Asianet Suvarna News Asianet Suvarna News

IPL Retention: ಐಪಿಎಲ್‌ಗೆ ಪೊಲ್ಲಾರ್ಡ್‌ ನಿವೃತ್ತಿ, ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ!

ಐಪಿಎಲ್‌ನ ರಿಟೆನ್ಷನ್‌ ಘೋಷಣೆ ಮಾಡುವ ಕೊನೆಯ ದಿನವೇ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಲ್ರೌಂಡರ್‌ ಕೈರಾನ್‌ ಪೊಲ್ಲಾರ್ಡ್‌, ಐಪಿಎಲ್‌ ಜೀವನಕ್ಕೆ ವಿದಾಯ ಪ್ರಕಟಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಅವರು ಮುಂದುವರಿಯಲಿದ್ದಾರೆ ಎಂದು ತಂಡ ಪ್ರಕಟಿಸಿದೆ.
 

Kieron Pollard retires From IPL stays with Mumbai Indians as batting coach san
Author
First Published Nov 15, 2022, 3:15 PM IST

ಮುಂಬೈ (ನ.15): ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಯಶಸ್ಸಿನಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದ ವೆಸ್ಟ್‌ ಇಂಡಿಸ್‌ನ ಸ್ಟಾರ್‌ ಆಲ್ರೌಂಡರ್‌ ಕೈರಾನ್‌ ಪೊಲ್ಲಾರ್ಡ್‌ ಐಪಿಎಲ್‌ ಕ್ರಿಕೆಟ್‌ ಜೀವನಕ್ಕೆ ವಿದಾಯ ಪ್ರಕಟಿಸಿದ್ದಾರೆ. ಅದರೊಂದಿಗೆ ಆಟಗಾರನಾಗಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಅವರ ಅವಧಿ ಕೊನೆಗೊಂಡಿದೆ. ಐಪಿಎಲ್‌ ರಿಟೆನ್ಷನ್‌ ಘೋಷಣೆ ಮಾಡುವ ದಿನವೇ ಪೊಲ್ಲಾರ್ಡ್‌ ಈ ನಿರ್ಧಾರ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲಿಯೇ ಮುಂಬೈ ಇಂಡಿಯನ್ಸ್‌ ತಂಡ ಅವರನ್ನು ತಂಡದಿಂದ ಬಿಡುಗಡೆ ಮಾಡಿದರೂ, ಬ್ಯಾಟಿಂಗ್‌ ಕೋಚ್‌ ಆಗಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ವೆಸ್ಟ್‌ ಇಂಡೀಸ್‌ನ ವರ್ಣರಂಜಿತ ಆಲ್ರೌಂಡರ್‌ ಆಟಗಾರ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಜೊತೆ 13 ವರ್ಷ ಕಳೆದಿದ್ದು, ಐದು ಟ್ರೋಫಿ ಗೆಲುವಿನ ಭಾಗವಾಗಿದ್ದಾರೆ. ತಂಡದ ಅತ್ಯಂತ ಸೀನಿಯರ್‌ ಪ್ಲೇಯರ್‌ ಕೂಡ ಆಗಿದ್ದ ಕೈರಾನ್‌ ಪೊಲ್ಲಾರ್ಡ್‌, 2010ರಲ್ಲಿ ಮುಂಬೈ ಫ್ರಾಂಚೈಸಿ ತಂಡವನ್ನು ಸೇರಿಸಿಕೊಂಡಿದ್ದರು. ಆ ವರ್ಷದ ಹರಾಜಿನಲ್ಲಿ ಒಟ್ಟು ನಾಲ್ಕು ತಂಡಗಳು ಒಂದೇ ಅಮೌಂಟ್‌ಗೆ ಇವರನ್ನು ಬಿಡ್‌ ಮಾಡಿದ್ದವು. ಆದರೆ, ಬಹಿರಂಗಪಡಿಸಿದ ಮೊತ್ತಕ್ಕೆ ನಡೆದ ಟೈ-ಬ್ರೇಕರ್‌ನಲ್ಲಿ ಪೊಲ್ಲಾರ್ಡ್‌ ಮುಂಬೈ ತಂಡದ ಭಾಗವಾಗಿದ್ದರು.  

