ಐಪಿಎಲ್‌ನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದನ್ನೂ ಗೆಲ್ಲದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೊದಲ ಗೆಲುವಿನ ಹುಡುಕಾಟದಲ್ಲಿದ್ದು, ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಲಿದೆ. ಮೊಹಮ್ಮದ್ ಶಮಿಯ ಮಾರಕ ದಾಳಿಯ ಭೀತಿಯಲ್ಲಿರುವ ಕೆಕೆಆರ್‌ಗೆ ಈ ಪಂದ್ಯ ಸವಾಲಾಗಿದ್ದು, ಲಖನೌ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಕೋಲ್ಕತಾ: ಈ ಬಾರಿ ಐಪಿಎಲ್‌ನಲ್ಲಿ ಆಡಿರುವ 3 ಪಂದ್ಯಗಳ ಪೈಕಿ ಒಂದರಲ್ಲೂ ಗೆಲ್ಲದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಮೊದಲ ಗೆಲುವಿನ ಹುಡುಕಾಟದಲ್ಲಿದ್ದು, ಗುರುವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಸೆಣಸಾಡಲಿದೆ. ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ಟೂರ್ನಿಯಲ್ಲಿ ಮುಂಬೈ, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತಿದೆ. ಪಂಜಾಬ್‌ ವಿರುದ್ಧ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮತ್ತೊಂದೆಡೆ ಲಖನೌ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ದರೂ ಬಳಿಕ ಸನ್‌ರೈಸರ್ಸ್‌ ವಿರುದ್ಧ ಜಯಗಳಿಸಿದೆ. ತಂಡ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಶಮಿ ಭೀತಿಯಲ್ಲಿದೆ ಕೋಲ್ಕತಾ ನೈಟ್ ರೈಡರ್ಸ್

ಕೆಕೆಆರ್‌ಗೆ ಈ ಬಾರಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ವಿಫಲವಾಗಿದೆ. ತಂಡದ ಬ್ಯಾಟಿಂಗ್‌ ವಿಭಾಗ ಸ್ವಲ್ಪಮಟ್ಟಿಗೆ ಉತ್ತಮವಾಗಿದ್ದರೂ, ಗುರುವಾರ ಮೊಹಮ್ಮದ್‌ ಶಮಿ ದಾಳಿಯನ್ನು ಹೇಗೆ ಎದುರಿಸಲಿದೆ ಎಂಬ ಕುತೂಹಲವಿದೆ. ಶಮಿ ಸನ್‌ರೈಸರ್ಸ್‌ ವಿರುದ್ಧ 4 ಓವರ್‌ನಲ್ಲಿ ಕೇವಲ 9 ರನ್‌ ನೀಡಿದ್ದರು. ಇನ್ನು, ಈ ಪಂದ್ಯದಲ್ಲಿ ಕ್ಯಾಮರೂನ್‌ ಗ್ರೀನ್‌ ಬೌಲ್‌ ಮಾಡುವ ಸಾಧ್ಯತೆಯಿದ್ದು, ಕೆಕೆಆರ್‌ಗೆ ಬಲ ತಂದುಕೊಡಲಿದೆ.

ಮತ್ತೊಂದೆಡೆ, ರಿಷಭ್‌ ಪಂತ್‌ ನಾಯಕತ್ವದ ಲಖನೌ ತಂಡ ವಿದೇಶಿ ಬ್ಯಾಟರ್‌ಗಳ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದೆ. ಆದರೆ ನಿಕೋಲಸ್‌ ಪೂರನ್‌, ಮಿಚೆಲ್‌ ಮಾರ್ಷ್‌ ಇನ್ನಷ್ಟೇ ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ.

