ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಕೆಎಲ್ ರಾಹುಲ್ ಶತಕ ಸಿಡಿಸಿದ್ದಾರೆ. ಈ ಮೂಲಕ SENA ರಾಷ್ಟ್ರಗಳಲ್ಲಿ ಶತಕ ಗಳಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ಸಾಧನೆಯಾಗಿದೆ.

ವೆಲ್ಲಿಂಗ್ಟನ್(ನ.21): ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್ ಕೆಎಲ್ ರಾಹುಲ್ ಇತಿಹಾಸ ಬರೆದಿದ್ದಾರೆ. ಶನಿವಾರ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿದ ರಾಹುಲ್, SENA ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತದ ಸುನಿಲ್ ಗವಾಸ್ಕರ್, ವಿರೇಂದ್ರ ಸೆಹ್ವಾಗ್ ಅವರಂತಹ ಹಲವು ದಿಗ್ಗಜ ಆರಂಭಿಕ ಬ್ಯಾಟರ್‌ಗಳನ್ನು ಹಿಂದಿಕ್ಕಿ ಕನ್ನಡಿಗ ಆಟಗಾರ ಅಪರೂಪದ ಸಾಧನೆ ಮಾಡಿದ್ದಾರೆ.

ಒಟ್ಟಾರೆ, SENA ರಾಷ್ಟ್ರಗಳಲ್ಲೆಲ್ಲಾ ಆರಂಭಿಕ ಬ್ಯಾಟರ್ ಆಗಿ ಟೆಸ್ಟ್ ಶತಕ ಗಳಿಸಿದ ಏಷ್ಯಾದ ಎರಡನೇ ಬ್ಯಾಟರ್ ಎನ್ನುವ ಕೀರ್ತಿಗೂ ಕೆ ಎಲ್ ರಾಹುಲ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆಟಗಾರ ಪಾಕಿಸ್ತಾನದ ಸಯೀದ್ ಅನ್ವರ್ ಆಗಿದ್ದಾರೆ. ಇನ್ನು ಭಾರತದ ಪರ SENA ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆ ಎಲ್ ರಾಹುಲ್ ಈಗಾಗಲೇ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಸೇರಿದ್ದಾರೆ.

12 ವರ್ಷಗಳ ಬಳಿಕ ನ್ಯೂಜಿಲೆಂಡ್‌ನಲ್ಲಿ ಭಾರತೀಯರ ಟೆಸ್ಟ್ ಶತಕ

ನ್ಯೂಜಿಲೆಂಡ್ ನೆಲದಲ್ಲಿ ಕಳೆದ 12 ವರ್ಷಗಳಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಸಾಧನೆಯನ್ನೂ ರಾಹುಲ್ ಮಾಡಿದ್ದಾರೆ. ಇದಕ್ಕೂ ಮೊದಲು 2014ರಲ್ಲಿ ಅಜಿಂಕ್ಯ ರಹಾನೆ ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿದ್ದರು. ಇದಾದ ಬಳಿಕ ಇಲ್ಲಿಯವರೆಗೂ ಯಾವೊಬ್ಬ ಭಾರತೀಯ ಬ್ಯಾಟರ್ ಸಹ ಟೆಸ್ಟ್‌ನಲ್ಲಿ ಕಿವೀಸ್ ನಾಡಿನಲ್ಲಿ ಮೂರಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಿರಲಿಲ್ಲ. ಈ ಮೊದಲು ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಹಾನೆ 158 ಎಸೆತಗಳಲ್ಲಿ 118 ರನ್ ಗಳಿಸಿದ್ದರು. ಇದೀಗ ಅದೇ ಮೈದಾನದಲ್ಲಿ ರಾಹುಲ್ ಶತಕ ಗಳಿಸುವ ಮೂಲಕ ಭಾರತದ ಪರ ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಶತಕದ ಬರವನ್ನು ನೀಗಿಸಿದ್ದಾರೆ.

2021ರಿಂದ ಟೆಸ್ಟ್ ಓಪನರ್‌ಗಳ ಪೈಕಿ ಅತಿ ಹೆಚ್ಚು ಶತಕ

2021ರಿಂದ ಟೆಸ್ಟ್ ಆರಂಭಿಕ ಆಟಗಾರರ ಪೈಕಿ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಟ್ಟು ಏಳು ಶತಕಗಳನ್ನು ಗಳಿಸಿದ್ದು, ಇಂಗ್ಲೆಂಡ್‌ನ ಬೆನ್ ಡಕೆಟ್, ಭಾರತದ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ದಿಮುತ್ ಕರುಣರತ್ನೆ ಅವರೊಂದಿಗೆ ಈ ಸಾಧನೆಯನ್ನು ಹಂಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಚಕ್ರದಲ್ಲಿ ಆರಂಭಿಕ ಆಟಗಾರರ ಪೈಕಿ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲೂ ರಾಹುಲ್ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. ರಾಹುಲ್, ಟ್ರಾವಿಸ್ ಹೆಡ್ ಮತ್ತು ಟಾಮ್ ಲ್ಯಾಥಮ್ ತಲಾ ನಾಲ್ಕು ಶತಕಗಳನ್ನು ಗಳಿಸಿದ್ದಾರೆ.

