಸಿಕೊಳ್ಳಲು ಚಿತ್ರರಂಗದ ನಟಿಯರನ್ನು ಉಪಯೋಗಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಪಂದ್ಯಗಳು ಮುಗಿದ ನಂತರ ರಾತ್ರಿ ಪಾರ್ಟಿಗಳಿಗೆ ನಟಿಮಣಿಯರನ್ನು ಮಾಲಿಕರೇ ಆಹ್ವಾನಿಸುತ್ತಿದ್ದರು. ಈ ವೇಳೆ ಆಟಗಾರರಿಗೆ ನಟಿಯರನ್ನು ಪರಿಚಯಿಸುತ್ತಿದ್ದ ಬುಕ್ಕಿಗಳು, ಅವರ ಮಧ್ಯೆ ಸಲುಗೆ ಬೆಳೆಸಲು ಯತ್ನಿಸುತ್ತಿದ್ದರು. ಪಾರ್ಟಿ ಮತ್ತಿನಲ್ಲಿ ಆಟಗಾರರು ನಟಿಯರ ಮೋಹದ ಬಲೆಗೆ ಸುಲಭವಾಗಿ ಬಿದ್ದಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ.
ಹೀರೋಯಿನ್‌ಗಳಿಗೆ ಬೆಂಟ್ಲಿ, ಆಡಿ ಕಾರು ಎಲ್ಲಿಂದ ಬಂತು?
ಕೆಲ ಹೀರೋಯಿನ್‌ಗಳು ಬೆರಳೆಣಿಕೆಯಷ್ಟುಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಆದರೆ ಅವರ ಜೀವನಶೈಲಿ ಮಾತ್ರ ದುಬಾರಿಯಾಗಿದೆ. ಬೆಂಟ್ಲಿ, ಆಡಿ ಕಾರ್‌ಗಳಲ್ಲಿ ನಟಿಯರು ಓಡಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದರ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತದೆ.
- ಭಾಸ್ಕರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