ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಗೆಲುವು ತಂದುಕೊಟ್ಟರು. ಗೆಲುವಿನ ಬಳಿಕ ರಾಹುಲ್ ಅವರು 'ಇದು ನನ್ನ ಗ್ರೌಂಡ್, ನಾನೇ ಕಿಂಗ್' ಎಂದು ಸಂಭ್ರಮಿಸಿದರು, ಇದು ಆರ್‌ಸಿಬಿ ಫ್ರಾಂಚೈಸಿಗೆ ಮುಖ ಕಿವುಚುವಂತೆ ಮಾಡಿತು.
ಬೆಂಗಳೂರು (ಏ.11): ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ಕೆಎಲ್ ರಾಹುಲ್ ಅವರದ್ದೇ ಅಬ್ಬರ. ಆರ್‌ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅನಾಯಾಸವಾಗಿ ಗೆಲುವು ತಂದುಕೊಡುವಲ್ಲಿ ಕೆಎಲ್ ರಾಹುಲ್ ಆಡಿದ ಅಜೇಯ 93 ರನ್‌ಗಳ ಇನ್ನಿಂಗ್ಸ್ ಪ್ರಮುಖವಾಗಿತ್ತು. ಪಂದ್ಯ ಗೆದ್ದ ಬಳಿಕ ಕೆಎಲ್ ರಾಹುಲ್ ಮಾಡಿದ ಸೆಲೆಬ್ರೇಷನ್ ಆರ್‌ಸಿಬಿ ಫ್ರಾಂಚೈಸಿ ಮಾಲೀಕರಿಗೆ ಮುಖ ಕಿವುಚುವಂತೆ ಮಾಡಿದೆ.
ಕೆಎಲ್ ರಾಹುಲ್ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 9 ವರ್ಷಗಳ ಬಳಿಕ ಐಪಿಎಲ್‌ನಲ್ಲಿ ಅರ್ಧಶತಕ ಬಾರಿಸಿದರು. ಗೆಲುವಿನ ಶಾಟ್ ಬಾರಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 6 ವಿಕೆಟ್‌ಗಳ ಜಯ ತಂದುಕೊಟ್ಟ ಕೆಎಲ್ ರಾಹುಲ್, ಆರ್‌ಸಿಬಿ ಅಭಿಮಾನಿಗಳು ಹಾಗೂ ಫ್ರಾಂಚೈಸಿ ಮಾಲೀಕರನ್ನೇ ಗುರಿಯಾಗಿಸಿಕೊಂಡು ಭಾವುಕರಾಗಿ ಸಂಭ್ರಮ ಮಾಡಿದರು. ಗೆಲುವಿನ ರನ್ ಬಾರಿಸಿದ ಬೆನ್ನಲ್ಲಿಯೇ, ಬ್ಯಾಟ್ ಮೂಲಕ ಮೈದಾನದಲ್ಲಿ ವೃತ್ತ ರಚಿಸುವಂತೆ ಮಾಡಿ, 'ಇದು ನನ್ನ ಗ್ರೌಂಡ್, ಇಲ್ಲಿ ನಾನೇ ಕಿಂಗ್' ಎನ್ನುವ ರೀತಿಯಲ್ಲಿ ಸನ್ನೆ ಮಾಡಿ ತೋರಿಸಿದರು.
ಆ ಮೂಲಕ ಐಪಿಎಲ್ ಹರಾಜಿನಲ್ಲಿ ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳದ ಫ್ರಾಂಚೈಸಿ ವಿರುದ್ಧವೂ ಕೆಎಲ್ ರಾಹುಲ್ ಅಸಮಾಧಾನ ತೋರಿಸಿದರು. ಅದರೊಂದಿಗೆ ಸಹ ಆಟಗಾರನಿಗೆ ಗೆಲುವಿನ ಹಸ್ತಲಾಘವ ಮಾಡುವ ಮುನ್ನ, ಎದೆ ಮುಟ್ಟಿಕೊಂಡು, 'ಇಟ್ಸ್ ಮೈ ಗ್ರೌಂಡ್..' ಎಂದು ಹೇಳಿರುವುದೂ ದಾಖಲಾಗಿದೆ.
ಕೆಎಲ್ ರಾಹುಲ್ ಈ ಹಿಂದೆ ಆರ್‌ಸಿಬಿ ಆಟಗಾರನಾಗಿದ್ದವರು. ಈ ಬಾರಿ ಐಪಿಎಲ್ ಹರಾಜಿಗೂ ಮುನ್ನ ಆರ್‌ಸಿಬಿ ತಂಡಕ್ಕೆ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಗತ್ಯವಿತ್ತು. ಇನ್ನೊಂದೆಡೆ ಕೆಎಲ್ ರಾಹುಲ್ ಕೂಡ ಹಲವು ಸಂದರ್ಶನಗಳಲ್ಲಿ ಮತ್ತೊಮ್ಮೆ ಆರ್‌ಸಿಬಿ ಪರವಾಗಿ, ಚಿನ್ನಸ್ವಾಮಿ ಮೈದಾನದಲ್ಲಿ ತನ್ನವರ ಪರವಾಗಿ ಆಡುವುದು ಖುಷಿ ಕೊಡುತ್ತದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
RCBvsDC: ಆರ್‌ಸಿಬಿಗೆ ಸೋಲಿನ ತಾಳಿ ಕಟ್ಟಿದ ಕರಿಮಣಿ ಮಾಲೀಕ ರಾಹುಲ್ಲ!
