ಏಕದಿನ ವಿಶ್ವಕಪ್‌ಗೆ ಭಾರತ ಕೊನೆ ಸುತ್ತಿನ ಅಭ್ಯಾಸ..! ಟೀಂ ಇಂಡಿಯಾಗಿಂದು ಆಸೀಸ್ ಸವಾಲು
ಇಂದಿನಿಂದ ಆಸ್ಟ್ರೇಲಿಯಾ ವಿರುದ್ದ 3 ಪಂದ್ಯಗಳ ಏಕದಿನ ಸರಣಿ
ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿರುವ ಮೊಹಾಲಿ ಕ್ರಿಕೆಟ್ ಮೈದಾನ
ತಂಡಕ್ಕೆ ಕೆ ಎಲ್ ರಾಹುಲ್ ನಾಯಕ, ಶ್ರೇಯಸ್, ಅಶ್ವಿನ್ ಮೇಲೆ ನಿರೀಕ್ಷೆ
ಮೊಹಾಲಿ(ಸೆ.22): ಏಕದಿನ ವಿಶ್ವಕಪ್ ಇನ್ನೇನು ಹತ್ತಿರ ಬಂತು. ಅ.8ರಂದು ಚೆನ್ನೈನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಅದಕ್ಕೂ ಮುನ್ನ ಶುಕ್ರವಾರದಿಂದ ಆಸ್ಟ್ರೇಲಿಯಾ ವಿರುದ್ಧ 6 ದಿನಗಳಲ್ಲಿ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿರುವ ಭಾರತ, ವಿಶ್ವಕಪ್‌ಗೆ ಬೇಕಿರುವ ಕೊನೆ ಹಂತದ ಸಿದ್ಧತೆ ನಡೆಸಲಿದೆ.
ಪ್ರಯೋಗಗಳ ಮೇಲೆ ಪ್ರಯೋಗ ನಡೆಸಿ, ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಪ್ರಯತ್ನ ಮಾಡುತ್ತಿರುವ ಭಾರತ, ಈ ಸರಣಿಯಲ್ಲಿ ಇನ್ನೂ ಕೆಲ ಪ್ರಯೋಗಗಳನ್ನು ನಡೆಸಬೇಕಿದೆ. ಅಕ್ಷರ್ ಪಟೇಲ್ ಗಾಯಗೊಂಡು ವಿಶ್ವಕಪ್‌ನಿಂದ ಹೊರಬೀಳುವ ಆತಂಕ ಎದುರಾಗಿರುವ ಕಾರಣ, ಆರ್.ಅಶ್ವಿನ್ ಹಾಗೂ ವಾಷಿಂಗ್ಟನ್ ಸುಂದರ್‌ರನ್ನು ತಂಡಕ್ಕೆ ಕರೆ ತಂದಿರುವ ಭಾರತ, ಇಬ್ಬರಲ್ಲಿ ಯಾರನ್ನು ಆಡಿಸಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಒಂದು ವೇಳೆ ಅಕ್ಷರ್ ಹೊರಬಿದ್ದರೆ, ಅನುಭವದ ಆಧಾರದಲ್ಲಿ ಅಶ್ವಿನ್‌ಗೆ ಸ್ಥಾನ ಸಿಗುವ ಸಾಧ್ಯತೆ ಹೆಚ್ಚು.
ಏಷ್ಯಾಡ್ ಕ್ರಿಕೆಟ್ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ..!
ಇನ್ನು ಏಷ್ಯಾಕಪ್ ವೇಳೆ ಬೆನ್ನು ನೋವು ಕಾಣಿಸಿಕೊಂಡ ಕಾರಣ ಆಡುವ ಹನ್ನೊಂದರ ಬಳಗದಿಂದ ಹೊರಗಿದ್ದ ಶ್ರೇಯಸ್ ಅಯ್ಯರ್, ಈ ಸರಣಿಯಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಲು ಕಾಯುತ್ತಿದ್ದಾರೆ. ಇನ್ನು ಏಕಾಂಗಿಯಾಗಿ ಪಂದ್ಯ ಮುಗಿಸಬಲ್ಲರು ಎಂಬ ನಂಬಿಕೆ ಇಟ್ಟು ಸೂರ್ಯಕುಮಾರ್‌ರನ್ನು ಆಯ್ಕೆ ಮಾಡಿರುವ ತಂಡದ ಆಡಳಿತ ಅವರಿಗೆ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಳು ಅವಕಾಶ ನೀಡುತ್ತಾ ಎನ್ನುವ ಕುತೂಹಲವೂ ಇದೆ.
ಮೊದಲೆರಡು ಪಂದ್ಯಗಳಿಗೆ ರೋಹಿತ್, ಕೊಹ್ಲಿ, ಹಾರ್ದಿಕ್ ಹಾಗೂ ಕುಲ್ದೀಪ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಕೆ.ಎಲ್.ರಾಹುಲ್ ತಂಡ ಮುನ್ನಡೆಸಲಿದ್ದಾರೆ. ಹಾರ್ದಿಕ್ ಇಲ್ಲದಿರುವ ಕಾರಣ, ಅಶ್ವಿನ್ ಹಾಗೂ ವಾಷಿಂಗ್ಟನ್ ಇಬ್ಬರಿಗೂ ಸ್ಥಾನ ಸಿಗಬಹುದು. ಏಷ್ಯಾಕಪ್ ಹೀರೋ ಸಿರಾಜ್‌ಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವಿಶ್ವಕಪ್ ಟೂರ್ನಿಗೂ ಮುನ್ನ ತನ್ನ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ..!
