2026ರ ಐಪಿಎಲ್ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸ ನಾಯಕನ ನೇಮಕವಾಗುವ ಸಾಧ್ಯತೆಯಿದೆ. ಕಳೆದ ಸೀಸನ್‌ನಲ್ಲಿ ತಂಡದ ನೀರಸ ಪ್ರದರ್ಶನದ ಹಿನ್ನೆಲೆಯಲ್ಲಿ, ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ನಾಯಕನಾಗಿ ನೇಮಿಸುವ ಬಗ್ಗೆ ಫ್ರಾಂಚೈಸಿ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.  

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೊಸ ನಾಯಕನ ನೇಮಕ ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಬಾರಿಯ ಐಪಿಎಲ್ ಮಿನಿ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ಪ್ರಮುಖ ಸ್ಟಾರ್ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ಹಂತದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಲೀಗ್ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಮೂಡಿಸಿತ್ತು. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ನಾಯಕನಾಗಿ ಅಕ್ಷರ್ ಪಟೇಲ್ ಮುನ್ನಡೆಸಿದ್ದರು. ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ತಂಡವು ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಟೂರ್ನಿಗೆ ಹೊಸ ನಾಯಕನನ್ನು ನೇಮಿಸುವುದು ಬಹುತೇಕ ಖಚಿತ ಎನಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಹೊಸ ನಾಯಕನ ನೇಮಕ?

ನ್ಯೂಸ್ 24 ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಟೂರ್ನಿಗೆ ಹೊಸ ನಾಯಕನೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಹೀಗಾಗಿ 2026ರ ಐಪಿಎಲ್ ಟೂರ್ನಿಯಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನಾಯಕನಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಪಂದ್ಯಗಳನ್ನಾಡಿ 7 ಗೆಲುವು ಹಾಗೂ ಆರು ಸೋಲು ಕಂಡಿತ್ತು.

ನಾಯಕನಾಗಿ ಅಪಾರ ಅನುಭವ ಹೊಂದಿರುವ ಕೆ ಎಲ್ ರಾಹುಲ್:

ಕನ್ನಡಿಗ ಕೆ ಎಲ್ ರಾಹುಲ್ ಈಗಾಗಲೇ ಐಪಿಎಲ್‌ನಲ್ಲಿ ನಾಯಕನಾಗಿ ಅಪಾರ ಅನುಭವ ಹೊಂದಿದ್ದಾರೆ. ಕೆ ಎಲ್ ರಾಹುಲ್ ಈ ಮೊದಲು ಪಂಜಾಬ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಡೆಲ್ಲಿ ತಂಡದಲ್ಲಿ ಕೆ ಎಲ್ ರಾಹುಲ್ ಜತೆಗೆ ಕರುಣ್ ನಾಯರ್, ಅಭಿಷೇಕ್ ಪೊರೆಲ್, ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ಮಿಚೆಲ್ ಸ್ಟಾರ್ಕ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಈ ಎಲ್ಲಾ ಆಟಗಾರರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.

ಕೆ ಎಲ್ ರಾಹುಲ್ ನಾಯಕತ್ವದ ಕ್ಯಾಪ್ಟನ್ಸಿ ಟ್ರ್ಯಾಕ್ ರೆಕಾರ್ಡ್ ಹೇಗಿದೆ?

ಕೆ ಎಲ್ ರಾಹುಲ್ ಮೊದಲಿಗೆ ಐಪಿಎಲ್‌ನಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿದ್ದು ಪಂಜಾಬ್ ಕಿಂಗ್ಸ್ ತಂಡದ ಮೂಲಕ. ಇದಾದ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಕೆ ಎಲ್ ರಾಹುಲ್ ಇದುವರೆಗೂ 64 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಈ ಪೈಕಿ 32 ಪಂದ್ಯಗಳಲ್ಲಿ ತಂಡ ಗೆದ್ದು ಬೀಗಿದ್ದರೇ, 30 ಪಂದ್ಯಗಳಲ್ಲಿ ಸೋಲು ಕಂಡಿದೆ. ಇನ್ನೆರಡು ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿರಲಿಲ್ಲ.

2026ರ ಐಪಿಎಲ್ ಟೂರ್ನಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೀಗಿದೆ:

ಕೆ ಎಲ್ ರಾಹುಲ್, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಟ್ರಿಸ್ಟಿನ್ ಸ್ಟಬ್ಸ್, ಅಕ್ಷರ್ ಪಟೇಲ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಅಜಯ್ ಮಂಡಲ್, ತ್ರಿಪುರಣ್ ವಿಜಯ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮುಕೇಶ್ ಕುಮಾರ್, ದುಸ್ಮಂತ್ ಚಮೀರಾ, ಕುಲ್ದೀಪ್ ಯಾದವ್, ನಿತೀಶ್ ರಾಣಾ, ಆಕೀಬ್ ಧರ್, ಬೆನ್ ಡಕೆಟ್, ಡೇವಿಡ್ ಮಿಲ್ಲರ್, ಪಥುಮ್ ನಿಸ್ಸಾಂಕ, ಲುಂಗಿ ಎಂಗಿಡಿ, ಸಾಹೀಲ್ ಪಾರಕ್, ಪೃಥ್ವಿ ಶಾ, ಕೈಲ್ ಜೇಮಿಸನ್‌.