ಪಂದ್ಯ: ಸಂಜೆ 7.30ಕ್ಕೆ

ಒಟ್ಟು ಮುಖಾಮುಖಿ: 06

ಕೋಲ್ಕತಾ: 2

ಲಖನೌ: 4

--

ಸಂಭಾವ್ಯ ಆಟಗಾರರು

ಕೋಲ್ಕತಾ ನೈಟ್ ರೈಡರ್ಸ್: ಫಿನ್‌ ಆ್ಯಲೆನ್‌, ಅಜಿಂಕ್ಯ ರಹಾನೆ(ನಾಯಕ), ಕ್ಯಾಮರೋನ್ ಗ್ರೀನ್‌, ಅಂಗ್‌ಕೃಷ್ ರಘುವಂಶಿ, ರೋವ್ಮನ್ ಪೊವೆಲ್‌, ರಿಂಕು ಸಿಂಗ್‌, ಸುನಿಲ್ ನರೈನ್‌, ರಮನ್‌ದೀಪ್ ಸಿಂಗ್, ಅನುಕೂಲ್‌ ರಾಯ್, ನವ್‌ದೀಪ್‌ ಸೈನಿ, ವೈಭವ್‌ ಅರೋರ.

ಲಖನೌ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್‌, ಏಯ್ಡನ್ ಮಾರ್ಕ್‌ರಮ್‌, ರಿಷಭ್‌ ಪಂತ್(ನಾಯಕ), ನಿಕೋಲಸ್ ಪೂರನ್‌, ಅಬ್ದುಲ್ ಸಮದ್‌, ಮುಕುಲ್‌, ಎಂ ಸಿದ್ಧಾರ್ಥ್‌, ಆವೇಶ್‌ ಖಾನ್‌, ಮೊಹಮ್ಮದ್ ಶಮಿ, ದಿಗ್ವೇಶ್‌ ರಾಥಿ, ಪ್ರಿನ್ಸ್‌ ಯಾದವ್‌.

ಐಪಿಎಲ್‌ನಲ್ಲಿ ಆಟಗಾರರಿಗೆ ಕಟ್ಟುನಿಟ್ಟಿನ ನಿಯಮ ಜಾರಿ

ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಬಿಸಿಸಿಐ ಮತ್ತಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ತಂಡಗಳಿಗೆ ಸ್ಪಷ್ಟ ನಿರ್ದೇಶನವನ್ನು ನೀಡಿದ್ದು, ತಪ್ಪದೆ ಪಾಲಿಸುವಂತೆ ಸೂಚಿಸಿದೆ.

ಬೆಂಚ್‌ನಲ್ಲಿರುವ ಆಟಗಾರರು ಪಂದ್ಯದ ಸಮಯದಲ್ಲಿ ಬೌಂಡರಿ ಲೈನ್‌ ಬಳಿ ಅತ್ತಿತ್ತ ಓಡಬಾರದು. ಟಾಸ್‌ ವೇಳೆ ಹೆಸರು ನೀಡಲಾದ 16 ಆಟಗಾರರು ಮಾತ್ರ ಮೈದಾನ ಪ್ರವೇಶಿಸಬಹುದು. ಆಡುವ 11ರ ಹೊರತಾಗಿ ಉಳಿದ 5 ಮಂದಿ ಮಾತ್ರ ಪಂದ್ಯದ ಸಮಯದಲ್ಲಿ ಡ್ರಿಂಕ್ಸ್‌, ಬ್ಯಾಟ್‌, ಸಂದೇಶಗಳೊಂದಿಗೆ ಮೈದಾನ ಪ್ರವೇಶಿಸಲು ಅವಕಾಶವಿದೆ. ಇತರರು ಡಗೌಟ್‌ನಲ್ಲೇ ಇರಬೇಕಾಗುತ್ತದೆ ಎಂದು ಬಿಸಿಸಿಐ ನಿರ್ದೇಶಿಸಿದೆ. ಐಪಿಎಲ್‌ನಲ್ಲಿ ತಂಡವೊಂದರಲ್ಲಿ ಗರಿಷ್ಠ 25 ಮಂದಿ ಇರಬಹುದು. ಈ ಪೈಕಿ 16 ಮಂದಿ ಮಾತ್ರ ಅಧಿಕೃತವಾಗಿ ಪಂದ್ಯದ ಭಾಗವಾಗಿರುತ್ತಾರೆ.