ಇದೇ ಕಾರಣಕ್ಕೆ ಆರ್‌ಸಿಬಿ ತಂಡ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಬಹುದು ಎಂದೇ ಅಭಿಮಾನಿಗಳು ಅಂದಾಜಿಸಿದ್ದರು. ಕಳೆದ ಐಪಿಎಲ್‌ನಲ್ಲಿ ಲಕ್ನೋ ತಂಡದ ಕ್ಯಾಪ್ಟನ್ ಆಗಿದ್ದ ರಾಹುಲ್‌ರನ್ನು ಅಲ್ಲಿನ ಫ್ರಾಂಚೈಸಿ ಮಾಲೀಯ ಸಂಜೀವ್ ಗೋಯೆಂಕಾ ನಡೆಸಿಕೊಂಡ ರೀತಿಗೂ ಅಭಿಮಾನಿಗಳು ಬೇಸರ ಪಟ್ಟುಕೊಂಡಿದ್ದರು. ಹರಾಜಿನಲ್ಲಿ ಬೇರೆ ಯಾವ ಆಟಗಾರನಿಗಿಂತ ಆರ್‌ಸಿಬಿ ಅಭಿಮಾನಿಗಳಿಗೆ ಕೆಎಲ್ ರಾಹುಲ್ ತಂಡಕ್ಕೆ ಬರಲಿ ಎನ್ನುವ ಆಸೆಯೇ ಹೆಚ್ಚಾಗಿತ್ತು. ಆದರೆ, ಹರಾಜಿನ ಟೇಬಲ್‌ನಲ್ಲಿ ರಾಹುಲ್‌ಗೆ ಅತಿಯಾಗಿ ಬಿಡ್ ಮಾಡಲು ಆರ್‌ಸಿಬಿ ಫ್ರಾಂಚೈಸಿ ನಿರ್ಧಾರ ಮಾಡಿರಲಿಲ್ಲ. ಕೊನೆಗೆ ದೊಡ್ಡ ಮೊತ್ತಕ್ಕೆ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು.
ಚೇಸಿಂಗ್ ವೇಳೆ 17ನೇ ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೆಎಲ್ ರಾಹುಲ್ ಏಕಾಂಗಿಯಾಗಿ ಗೆಲುವಿನ ದಡ ಮುಟ್ಟಿಸಿದರು. ಈ ಹಂತದಲ್ಲಿ ಅವರು ಕೆಲವು ಆಕರ್ಷಕ ಶಾಟ್‌ಗಳನ್ನು ಕೂಡ ಬಾರಿಸಿದರು. ಯಶ್ ದಯಾಳ್ ಎಸೆದ ಓವರ್‌ನ ಮೂರನೇ ಎಸೆತದಲ್ಲಿ ಸ್ಟ್ರೈಕ್ ಪಡೆದುಕೊಂಡ ರಾಹುಲ್, ಸ್ಕ್ವೇರ್ ಲೆಗ್ ಬೌಂಡರಿಯಲ್ಲಿ ಆಕರ್ಷಕ ಸಿಕ್ಸರ್ ಬಾರಿಸಿದರೆ, ಮರು ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಸಿಡಿಸಿದರು. ಇದರಿಂದಾಗಿ ಮುಂದಿನ ಎಸೆತದಲ್ಲಿ ಯಶ್ ದಯಾಳ್ ಶಾರ್ಟ್ ಬಾಲ್‌ಗೆ ಮುಂದಾದರು. ಇದು ರಾಹುಲ್ ತಲೆಯ ಮೇಲಿಂದ ಹಾರಿಹೋಯಿತು. ವಿಕೆಟ್ ಕೀಪರ್‌ಗೂ ಕೂಡ ಇದು ಸಿಗದ ಕಾರಣ, ಅಂಪೈರ್ ಐದು ವೈಡ್ ನೀಡಿದರು. ಆರ್‌ಸಿಬಿ ಇದನ್ನು ರಿವ್ಯೂ ಮಾಡಿದರೂ ಪ್ರಯೋಜನವಾಗಲಿಲ್ಲ. ಸ್ಕೋರ್ ಸಮಬಲವಾಗಿದ್ದ ಹಂತದಲ್ಲಿ ಯಶ್ ದಯಾಳ್ ಐದನೇ ಎಸೆತವನ್ನು ಮತ್ತೊಮ್ಮೆ ಹಾಕಿದಾಗ ಅದು ಫುಲ್‌ಟಾಸ್ ಆಯಿತು. ಡೌನ್ ಲೆಗ್‌ನಲ್ಲಿ ಬಂದ ಚೆಂಡನ್ನು ಲಾಂಗ್ ಲೆಗ್ ಬೌಂಡರಿಯಲ್ಲಿ ಸಿಕ್ಸರ್‌ಗಟ್ಟಿ ರಾಹುಲ್ ಈ ಸೆಲಬ್ರೇಷನ್ ಮಾಡಿದ್ದರು.
ತಂದೆಯಾಗಿ ಬಡ್ತಿ ಪಡೆದ ಕ್ರಿಕೆಟಿಗ ಕೆ ಎಲ್ ರಾಹುಲ್; ಅಥಿಯಾ ಶೆಟ್ಟಿಯಿಂದ ತಾತನಾದ ಸುನೀಲ್ ಶೆಟ್ಟಿ!
