ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಗೆಳತಿ ಮಾಹಿಕಾ ಶರ್ಮಾ ಅವರ ಫೋಟೋವನ್ನು ಕೆಟ್ಟದಾಗಿ ಕ್ಲಿಕ್ಕಿಸಿದ್ದಕ್ಕೆ ಪಾಪರಾಜಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ಅವರು, ಪ್ರತಿಯೊಬ್ಬ ಮಹಿಳೆಗೂ ಗೌರವ ಸಿಗಬೇಕು ಎಂದು ಆಗ್ರಹಿಸಿದ್ದಾರೆ.
ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಗೆಳತಿ ಮಾಹಿಕಾ ಶರ್ಮಾ ವಿಚಾರವಾಗಿ ಸದಾ ಚರ್ಚೆಯಲ್ಲಿರುತ್ತಾರೆ. ನಟಿ ಮಾಹಿಕಾ ಅವರ ವಿಡಿಯೋವೊಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅವರು ಮುಜುಗರದ ಕ್ಷಣಕ್ಕೆ ಗುರಿಯಾಗಿದ್ದರು. ಈಗ ಅವರ ಬಾಯ್‌ಫ್ರೆಂಡ್ ಹಾರ್ದಿಕ್, ನಟಿಯ ಫೋಟೋವನ್ನು ಕೆಟ್ಟದಾಗಿ ಕ್ಲಿಕ್ಕಿಸಿದ್ದಕ್ಕೆ ಪಾಪರಾಜಿಗಳ ಮೇಲೆ ಗರಂ ಆಗಿದ್ದಾರೆ. ಪಾಂಡ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಪ್ರತಿಯೊಬ್ಬ ಮಹಿಳೆಗೂ ಗೌರವ ಸಿಗಬೇಕು ಎಂದು ಹೇಳಿದ್ದಾರೆ. ಹಾರ್ದಿಕ್ ಪಾಪರಾಜಿಗಳಿಗೆ ಮಾನವೀಯತೆ ಉಳಿಸಿಕೊಳ್ಳುವಂತೆ ಹೇಳಿದ್ದಾರೆ.
ಪಾಪರಾಜಿಗಳ ಕ್ಲಾಸ್ ತೆಗೆದುಕೊಂಡ ಹಾರ್ದಿಕ್
ಹಾರ್ದಿಕ್ ಪಾಂಡ್ಯ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೀಗೆ ಬರೆದಿದ್ದಾರೆ, ಜನರ ಕಣ್ಣಲ್ಲಿ ಇರುವುದರಿಂದ ಗಮನ ಬೇಕಾಗುತ್ತದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇದು ನಾನು ಆರಿಸಿಕೊಂಡ ಜೀವನದ ಒಂದು ಭಾಗ. ಆದರೆ ಇಂದು ನಡೆದ ಘಟನೆ ಎಲ್ಲಾ ಎಲ್ಲೆಗಳನ್ನು ಮೀರಿದೆ. ಮಾಹಿಕಾ ಬಾಂದ್ರಾದ ರೆಸ್ಟೋರೆಂಟ್ ಒಂದರಲ್ಲಿ ಮೆಟ್ಟಿಲು ಇಳಿಯುತ್ತಿದ್ದಾಗ, ಮಾಧ್ಯಮದವರು ಅವರನ್ನು ಕೆಟ್ಟ ಆ್ಯಂಗಲ್‌ನಲ್ಲಿ ಸೆರೆಹಿಡಿದಿದ್ದಾರೆ, ಆ ಆ್ಯಂಗಲ್‌ನಲ್ಲಿ ಯಾವುದೇ ಮಹಿಳೆ ಫೋಟೋ ತೆಗೆಸಿಕೊಳ್ಳಲು ಇಷ್ಟಪಡುವುದಿಲ್ಲ. ಒಂದು ಖಾಸಗಿ ಕ್ಷಣವನ್ನು ಅಸಹ್ಯಕರ ಸಂಚಲನವನ್ನಾಗಿ ಮಾಡಲಾಗಿದೆ.
