IPL 2022: ಅಮೋಘ ಬ್ಯಾಟಿಂಗ್ ಮೂಲಕ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ರಾಹುಲ್..!
* ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ಕನ್ನಡಿಗ ಕೆ ಎಲ್ ರಾಹುಲ್
* ಸತತ 5 ಐಪಿಎಲ್‌ನಲ್ಲಿ 500+ ರನ್ ಬಾರಿಸಿದ ರಾಹುಲ್
* 108 ಪಂದ್ಯಗಳನ್ನು ಆಡಿರುವ ರಾಹುಲ್ 3,810 ರನ್ ಗಳಿಸಿದ್ದಾರೆ
ನವಿ ಮುಂಬೈ(ಮೇ.19): ಭಾರತದ ತಾರಾ ಕ್ರಿಕೆಟಿಗ, ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ (Lucknow Super Giants Captain KL Rahul) ಸತತ 5ನೇ ಬಾರಿಗೆ ಐಪಿಎಲ್ ಆವೃತ್ತಿಯೊಂದರಲ್ಲಿ 500ಕ್ಕೂ ಹೆಚ್ಚು ರನ್ ಮೊದಲ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಈ ವರ್ಷ ಅವರು 14 ಪಂದ್ಯಗಳಲ್ಲಿ 537 ರನ್ ಕಲೆಹಾಕಿದ್ದು, 2 ಶತಕ ಹಾಗೂ 3 ಅರ್ಧಶತಕ ದಾಖಲಿಸಿದ್ದಾರೆ. ರಾಹುಲ್ 2021ರ ಆವೃತ್ತಿಯಲ್ಲಿ 626, 2020ರಲ್ಲಿ 670, 2019ರಲ್ಲಿ 593 ಮತ್ತು 2018ರ ಐಪಿಎಲ್‌ನಲ್ಲಿ 659 ರನ್‌ಗಳನ್ನು ದಾಖಲಿಸಿದ್ದರು. ಐಪಿಎಲ್‌ನಲ್ಲಿ ಒಟ್ಟು 108 ಪಂದ್ಯಗಳನ್ನು ಆಡಿರುವ ಕರ್ನಾಟಕದ ಆಟಗಾರ, 3810 ರನ್ ಗಳಿಸಿದ್ದಾರೆ. ಒಟ್ಟು 4 ಶತಕ, 30 ಅರ್ಧಶತಕಗಳು ರಾಹುಲ್‌ರ ಬ್ಯಾಟ್‌ನಿಂದ ಸಿಡಿದಿವೆ. ಐಪಿಎಲ್‌ನಲ್ಲಿ ಒಟ್ಟು 324 ಬೌಂಡರಿ, 159 ಸಿಕ್ಸರ್‌ಗಳನ್ನು ರಾಹುಲ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ (Virat Kohli), ಶಿಖರ್ ಧವನ್ ಕೂಡ 5 ಬಾರಿ ಐಪಿಎಲ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆದರೆ ಸತತ 5 ವರ್ಷ ಈ ಸಾಧನೆ ಮಾಡಿರುವುದು ರಾಹುಲ್ ಒಬ್ಬರೇ. ಇನ್ನು ಅತಿಹೆಚ್ಚು ಬಾರಿ 500ಕ್ಕೂ ಹೆಚ್ಚು ರನ್ ಕಲೆಹಾಕಿದ ದಾಖಲೆ ಡೇವಿಡ್ ವಾರ್ನರ್ (David Warner) ಹೆಸರಿನಲ್ಲಿದೆ. ವಾರ್ನರ್ 6 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಡಿ ಕಾಕ್-ರಾಹುಲ್ ದಾಖಲೆ ಜೊತೆಯಾಟ!
