ಐಪಿಎಲ್ ಆರಂಭಿಕ ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಕೆ.ಎಲ್.ರಾಹುಲ್ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಆಡುವುದು ಅನುಮಾನ. ಲಖನೌ ತಂಡಕ್ಕೆ ಮೊಹ್ಸಿನ್ ಖಾನ್ ಬದಲಿಗೆ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡಿರುವ ಕಾರಣ ಆರಂಭಿಕ ಮೂರು ಪಂದ್ಯಗಳಿಗೆ ರಿಯಾನ್ ಪರಾಗ್ ನಾಯಕತ್ವ ವಹಿಸಲಿದ್ದಾರೆ.
ನವದೆಹಲಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ತಾರಾ ಆಟಗಾರ ಕೆ.ಎಲ್.ರಾಹುಲ್ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡಬಲ್ ಶಾಕ್ ಎದುರಾಗಿದೆ. ಈಗಾಗಲೇ ಡೆಲ್ಲಿ ಸ್ಟಾರ್ ಬ್ಯಾಟರ್ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ದಿಢೀರ್ ಹಿಂದೆ ಸರಿದಿದ್ದರು. ಇದೀಗ ಆರಂಭಿಕ ಪಂದ್ಯಗಳಲ್ಲಿ ರಾಹುಲ್ ಕೂಡಾ ಅಲಭ್ಯರಾದರೇ ಡೆಲ್ಲಿ ತಂಡದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ.
ಡೆಲ್ಲಿ ತಂಡದ ಆಟಗಾರ ಮಿಚೆಲ್ ಸ್ಟಾರ್ಕ್‌ರ ಪತ್ನಿ ಅಲೀಸಾ ಹೀಲಿ ಯೂಟ್ಯೂಬ್ ಸಂದರ್ಶನವೊಂದರಲ್ಲಿ ರಾಹುಲ್ ಗೈರಿನ ಬಗ್ಗೆ ಮಾತನಾಡಿದ್ದಾರೆ. ‘ಹ್ಯಾರಿ ಬ್ರೂಕ್ ತಂಡದಲ್ಲಿಲ್ಲ. ಹೀಗಾಗಿ ತಂಡ ಯಾರನ್ನು ಬದಲಿ ಆಟಗಾರನಾಗಿ ಸೇರಿಸಲಿದೆ ಎಂಬ ಕುತೂಹಲವಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ರಾಹುಲ್ ಕೂಡಾ ಕೆಲ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿಲ್ಲ’ ಎಂದು ಹೀಲಿ ಹೇಳಿದ್ದಾರೆ. ಸೋಮವಾರ ಡೆಲ್ಲಿ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಆಡುವ ಮೂಲಕ ಟೂರ್ನಿಗೆ ಕಾಲಿಡಲಿದೆ. ಡೆಲ್ಲಿ ತಂಡವನ್ನು ಈ ಬಾರಿ ಅಕ್ಷರ್ ಪಟೇಲ್ ಮುನ್ನಡೆಸಲಿದ್ದಾರೆ.
ಲಖನೌಗೆ ಮೊಹ್ಸಿನ್ ಖಾನ್ ಬದಲು ಶಾರ್ದೂಲ್ ಠಾಕೂರ್ ಸೇರ್ಪಡೆ ಸಾಧ್ಯತೆ
ನವದೆಹಲಿ: ಐಪಿಎಲ್ 18ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಲಖನೌ ಸೂಪರ್ ಜೈಂಟ್ಸ್ ತಂಡದ ಹಲವು ಆಟಗಾರರು ಇನ್ನೂ ಟೂರ್ನಿಗೆ ಸಜ್ಜಾಗಿಲ್ಲ. ಮೊಹ್ಸಿನ್ ಖಾನ್, ಆವೇಶ್ ಖಾನ್, ಮಯಾಂಕ್ ಯಾದವ್ ಹಾಗೂ ಆಕಾಶ್‌ದೀಪ್ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ. ಅದರಲ್ಲೂ ಮೊಹ್ಸಿನ್ ಹಾಗೂ ಆಕಾಶ್‌ದೀಪ್ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಇದನ್ನೂ ಓದಿ: ವೆಂಕಿಯಿಂದ ಕೊಹ್ಲಿವರೆಗೆ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಈ ಆಟಗಾರರ ಮೇಲೆ ಕಣ್ಣಿಡಿ!
