ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅಲ್ಪ ಮೊತ್ತಕ್ಕೆ ಔಟ್ಲಂಚ್ ಬ್ರೇಕ್ ವೇಳೆಗೆ 3 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ ಟೀಂ ಇಂಡಿಯಾವಿರಾಟ್ ಕೊಹ್ಲಿ ಮೇಲಿದೆ ಎಲ್ಲರ ಚಿತ್ತ

ಮೀರ್‌ಪುರ(ಡಿ.23): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ನಾಯಕ ಕೆ ಎಲ್ ರಾಹುಲ್ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ರಾಹುಲ್ ಕೇವಲ 10 ರನ್‌ ಬಾರಿಸಿ ವೈಫಲ್ಯ ಅನುಭವಿಸಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಲಂಚ್‌ ಬ್ರೇಕ್ ವೇಳಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ್ದು, ಇನ್ನೂ 141 ರನ್‌ಗಳ ಹಿನ್ನಡೆಯಲ್ಲಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ 18 ಹಾಗೂ ರಿಷಭ್ ಪಂತ್ 12 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದು, ದೊಡ್ಡ ಇನಿಂಗ್ಸ್ ಆಡಬೇಕಿದೆ. 

ಮೊದಲ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ನಾಯಕ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ಎರಡನೇ ದಿನದಾಟದಲ್ಲಿ ಭಾರತ ತನ್ನ ಖಾತೆಗೆ8 ರನ್ ಸೇರಿಸುವಷ್ಟರಲ್ಲಿ ನಾಯಕನ ವಿಕೆಟ್ ಕಳೆದುಕೊಂಡಿತು. ತೈಜುಲ್ ಇಸ್ಲಾಂ ಬೌಲಿಂಗ್‌ನಲ್ಲಿ ರಾಹುಲ್ ವಿಕೆಟ್‌ ಒಪ್ಪಿಸಿದರು. ಮೊದಲ ಟೆಸ್ಟ್‌ನಲ್ಲಿ 22 ಹಾಗೂ 23 ರನ್ ಬಾರಿಸಿದ್ದ ರಾಹುಲ್, ಇದೀಗ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 10 ರನ್‌ಗೆ ಆಟ ಮುಗಿಸಿದ್ದಾರೆ. ಇನ್ನು ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಚಚ್ಚಿದ್ದ ಶುಭ್‌ಮನ್ ಗಿಲ್ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಗಿಲ್‌ 20 ರನ್ ಬಾರಿಸಿ ತೈಜುಲ್ ಇಸ್ಲಾಂಗೆ ಎರಡನೇ ಬಲಿಯಾದರು. ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಕೇವಲ 24 ರನ್‌ಗಳಿಗೆ ಸೀಮಿತವಾಯಿತು. ಚೆಂಡು ತಿರುವು ಪಡೆಯುತ್ತಿರುವ ಪಿಚ್‌ನಲ್ಲಿ ಲಾಭ ಪಡೆದ ತೈಜುಲ್ ಇಸ್ಲಾಂ, ಚೇತೇಶ್ವರ್ ಪೂಜಾರ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

Scroll to load tweet…

ಕೊಹ್ಲಿ-ಪಂತ್ ಮೇಲೆ ಎಲ್ಲರ ಚಿತ್ತ: ಟೀಂ ಇಂಡಿಯಾ 72 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿದೆ. ಇದೀಗ ದೊಡ್ಡ ಇನಿಂಗ್ಸ್ ಆಡುವ ಜವಾಬ್ದಾರಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್‌ ರಿಷಭ್ ಪಂತ್ ಮೇಲಿದೆ. ಸದ್ಯ ವಿರಾಟ್ ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ನಡೆಸುತ್ತಿದ್ದು, 65 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 18 ರನ್ ಬಾರಿಸಿದ್ದಾರೆ, ಇನ್ನು ರಿಷಭ್ ಪಂತ್ ಚುರುಕಿನ ಬ್ಯಾಟಿಂಗ್ ಮಾಡುವ ಮುನ್ಸೂಚನೆ ನೀಡಿದ್ದು, 14 ಎಸೆತಗಳಲ್ಲಿ 1 ಬೌಂಡರಿ ಸಹಿತ 12 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

Ind vs Ban ಉಮೇಶ್-ಅಶ್ವಿನ್ ದಾಳಿಗೆ ಬಾಂಗ್ಲಾ ತತ್ತರ; 227 ರನ್‌ಗೆ ಆತಿಥೇಯರು ಆಲೌಟ್‌

ಇನ್ನು ಇದಕ್ಕೂ ಮೊದಲು ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದರು. ಮೊಮಿನುಲ್‌ ಹಕ್‌ ಆಕರ್ಷಕ ಅರ್ಧಶತಕದ(89) ಹೊರತಾಗಿಯೂ ಕೇವಲ 227 ರನ್‌ಗಳಿಗೆ ಸರ್ವಪತನ ಕಂಡಿದೆ. ಮಾರಕ ದಾಳಿ ನಡೆಸಿದ ಅನುಭವಿ ವೇಗಿ ಉಮೇಶ್ ಯಾದವ್ 15 ಓವರ್ ಬೌಲಿಂಗ್ ಮಾಡಿ ಕೇವಲ 25 ರನ್ ನೀಡಿ 4 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಜಯದೇವ್ ಉನಾದ್ಕತ್ 2 ವಿಕೆಟ್ ಪಡೆದರು. ಇನ್ನು ತಾರಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 71 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಶಾಕ್ ನೀಡಿದರು.