ಐಪಿಎಲ್‌ನಲ್ಲಿ ಆಟಗಾರನಾಗಿ ತಮ್ಮ ಸಮಯ ಮುಗಿದಿದೆ ಎಂದು ಪೊಲ್ಲಾರ್ಡ್‌ ಹೇಳಿದ್ದು, ಮುಂಬೈನೊಂದಿಗಿನ ಅವರ ಸಂಬಂಧ ಇಲ್ಲಿಗೇ ಕೊನೆಗೊಳ್ಳುವುದಿಲ್ಲ ಎಂದಿದ್ದಾರೆ. ತಂಡದ ಬ್ಯಾಟಿಂಗ್ ಕೋಚ್ ಆಗಿ ಕೂಡಿಕೊಂಡಿದ್ದು, ಮುಂಬೈ ಇಂಡಿಯನ್ಸ್‌ ಒಡೆತನದ ಎಂಐ ಎಮಿರೇಟ್ಸ್‌ಗಾಗಿ ಯುಎಇಯಲ್ಲಿ ಐಎಲ್‌ಟಿ 20 ನಲ್ಲಿ ಆಟಗಾರನಾಗಿ ಆಡಲಿದ್ದೇನೆ ಎಂದಿದ್ದಾರೆ.

ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸಿ ಪರವಾಗಿ ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕನಿಷ್ಠ 100 ಪಂದ್ಯಗಳನ್ನು ಒಂದೇ ಫ್ರಾಂಚೈಸಿ ಪರವಾಗಿ ಆಡಿದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ವಿರಾಟ್‌ ಕೊಹ್ಲಿ (2008 ರಿಂದ ಆರ್‌ಸಿಬಿ, ಸುನೀಲ್‌ ನಾರಾಯಣ್‌ (ಕೆಕೆಆರ್‌-2011), ಜಸ್‌ಪ್ರೀತ್‌ ಬುಮ್ರಾ ( 2013 ರಿಂದ ಮುಂಬೈ ಇಂಡಿಯನ್ಸ್‌), ಲಸಿತ್‌ ಮಾಲಿಂಗ (ಮುಂಬೈ ಇಂಡಿಯನ್ಸ್ ಪರವಾಗಿ ಎರಡು ಅವಧಿ) ಕೂಡ ಈ ಪಟ್ಟಿಯಲ್ಲಿದ್ದಾರೆ. ಇದು 2009 ರ ಚಾಂಪಿಯನ್ಸ್ ಲೀಗ್ T20 ಸಮಯದಲ್ಲಿ ಪೊಲಾರ್ಡ್ ಅವರ ಸ್ಫೋಟಕ ಬ್ಯಾಟಿಂಗ್‌, ಅಥ್ಲೆಟಿಕ್ ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಅವರ ಚಾಣಾಕ್ಷತನ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದಿತ್ತು.

IPL 2023: ಆರ್‌ಸಿಬಿ ತಂಡದಲ್ಲಿ ಉಳಿಸಿಕೊಳ್ಳುವ, ಕೈಬಿಡಲಿರುವ ಆಟಗಾರರ ಪಟ್ಟಿ!

