ಆಸ್ಟ್ರೇಲಿಯಾ ವಿರುದ್ಧ ರಾಹುಲ್ -ಜಡೇಜಾ ಹೋರಾಟ, ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!
ಒಂದು ಹಂತದಲ್ಲಿ ಭಾರತಕ್ಕೆ 189 ರನ್ ಟಾರ್ಗೆಟ್ ಮೌಂಟ್ ಎವರೆಸ್ಟ್‌ಗಿಂತಲೂ ದೊಡ್ಡದಾಗಿ ಕಂಡಿತ್ತು. ಆದರೆ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಭಾರತ ಪಂದ್ಯ ಗೆದ್ದುಕೊಂಡಿದೆ.
ಮುಂಬೈ(ಮಾ.17): ಬ್ಯಾಟಿಂಗ್ ವಿಫೈಲ್ಯ, ಸತತ ಟೀಕೆ ಸೇರಿದಂತೆ ಹಲವು ಹಿನ್ನಡೆ ಎದುರಿಸಿದ ಕೆಎಲ್ ರಾಹುಲ್, ಇದೀಗ ಕೆಚ್ಚೆದೆಯ ಹೋರಾಟ ನೀಡಿ ಟೀಂ ಇಂಡಿಯಾಗೆ ರೋಚಕ ಗೆಲುವು ತಂದುಕೊಟ್ಟಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಭಾರತ 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿ ಶುಭಾರಂಭ ಮಾಡಿದೆ.
ಆಸ್ಟ್ರೇಲಿಯಾ ತಂಡವನ್ನು 188 ರನ್‌ಗೆ ನಿಯಂತ್ರಿಸಿದ ಭಾರತ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ ರನ್ ಚೇಸ್ ಸುಲಭವಾಗಿರಲಿಲ್ಲ. ಆರಂಭದಲ್ಲೇ ಭಾರತ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇಶಾನ್ ಕಿಶನ್ ಕೇವಲ 3 ರನ್ ಸಿಡಿಸಿ ಔಟಾದರು. ಮಹತ್ವದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರಾಸೆ ಅನುಭವಿಸಿದರು. ಕೊಹ್ಲಿ ಕೇವಲ 4 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ವಿಕೆಟ್ ಪತನಗೊಂಡಿತು. ಸೂರ್ಯಕುಮಾರ್ ಯಾದವ್ ಡಕೌಟ್ ಆದರು.
ಭಾರತ ಆಸ್ಟ್ರೇಲಿಯಾ ಏಕದಿನ ನಡುವೆ ಆಸ್ಕರ್ ಗೆದ್ದ RRR ನಾಟು ನಾಟು ಹಾಡಿಗೆ ಕೊಹ್ಲಿ ಡ್ಯಾನ್ಸ್!
ಹೋರಾಟದ ಸೂಚನೆ ನೀಡಿದ ಶುಭಮನ್ ಗಿಲ್ 20 ರನ್ ಸಿಡಿಸಿ ನಿರ್ಗಮಿಸಿದರು. 39 ರನ್‌ಗಳಿಗೆ ಭಾರತ 4 ಪ್ರಮುಖ ವಿಕೆಟ್ ಕಳೆದುಕೊಂಡಿತು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಾಯಿತು. ರಾಹುಲ್ ಗಾಂಧಿ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಎಚ್ಚರಿಕೆ ಹೆಜ್ಜೆ ಇಟ್ಟರು. ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಇದರ ಪರಿಣಾಮ ಭಾರತ ನಿಧಾನವಾಗಿ ಚೇತರಿಕೆ ಕಾಣಲಾರಂಭಿಸಿತು.
ಹಾರ್ದಿಕ್ ಪಾಂಡ್ಯ ಹಾಗೂ ರಾಹುಲ್ ಜೊತೆಯಾಟಕ್ಕೆ ಮಾರ್ಕಸ್ ಸ್ಟೋಯ್ನಿಸ್ ಬ್ರೇಕ್ ಹಾಕಿದರು. ಹಾರ್ದಿಕ್ ಪಾಂಡ್ಯ 25 ರನ್ ಸಿಡಿಸಿ ಔಟಾದರು. ಬಳಿಕ ರಾಹುಲ್ ಹಾಗೂ ರವೀಂದ್ರ ಜಡೇಜಾ ಜೊತೆಯಾಟ ಆರಂಭಗೊಂಡಿತು. ರಾಹುಲ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿದರು. ರಾಹುಲ್ ಏಕದಿನದಲ್ಲಿ 13ನೇ ಅರ್ಧಶಕ ದಾಖಲಿಸಿದರು. ಇತ್ತ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು.
ವಯಸ್ಸು 41 ಆದರೂ ಧೋನಿ ತೋಳ್ಬಲಕ್ಕೆ ಸಾಟಿಯಿಲ್ಲ..! ನೆಟ್ಸ್‌ನಲ್ಲಿ ಮಹಿ ಭರ್ಜರಿ ಪ್ರಾಕ್ಟೀಸ್
ರಾಹುಲ್ ಹಾಗೂ ಜಡೇಜಾ ಜೊತೆಯಾಟಕ್ಕೆ ಬ್ರೇಕ್ ಹಾಕಲು ಆಸ್ಟ್ರೇಲಿಯಾ ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಸಾಧ್ಯವಾಗಲಿಲ್ಲ. ಕೆಎಲ್ ರಾಹಲು 91 ಎಸೆತದಲ್ಲಿ ಅಜೇಯ 75 ರನ್ ಸಿಡಿಸಿದರೆ, ಜಡೇಜಾ 69 ಎಸೆತದಲ್ಲಿ 45 ಅಜೇಯ ರನ್ ಸಿಡಿಸಿದರು. ಈ ಮೂಲಕ ಭಾರತ 39.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. 5 ವಿಕೆಟ್ ಗೆಲುವು ದಾಖಲಿಸಿ ಸಂಭ್ರಮಿಸಿತು.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಮಾರ್ಚ್ 19 ರಂದು ವಿಶಾಖಪಟ್ಟಣಂದಲ್ಲಿ 2ನೇ ಏಕದಿನ ಪಂದ್ಯ ನಡಯಲಿದೆ. 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಮಾರ್ಚ್ 22 ರಂದು ಚೆನ್ನೈನಲ್ಲಿ ನಡೆಯಲಿದೆ. ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಐಪಿಎಲ್ ಟೂರ್ನಿಗಾಗಿ ಅಭ್ಯಾಸ ಆರಂಭಿಸಲಿದ್ದಾರೆ.