ಭಾರತದ ಆರಂಭಿಕ ಆಟಗಾರರ ಶತಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ

ಭಾರತದ ಪರ ಟೆಸ್ಟ್ ಆರಂಭಿಕ ಆಟಗಾರನಾಗಿ ಅತಿ ಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ಕೆಎಲ್ ರಾಹುಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ 33 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವೀರೇಂದ್ರ ಸೆಹ್ವಾಗ್ 22 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮುರಳಿ ವಿಜಯ್ 12 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಗಳಿಸಿದ ಏಕೈಕ ಟೆಸ್ಟ್ ಶತಕ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ದಾಖಲಾಗಿತ್ತು. 2023ರ ಡಿಸೆಂಬರ್‌ನಲ್ಲಿ ಸೆಂಚುರಿಯನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಈ ಶತಕ ಗಳಿಸಿದ್ದರು.

SENA ರಾಷ್ಟ್ರಗಳಲ್ಲಿ ರಾಹುಲ್ ಶತಕಗಳ ಸಾಧನೆ

ಕೆಎಲ್ ರಾಹುಲ್ ಅವರ SENA ರಾಷ್ಟ್ರಗಳಲ್ಲಿನ ಮೊದಲ ಟೆಸ್ಟ್ ಶತಕಗಳ ವಿವರ ಹೀಗಿದೆ:

ಆಸ್ಟ್ರೇಲಿಯಾ: 2015ರಲ್ಲಿ ಮೊದಲ ಟೆಸ್ಟ್ ಶತಕ

ಇಂಗ್ಲೆಂಡ್: 2018ರ ಪ್ರವಾಸದಲ್ಲಿ ಮೊದಲ ಶತಕ

ದಕ್ಷಿಣ ಆಫ್ರಿಕಾ: 2021ರಲ್ಲಿ ಮೊದಲ ಶತಕ

ನ್ಯೂಜಿಲೆಂಡ್: ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಮೊದಲ ಶತಕ

Scroll to load tweet…

SENA ರಾಷ್ಟ್ರಗಳ ಕಠಿಣ ಪರಿಸ್ಥಿತಿಗಳಲ್ಲಿ ಆರಂಭಿಕ ಬ್ಯಾಟರ್ ಆಗಿ ಶತಕ ಗಳಿಸಿರುವ ರಾಹುಲ್, ಈ ಸಾಧನೆಯ ಮೂಲಕ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಭರ್ಜರಿ ಮುನ್ನಡೆ ಪಡೆದ ಭಾರತ:

ನ್ಯೂಜಿಲೆಂಡ್ ತಂಡವನ್ನು 368 ರನ್‌ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಇದೀಗ ಬೃಹತ್ ಮುನ್ನಡೆಯತ್ತ ದಾಪುಗಾಲಿಡುತ್ತಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 85 ರನ್ ಬಾರಿಸಿದರೆ, ರಾಹುಲ್ 136 ರನ್ ಚಚ್ಚಿದರು. ಇನ್ನು ಮತ್ತೋರ್ವ ಕನ್ನಡಿಗ ದೇವದತ್ ಪಡಿಕ್ಕಲ್ 80 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇದೀಗ ನಾಯಕ ಶುಭ್‌ಮನ್ ಗಿಲ್ 92 ರನ್ ಸಿಡಿಸಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ರಿಷಭ್ ಪಂತ್ 25 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಸದ್ಯ 119 ಓವರ್ ಅಂತ್ಯದ ವೇಳೆಗೆ ಭಾರತ 3 ವಿಕೆಟ್ ಕಳೆದುಕೊಂಡು 450 ರನ್ ಬಾರಿಸಿದ್ದು, 82 ರನ್‌ಗಳ ಇನ್ನಿಂಗ್ಸ್‌ ಮುನ್ನಡೆಯಲಿದೆ. ಇನ್ನೂ ಮೂರನೇ ದಿನದಾಟದಲ್ಲಿ 10 ಓವರ್ ಬಾಕಿ ಉಳಿದಿದೆ.