ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಬಾಂಗ್ಲಾದೇಶ ಆಲೌಟ್ಮೊದಲ ಇನಿಂಗ್ಸ್‌ನಲ್ಲಿ ಕೇವಲ 227 ರನ್‌ಗಳಿಗೆ ಬಾಂಗ್ಲಾದೇಶ ಸರ್ವಪತನತಲಾ 4 ವಿಕೆಟ್ ಕಬಳಿಸಿ ಮಿಂಚಿದ ರವಿಚಂದ್ರನ್ ಅಶ್ವಿನ್, ಉಮೇಶ್ ಯಾದವ್
ಮೀರ್‌ಪುರ(ಡಿ.22): ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಬಾಂಗ್ಲಾದೇಶ ತಂಡವು 227 ರನ್‌ಗಳಿಗೆ ಸರ್ವಪತನ ಕಂಡಿದೆ. ಮೊಮಿನುಲ್ ಹಕ್ ಕೆಚ್ಚೆದೆಯ ಅರ್ಧಶತಕದ ಹೊರತಾಗಿಯೂ, ವೇಗಿ ಉಮೇಶ್ ಯಾದವ್ ಹಾಗೂ ರವಿಚಂದ್ರನ್ ಅಶ್ವಿನ್ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ತಂಡವು ಸಾಧಾರಣ ಮೊತ್ತಕ್ಕೆ ಕುಸಿದಿದೆ.
ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಿಂದಲೇ ಬಾಂಗ್ಲಾದೇಶ ತಂಡವು ಎಚ್ಚರಿಕೆಯ ಬ್ಯಾಟಿಂಗ್ ಮೊರೆ ಹೋಯಿತು. ಆದರೆ 12 ವರ್ಷಗಳ ಬಳಿಕ ತಂಡ ಕೂಡಿಕೊಂಡಿರುವ ಎಡಗೈ ವೇಗಿ ಜಯದೇವ್ ಉನಾದ್ಕತ್ 15ನೇ ಓವರ್‌ನಲ್ಲಿ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಝಾಕಿರ್ ಹಸನ್(15) ಅವರ ವಿಕೆಟ್ ಕಬಳಿಸುವ ಮೂಲಕ ಆರಂಭಿಕ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್, ಬಾಂಗ್ಲಾದೇಶದ ಮತ್ತೋರ್ವ ಆರಂಭಿಕ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂಟೋ(24) ಅವರನ್ನು ಪೆವಿಲಿಯನ್ನಿಗಟ್ಟಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಶಕೀಬ್ ಅಲ್ ಹಸನ್ ಹಾಗೂ ಮೊಮಿನುಲ್ ಹಕ್ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ದಿನದಾಟದ ಲಂಚ್ ಬ್ರೇಕ್ ವೇಳೆಗೆ ಬಾಂಗ್ಲಾದೇಶ ತಂಡವು 2 ವಿಕೆಟ್ ನಷ್ಟಕ್ಕೆ 82 ರನ್ ಬಾರಿಸಿತ್ತು. ಮೂರನೇ ವಿಕೆಟ್‌ಗೆ ಈ ಜೋಡಿ 43 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.
Ind vs Ban ಟೀಂ ಇಂಡಿಯಾ ಪರ ಅಪರೂಪದ ದಾಖಲೆ ಬರೆದ ವೇಗಿ ಜಯದೇವ್ ಉನಾದ್ಕತ್..!
ಇನ್ನು ಲಂಚ್ ಬ್ರೇಕ್ ಬಳಿಕ ಕ್ರೀಸ್‌ಗಿಳಿದ ಈ ಜೋಡಿಯನ್ನು ಮೊದಲ ಓವರ್‌ನಲ್ಲೇ ಬೇರ್ಪಡಿಸುವಲ್ಲಿ ಉಮೇಶ್ ಯಾದವ್ ಯಶಸ್ವಿಯಾದರು. ಶಕೀಬ್ ಅಲ್ ಹಸನ್ 16 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮುಷ್ಫಿಕುರ್ ರಹೀಂಗೆ ವೇಗಿ ಜಯದೇವ್ ಉನಾದ್ಕತ್ ಪೆವಿಲಿಯನ್ ಹಾದಿ ತೋರಿಸಿದರು.
ಉಮೇಶ್-ಅಶ್ವಿನ್ ಮಾರಕ ದಾಳಿ: 130 ರನ್‌ಗಳವರೆಗೆ ಕೇವಲ 3 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ತಂಡವು ಇದಾದ ಬಳಿಕ ರವಿಚಂದ್ರನ್ ಅಶ್ವಿನ್ ಹಾಗೂ ವೇಗಿ ಉಮೇಶ್ ಯಾದವ್ ಮಾರಕ ದಾಳಿಗೆ ತತ್ತರಿಸಿ ಹೋಯಿತು. ವೇಗಿ ಉಮೇಶ್ ಯಾದವ್ ಕೇವಲ 25 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅಶ್ವಿನ್ 71 ರನ್ ನೀಡಿ 4 ವಿಕೆಟ್ ಪಡೆದರು. ಇನ್ನು ವೇಗಿ ಜಯದೇವ್ ಉನಾದ್ಕತ್ 2 ವಿಕೆಟ್ ಕಬಳಿಸಿದರು.
ಇನ್ನು ಮೊದಲ ಇನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎಚ್ಚರಿಕೆಯ ಆರಂಭವನ್ನು ಪಡೆದಿದೆ. ಮೊದಲ ದಿನದಾಟದಂತ್ಯದ ವೇಳೆಗೆ ಬಾಂಗ್ಲಾದೇಶ ತಂಡವು 8 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 19 ರನ್ ಗಳಿಸಿದೆ. ಶುಭ್‌ಮನ್ ಗಿಲ್ 14 ರನ್ ಹಾಗೂ ಕೆ ಎಲ್ ರಾಹುಲ್ 3 ರನ್ ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟೀಂ ಇಂಡಿಯಾ ಇನ್ನೂ 208 ರನ್‌ಗಳ ಹಿನ್ನಡೆಯಲ್ಲಿದೆ.