ಆಸೀಸ್‌ಗೆ ಆಯ್ಕೆ ಗೊಂದಲ: ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿದ್ದಾರೆ. ಕಮಿನ್ಸ್ ಹಾಗೂ ಸ್ಮಿತ್ ಮೂರೂ ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದ್ದು, ಮ್ಯಾಕ್ಸ್‌ವೆಲ್ 50 ಓವರ್ ಫೀಲ್ಡ್ ಮಾಡಲು ಸಂಪೂರ್ಣ ಫಿಟ್ ಇದ್ದಾರಾ ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ. ಟ್ರ್ಯಾವಿಸ್ ಹೆಡ್ ಗಾಯಗೊಂಡು ಹೊರಬಿದ್ದಿರುವ ಕಾರಣ, ಮ್ಯಾಥ್ಯೂ ಶಾರ್ಟ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಮೊದಲ ಪಂದ್ಯಕ್ಕೆ ಮಿಚೆಲ್ ಸ್ಟಾರ್ಕ್ ಅಲಭ್ಯರಾಗಲಿದ್ದು, ಸ್ಪೆನ್ಸರ್ ಜಾನ್ಸನ್‌ಗೆ ಸ್ಥಾನ ಸಿಗಬಹುದು. ಸ್ಮಿತ್ ಹಾಗೂ ಲಬುಶೇನ್ ಮಧ್ಯಮ ಕ್ರಮಾಂಕದಲ್ಲಿ ಎಷ್ಟು ಪರಿಣಾಮಕಾರಿಯಾಗಲಿದ್ದಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗಬಹುದು. ಟೆಸ್ಟ್‌ನಲ್ಲಿ ಆಸೀಸ್‌ಗೆ ನೀರಿಳಿಸಿರುವ ಅಶ್ವಿನ್ ಹಾಗೂ ಜಡೇಜಾ ಜೋಡಿ ಏಕದಿನದಲ್ಲೂ ಅದೇ ಯಶಸ್ಸು ಕಾಣಲಿದೆಯೇ ಎನ್ನುವುದು ಎಲ್ಲರಲ್ಲಿರುವ ಕುತೂಹಲ.
ಒಟ್ಟು ಮುಖಾಮುಖಿ: 146
ಭಾರತ: 54
ಆಸ್ಟ್ರೇಲಿಯಾ: 82
ಫಲಿತಾಂಶವಿಲ್ಲ: 10
ಸಂಭವನೀಯ ಆಟಗಾರರ ಪಟ್ಟಿ
ಭಾರತ: ಇಶಾನ್ ಕಿಶನ್, ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಲ್ ರಾಹುಲ್(ನಾಯಕ), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್/ಶಾರ್ದೂಲ್ ಶಾರ್ದೂಲ್, ಜಸ್ಪ್ರೀತ್ ಬುಮ್ರಾ.
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್, ಅಲೆಕ್ಸ್ ಕೇರ್ರಿ, ಕ್ಯಾಮರೋನ್ ಗ್ರೀನ್, ಮಾರ್ಕಸ್ ಸ್ಟೋಯ್ನಿಸ್, ಪ್ಯಾಟ್ ಕಮಿನ್ಸ್(ನಾಯಕ), ಜಾನ್ಸನ್/ತನ್ವೀರ್, ಆಡಂ ಜಂಪಾ, ಜೋಶ್ ಹೇಜಲ್‌ವುಡ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟೋರ್ಟ್ಸ್ 18, ಜಿಯೋ ಸಿನಿಮಾ
ಪಿಚ್ ರಿಪೋರ್ಟ್: ಮೊಹಾಲಿಯಲ್ಲಿ 4 ವರ್ಷಗಳ ಬಳಿಕ ಏಕದಿನ ಪಂದ್ಯ ನಡೆಯಲಿದೆ. ಇಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಹಲವು ಬಾರಿ ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿದೆ. ಮಳೆ ಮುನ್ಸೂಚನೆ ಇಲ್ಲ.
ಅಗ್ರಸ್ಥಾನಕ್ಕಾಗಿ ಸೆಣಸಾಟ!
ನವದೆಹಲಿ: 3 ಪಂದ್ಯಗಳ ಸರಣಿ ಏಕದಿನ ವಿಶ್ವಕಪ್‌ಗೆ ನಂ.1 ತಂಡವಾಗಿ ಕಾಲಿಡುವವರು ಯಾರು ಎನ್ನುವುದನ್ನು ನಿರ್ಧರಿಸಲಿದೆ. ಭಾರತ ಮೊದಲ ಪಂದ್ಯ ಗೆದ್ದರೆ ವಿಶ್ವ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದು, ಅಗ್ರಸ್ಥಾನ ಉಳಿಸಿಕೊಳ್ಳಲು ಸರಣಿ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, ಆಗ ಭಾರತ 3ನೇ ಸ್ಥಾನಕ್ಕೆ ಕುಸಿಯಲಿದ್ದು, ಆಸೀಸ್ 2ನೇ ಸ್ಥಾನಕ್ಕೇರಲಿದೆ. ಆಗ ಭಾರತ ಉಳಿದೆರಡು ಪಂದ್ಯಗಳನ್ನು ಗೆದ್ದು ನಂ.1 ಸ್ಥಾನಕ್ಕೇರಬಹುದು.
ಸದ್ಯ 115 ರೇಟಿಂಗ್ ಅಂಕ ಹೊಂದಿರುವ ಪಾಕಿಸ್ತಾನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಂಕಗಳನ್ನು ಹೊಂದಿರುವ ಭಾರತ 2ನೇ ಸ್ಥಾನದಲ್ಲಿದ್ದರೆ, 113 ಅಂಕಗಳೊಂದಿಗೆ ಆಸ್ಟ್ರೇಲಿಯಾ 3ನೇ ಸ್ಥಾನದಲ್ಲಿದೆ.