ಮಾನವೀಯತೆ ಬಗ್ಗೆ ಹಾರ್ದಿಕ್ ಹೇಳಿದ್ದೇನು?
ಇದು ಹೆಡ್‌ಲೈನ್ಸ್ ಅಥವಾ ಯಾರು ಏನು ಕ್ಲಿಕ್ ಮಾಡಿದರು ಎಂಬುದರ ಬಗ್ಗೆ ಅಲ್ಲ, ಇದು ಮೂಲಭೂತ ಗೌರವದ ವಿಷಯ. ಮಹಿಳೆಯರಿಗೆ ಗೌರವ ಸಿಗಬೇಕು. ಎಲ್ಲರಿಗೂ ತಮ್ಮ ಮಿತಿಯಲ್ಲಿರಲು ಹಕ್ಕಿದೆ. ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡುವ ಮಾಧ್ಯಮದ ಸಹೋದರರೇ, ನಾನು ನಿಮ್ಮ ಶ್ರಮವನ್ನು ಗೌರವಿಸುತ್ತೇನೆ ಮತ್ತು ಮುಂದೆಯೂ ಸಹಕರಿಸುತ್ತೇನೆ. ಆದರೆ, ದಯವಿಟ್ಟು ಸ್ವಲ್ಪ ಹೆಚ್ಚು ಜಾಗರೂಕರಾಗಿರಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ಪ್ರತಿಯೊಂದು ಆ್ಯಂಗಲ್‌ನಿಂದ ನೋಡುವ ಅಗತ್ಯವಿಲ್ಲ. ಈ ಆಟದಲ್ಲಿ ಸ್ವಲ್ಪ ಮಾನವೀಯತೆ ಇರಲಿ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಅಕ್ಟೋಬರ್‌ನಲ್ಲಿ ಸಂಬಂಧ ಖಚಿತಪಡಿಸಿದ ಹಾರ್ದಿಕ್
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ಮಾಹಿಕಾ ಶರ್ಮಾ ನಡುವಿನ ಅಧಿಕೃತ ಸಂಬಂಧ ಕಳೆದ ಅಕ್ಟೋಬರ್ ತಿಂಗಳಲ್ಲಿ ಕನ್ಫರ್ಮ್ ಆಗಿದೆ. ಹಾರ್ದಿಕ್ ತಮ್ಮ ಹುಟ್ಟುಹಬ್ಬದ ವಿಶೇಷ ಸಂದರ್ಭದಲ್ಲಿ ಜೋಡಿಯ ವಿಡಿಯೋವನ್ನು ಹಂಚಿಕೊಂಡಿದ್ದರು. ಒಂದು ದಿನ ಮುಂಚಿತವಾಗಿ ಅವರು ಜನರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಇದರ ನಂತರ, ಅವರು ನಿರಂತರವಾಗಿ ಮಾಹಿಕಾ ಜೊತೆ ವಿಡಿಯೋಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ಇಬ್ಬರೂ ಪೂಜೆ ಮಾಡುವ ಫೋಟೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮೊದಲ ಪಂದ್ಯ ಗೆಲ್ಲಿಸಿದ ಹಾರ್ದಿಕ್ ಪಾಂಡ್ಯ
ಏಷ್ಯಾಕಪ್ ಟೂರ್ನಿಯ ಬಳಿಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ, ತಾನಾಡಿದ ಮೊದಲ ಕಮ್‌ಬ್ಯಾಕ್ ಪಂದ್ಯದಲ್ಲೇ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್‌ನಲ್ಲಿ ಪಾಂಡ್ಯ ಕೇವಲ 28 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 59 ರನ್ ಸಿಡಿಸಿದ್ದರು. ಇನ್ನು ಬೌಲಿಂಗ್‌ನಲ್ಲಿ ಪಾಂಡ್ಯ ಒಂದು ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಭಾರತ ತಂಡವು ಮೊದಲ ಟಿ20 ಪಂದ್ಯದಲ್ಲಿ 101 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು.


