ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತೆರಳಿದೆ.

ನಾರ್ಥಾಂಪ್ಟನ್: ಐಪಿಎಲ್ ಗುಂಗಿನಿಂದ ಹೊರಬಂದಿರುವ ಕರ್ನಾಟಕದ ಬ್ಯಾಟರ್ ಕೆ.ಎಲ್.ರಾಹುಲ್ ಮಹತ್ವದ ಇಂಗ್ಲೆಂಡ್ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ ಆಟಕ್ಕೆ ಒಗ್ಗಿಕೊಂಡಿದ್ದಾರೆ. ಶುಕ್ರವಾರ 2ನೇ ಅನಧಿಕೃತ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ 'ಎ' ತಂಡದ ಪರ ಕಣಕ್ಕಿಳಿದ ರಾಹುಲ್, ಆಕರ್ಷಕ ಶತಕ ಸಿಡಿಸಿದ್ದಾರೆ.

ರೋಹಿತ್‌ ಶರ್ಮಾ ನಿವೃತ್ತಿಯಿಂದಾಗಿ ತೆರವಾಗಿರುವ ಆರಂಭಿಕ ಸ್ಥಾನಕ್ಕೆ ಇಂಗ್ಲೆಂಡ್ ಸರಣಿಯಲ್ಲಿ ರಾಹುಲ್‌ನ್ನು ಆಡಿಸುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಅಭ್ಯಾಸ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಜೊತೆ ರಾಹುಲ್ ‌ ಇನ್ನಿಂಗ್ಸ್ ಆರಂಭಿಸಿದರು. ಜೈಸ್ವಾಲ್ ಮತ್ತೆ ದೊಡ್ಡ ಮೊತ್ತ ಗಳಿಸಲು ವಿಫಲರಾದರೂ, ರಾಹುಲ್ ತಂಡಕ್ಕೆ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 28 ರನ್ ಸೇರಿಸಿತು. ಜೈಸ್ವಾಲ್ 17 ರನ್ ಗಳಿಸಿ ಔಟಾದರು. ನಾಯಕ ಅಭಿಮನ್ಯು ಈಶ್ವರನ್ ಕೂಡಾ (11) ಮಿಂಚಲಿಲ್ಲ. ಆರಂಭಿಕ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್ ನಾಯರ್ ಮತ್ತೆ ದೊಡ್ಡ ಇನ್ನಿಂಗ್ಸ್‌ನ ನಿರೀಕ್ಷೆ ಮೂಡಿಸಿದರಾದರೂ, 71 ಎಸೆತಕ್ಕೆ 40 ರನ್ ಗಳಿಸಿ ಪೆವಿಲಿಯನ್ ಸೇರಿದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ನೆಲೆಯೂರಿ ನಿಂತ ರಾಹುಲ್, ಅಬ್ಬರದ ಶತಕ ಬಾರಿಸಿದರು. ಅವರು 151 ಎಸೆತಗಳಲ್ಲಿ ಶತಕ ಪೂರ್ಣಗೊಳಿ ಸಿದರು. ಬಳಿಕ 116 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

4ನೇ ವಿಕೆಟ್‌ಗೆ ರಾಹುಲ್ ಹಾಗೂ ಧ್ರುವ್ ಜುರೆಲ್ ನಡುವೆ ಶತಕದ(121 ರನ್) ಜೊತೆಯಾಟ ಮೂಡಿಬಂದಿತು. 66 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿರುವ ಧ್ರುವ್ ಜುರೆಲ್ 52 ರನ್ ಗಳಿಸಿ ಔಟಾದರು. ತಂಡ ಮೊದಲ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 319 ರನ್ ಕಲೆಹಾಕಿದೆ.

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್‌ ತಮ್ಮ ಮೊನಚು ದಾಳಿ ಸಂಘಟಿಸಿದ್ದು, ಭಾರತ 'ಎ'ನ ಮೊದಲ ಮೂವರು ಬ್ಯಾಟ್‌ಗಳನ್ನು ಔಟ್ ಮಾಡಿದರು.

ಟೆಸ್ಟ್ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರಯಾಣ

ನವದೆಹಲಿ: ಜೂನ್ 20ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಆಟಗಾರರು ಶುಕ್ರವಾರ ಇಂಗ್ಲೆಂಡ್‌ಗೆ ಪ್ರಯಾಣಿಸಿದರು. ನೂತನ ನಾಯಕ ಶುಭಮನ್ ಗಿಲ್, ಉಪನಾಯಕ ರಿಷಭ್ ಪಂತ್, ಕೋಚ್ ಗೌತಮ್ ಗಂಭೀರ್, ಸ್ಪಿನ್ನರ್ ಕುಲೀಪ್ ಯಾದವ್, ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ, ಯುವ ಬ್ಯಾಟ‌ ಸಾಯಿ ಸುದರ್ಶನ್, ಹಿರಿಯ ಆಲ್ರೌಂಡರ್ ರವೀಂದ್ರ ಜಡೇಜಾ ಸೇರಿ ಹಲವು ಆಟಗಾರರು ಇಂಗ್ಲೆಂಡ್‌ಗೆ ತೆರಳಿದರು. ಕೆ.ಎಲ್.ರಾಹುಲ್, ಜೈಸ್ವಾಲ್ ಸೇರಿದಂತೆ ಹಲವು ಆಟಗಾರರು ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದು, ಅನಧಿಕೃತ ಟೆಸ್ಟ್‌ನಲ್ಲಿ ಆಡುತ್ತಿದ್ದಾರೆ.

ಲೀಡ್ಸ್‌ನಲ್ಲಿ ಜೂನ್‌ 20ಕ್ಕೆ ಮೊದಲ ಟೆಸ್ಟ್ ಆರಂಭಗೊಳ್ಳಲಿದ್ದು, ಬಳಿಕ ಜುಲೈ 2ರಿಂದ ಬರ್ಮಿಂಗ್‌ಹ್ಯಾಮ್, ಜುಲೈ 10ರಿಂದ ಲಾರ್ಡ್ಸ್, ಜುಲೈ 23ರಿಂದ ಮ್ಯಾಂಚೆಸ್ಟರ್, ಜುಲೈ 31ರಿಂದ ಓವಲ್‌ನಲ್ಲಿ ಪಂದ್ಯಗಳು ನಡೆಯಲಿವೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ಉಪನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್‌ದೀಪ್ ಸಿಂಗ್, ಅರ್ಶದೀಪ್ ಸಿಂಗ್, ಕುಲ್ದೀಪ್ ಯಾದವ್.