2010ರ ಹರಾಜಿನಲ್ಲಿ ಕೈರಾನ್‌ ಪೊಲ್ಲಾರ್ಡ್‌ಗೆ 2 ಕೋಟಿ ಮೂಲ ಬೆಲೆ ಇರಿಸಲಾಗಿತ್ತು. ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೆಕೆಆರ್‌ ತಂಡಗಳು ದಾಖಲೆಗ 7.5 ಕೋಟಿವರೆಗೆ ಬಿಡ್‌ ಮಾಡಿದ್ದವು. ಕೊನೆಗೆ ಸೈಲೆಂಟ್‌ ಟೈ ಬ್ರೇಕರ್‌ನಲ್ಲಿ ಇವರು ಮುಂಬೈ ಇಂಡಿಯನ್ಸ್‌ ಸೇರಿದ್ದರು. ಸೈಲೆಂಟ್‌ ಟೈ ಬ್ರೇಕರ್‌ನಲ್ಲಿ ಫ್ರಾಂಚೈಸಿಯ ಪಾಲಾದ 2ನೇ ಆಟಗಾರ ಪೊಲ್ಲಾರ್ಡ್‌ ಆಗಿದ್ದರು. ಮೊದಲ ಆಟಗಾರ ನ್ಯೂಜಿಲೆಂಡ್‌ ವೇಗಿ ಶೇನ್‌ ಬಾಂಡ್‌. ಫ್ರಾಂಚೈಸಿಗಳಿಗೆ ಬ್ಲ್ಯಾಂಕ್‌ ಚೆಕ್‌ನಲ್ಲಿ ಪೊಲ್ಲಾರ್ಡ್‌ಗೆ ನೀಡುವ ಮೊತ್ತವನ್ನು ನಮೂದಿಸಿ ಹರಾಜುದಾರರಿಗೆ ನೀಡಿದ್ದರು. ಇದರಲ್ಲಿ ಹೆಚ್ಚಿನ ಹಣ ನೀಡಿದ್ದ ಮುಂಬೈ ಇಂಡಿಯನ್ಸ್‌ ಇವರನ್ನು ಖರೀದಿ ಮಾಡಿತ್ತು.

IPL 2023; ನ.15ಕ್ಕೆ 10 ಫ್ರಾಂಚೈಸಿಯಿಂದ ರಿಲೀಸ್, ಉಳಿಸಿಕೊಂಡ ಆಟಗಾರರ ಪಟ್ಟಿ ಬಿಡುಗಡೆ!

ಮುಂಬೈ ಇಂಡಿಯನ್ಸ್‌ ಪಾಲಿನ ಆಪತ್ಭಾಂದವ ಆಟಗಾರನಾಗಿದ್ದ ಕೈರಾನ್‌ ಪೊಲ್ಲಾರ್ಡ್‌, ಐಪಿಎಲ್‌ನಲ್ಲಿ 3 ಸಾವಿರ ರನ್‌ ಹಾಗೂ 50ಕ್ಕೂ ಅಧಿಕ ವಿಕೆಟ್‌ ಉರುಳಿಸಿದ ಇಬ್ಬರು ಆಲ್ರೌಂಡರ್‌ಗಳಲ್ಲಿ ಒಬ್ಬರಾಗಿದ್ದರು. ಶೇನ್‌ ವ್ಯಾಟ್ಸನ್‌ ಮೊದಲ ಆಟಗಾರ. ಪೊಲ್ಲಾರ್ಡ್‌ ಐಪಿಎಲ್‌ನಲ್ಲಿ ಒಟ್ಟು 223 ಸಿಕ್ಸರ್‌ ಸಿಡಿಸಿದ್ದಾರೆ. ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್‌ ಸಿಡಿಸಿದ ಬ್ಯಟ್ಸ್‌ಮನ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ. 14 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ಪೊಲ್ಲಾರ್ಡ್‌, 2013ರ ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ಅನ್ನು ಮಣಿಸಿ ಮೊದಲ ಬಾರಿಗೆ ಐಪಿಎಲ್‌ ಚಾಂಪಿಯನ್‌ ಆದಗಾಲೂ ಪಂದ್ಯಶ್ರೇಷ್ಠ ಎನಿಸಿದ್ದರು.  52 ರನ್‌ಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಮೈದಾನಕ್ಕೆ ಬಂದಿದ್ದ ಪೊಲ್ಲಾರ್ಡ್‌ 32 ಎಸೆತಗಳಲ್ಲಿ 60 ರನ್ ಬಾರಿಸಿದ್ದರು.

Follow Us:
Download App:
  • android
  • ios