ನವಿ ಮುಂಬೈ: ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೊದಲ ವಿಕೆಟ್‌ಗೆ ದ್ವಿಶತಕದ ಜೊತೆಯಾಟವಾಡಿದ ದಾಖಲೆಯನ್ನು ಲಖನೌ ಸೂಪರ್‌ಜೈಂಟ್ಸ್ ತಂಡದ ಕ್ವಿಂಟನ್ ಡಿ ಕಾಕ್ (Quinton de Kock) ಹಾಗೂ ಕೆ.ಎಲ್.ರಾಹುಲ್ ಬರೆದಿದ್ದಾರೆ. ಈ ಜೋಡಿ ಕೆಕೆಆರ್ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ 210 ರನ್ ಜೊತೆಯಾಟವಾಡಿತು. 2019ರಲ್ಲಿ ಸನ್‌ರೈಸರ್ಸ್ ಪರ ಆಡುವಾಗ ಜಾನಿ ಬೇರ್‌ಸ್ಟೋವ್ ಮತ್ತು ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ ಗಳಿಸಿದ್ದ 185 ರನ್ ಈ ಹಿಂದಿನ ದಾಖಲೆ ಎನಿಸಿತ್ತು.
IPL 2022 ಲಖನೌಗೆ 2 ರನ್ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಕೆಕೆಆರ್!
ಇದು ಐಪಿಎಲ್‌ನಲ್ಲಿ ದಾಖಲಾದ 3ನೇ ಗರಿಷ್ಠ ರನ್ ಜೊತೆಯಾಟವೂ ಹೌದು. ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಒಮ್ಮೆ 229 ಮತ್ತೊಮ್ಮೆ 215 ರನ್ ಜೊತೆಯಾಟವಾಡಿದ್ದರು. ಇನ್ನು ಐಪಿಎಲ್‌ನಲ್ಲಿ ಪೂರ್ತಿ 20 ಓವರ್ ಬ್ಯಾಟ್ ಮಾಡಿದ ಮೊದಲ ಜೋಡಿ ಎನ್ನುವ ದಾಖಲೆಯನ್ನೂ ಡಿ ಕಾಕ್ ಹಾಗೂ ರಾಹುಲ್ ಬರೆದಿದ್ದಾರೆ. 140 ರನ್ ಗಳಿಸಿ ಔಟಾಗದೆ ಉಳಿದ ಡಿ ಕಾಕ್, ಐಪಿಎಲ್‌ನಲ್ಲಿ 3ನೇ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಕ್ರಿಸ್ ಗೇಲ್ (175) ಮತ್ತು ಬ್ರೆಂಡನ್ ಮೆಕ್ಕಲಂ(158) ಮೊದಲೆರಡು ಸ್ಥಾನಗಳಲ್ಲಿದ್ದಾರೆ.
ಪ್ಲೇ-ಆಫ್‌ಗೇ ಲಖನೌ ಎಂಟ್ರಿ
15ನೇ ಆವೃತ್ತಿಯ ಐಪಿಎಲ್‌ನ ಪ್ಲೇ-ಆಫ್‌ಗೆ ಲಖನೌ ಸೂಪರ್‌ಜೈಂಟ್ಸ್ ಅಧಿಕೃತವಾಗಿ ಪ್ರವೇಶಿಸಿದೆ. ಬುಧವಾರ ನಡೆದ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 2 ರನ್ ರೋಚಕ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ಕೆಕೆಆರ್ ಟೂರ್ನಿಯಿಂದ ಹೊರಬಿತ್ತು. ಲಖನೌ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರಿದ್ದು, ಚೆನ್ನೈ ಸೂಪರ್ ಕಿಂಗ್ಸ್ - ರಾಜಸ್ಥಾನ ರಾಯಲ್ಸ್ ಪಂದ್ಯದ ಬಳಿಕ ತಂಡ 2ನೇ ಸ್ಥಾನಿಯಾಗೇ ಕ್ವಾಲಿಫೈಯರ್-1ಗೆ ಅರ್ಹತೆ ಪಡೆಯಲಿದೆಯೋ ಅಥವಾ 3ನೇ ಸ್ಥಾನಕ್ಕೆ ಕುಸಿದು ಎಲಿಮಿನೇಟರ್ ಪಂದ್ಯ ಆಡಲಿದೆಯೋ ಎನ್ನುವುದು ನಿರ್ಧಾರವಾಗಲಿದೆ.