ಸದ್ಯದ ವರದಿಗಳ ಪ್ರಕಾರ, ಮೊಹ್ಸಿನ್ ಬದಲು ಲಖನೌ ತಂಡಕ್ಕೆ ತಾರಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಸೇರ್ಪಡೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಶಾರ್ದೂಲ್ ಈಗಾಗಲೇ ಲಖನೌ ತಂಡದ ಜೊತೆಗಿದ್ದು, ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅವರನ್ನು ತಂಡಕ್ಕೆ ಸೇರಿಸಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಕಳೆದ ಹರಾಜಿನಲ್ಲಿ ಶಾರ್ದೂಲ್ ಯಾವುದೇ ತಂಡಕ್ಕೆ ಬಿಕರಿಯಾಗಿರಲಿಲ್ಲ.
ಇದನ್ನೂ ಓದಿ: IPL 2025: ಈ ಬಾರಿ ಪ್ಲೇ ಆಫ್‌ಗೇರೋ 4 ತಂಡಗಳು ಯಾವುವು? ಅಚ್ಚರಿ ಭವಿಷ್ಯ ನುಡಿದ ಆರ್‌ಸಿಬಿ ಮಾಜಿ ಕೋಚ್!
ರಾಜಸ್ಥಾನದ ಆರಂಭಿಕ 3 ಪಂದ್ಯಗಳಿಗೆ ಸಂಜು ಸ್ಯಾಮ್ಸನ್ ಬದಲು ರಿಯಾನ್ ಪರಾಗ್ ನಾಯಕ
ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ನ ಆರಂಭಿಕ 3 ಪಂದ್ಯಗಳಿಗೆ ಕಾಯಂ ನಾಯಕ ಸಂಜು ಸ್ಯಾಮ್ಸನ್ ಬದಲು ಯುವ ಆಟಗಾರ, 23 ವರ್ಷದ ರಿಯಾನ್ ಪರಾಗ್ ನಾಯಕತ್ವ ವಹಿಸಲಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ವೇಳೆ ಸ್ಯಾಮ್ಸನ್ ಕೈ ಬೆರಳಿಗೆ ಗಾಯವಾಗಿದ್ದು, ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಐಪಿಎಲ್‌ನ ಆರಂಭಿಕ 3 ಪಂದ್ಯಗಳಲ್ಲಿ ವಿಕೆಟ್ ಕೀಪಿಂಗ್ ನಡೆಸದಂತೆ ಸ್ಯಾಮ್ಸನ್‌ಗೆ ಬಿಸಿಸಿಐ ಸೂಚಿಸಿದೆ. ಹೀಗಾಗಿ ಅವರು ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಬಹುದು. ಸ್ಯಾಮ್ಸನ್‌ಗೆ ಸದ್ಯ ಫೀಲ್ಡಿಂಗ್ ಕೂಡಾ ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಇಂಪ್ಯಾಕ್ಟ್ ಆಟಗಾರ ರೂಪದಲ್ಲಿ ಬ್ಯಾಟಿಂಗ್‌ಗೆ ಆಗಮಿಸಲಿದ್ದಾರೆ. 4ನೇ ಪಂದ್ಯದ ವೇಳೆ ಸ್ಯಾಮ್ಸನ್ ವಿಕೆಟ್ ಕೀಪಿಂಗ್‌ಗೆ ಫಿಟ್ ಆಗುವ ನಿರೀಕ್ಷೆಯಿದೆ. ರಿಯಾನ್‌ಗೆ ದೇಸಿ ಕ್ರಿಕೆಟ್‌ನಲ್ಲಿ ಅಸ್ಸಾಂ ತಂಡಕ್ಕೆ ನಾಯಕತ್ವ ವಹಿಸಿದ ಅನುಭವವಿದೆ.
