ಜಾರ್ಖಂಡ್‌ನ ವಿಧವೆ ಕವಿತಾ ಕುಮಾರಿ ತನ್ನ ಮಕ್ಕಳ ಭವಿಷ್ಯಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ 1,600 ಮೀಟರ್ ಓಟವನ್ನು ಕೇವಲ 6 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ. ಗೃಹರಕ್ಷಕ ದಳದ ನೇಮಕಾತಿಗಾಗಿ ನಡೆದ ಈ ಓಟದ ವಿಡಿಯೋ ವೈರಲ್ ಆಗಿದ್ದು, ಆಕೆಯ ಛಲಕ್ಕೆ ದೇಶವೇ ಸಲಾಂ ಎಂದಿದೆ.

ಬದುಕಿನ ಕಷ್ಟಗಳು ಅದೆಷ್ಟೇ ಕುತ್ತಿಗೆಗೆ ಬಂದರೂ, ಕಣ್ಣೀರು ಒರೆಸಿಕೊಂಡು ಎದ್ದು ನಿಲ್ಲುವ ಶಕ್ತಿ ತಾಯ್ತನಕ್ಕಿದೆ ಎಂಬುದಕ್ಕೆಈ ಘಟನೆ ಸಾಕ್ಷಿ. ಜಾರ್ಖಂಡ್‌ನ ರಾಮಗಢ ಜಿಲ್ಲೆಯ ದುಲ್ಮಿ ಬ್ಲಾಕ್‌ನ ಸೊಸೊ ಗ್ರಾಮದ ವಿಧವೆ ಕವಿತಾ ಕುಮಾರಿ ಇಂದು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ, ಕೈಯಲ್ಲಿ ಕಾಸಿಲ್ಲದೆ, ಧರಿಸಲು ಶೂಗಳೂ ಇಲ್ಲದೆ ಕೇವಲ ಒಂದು ಸೀರೆ ಮತ್ತು ಬರಿಗಾಲಿನಲ್ಲಿ 1,600 ಮೀಟರ್‌ ದೈಹಿಕ ದಕ್ಷತೆ ಪರೀಕ್ಷೆಯನ್ನು ಪೂರ್ಣಗೊಳಿಸಿ ಆಕೆ ಗೆದ್ದು ಬಂದಿದ್ದಾಳೆ. ಇದು ಕೇವಲ ಸರ್ಕಾರಿ ಕೆಲಸಕ್ಕಾಗಿ ನಡೆದ ಓಟವಲ್ಲ. ತನ್ನ ಇಬ್ಬರು ಅನಾಥ ಮಕ್ಕಳು ಹಾಗೂ ವೃದ್ಧ ಅತ್ತೆ-ಮಾವಂದಿರ ಹೊಟ್ಟೆ ತುಂಬಿಸಲು ಒಬ್ಬ ತಾಯಿ ನಡೆಸಿದ ಜೀವನ್ಮರಣದ ಹೋರಾಟ.

ಬಡತನದ ಸುಡುವ ಕೆಂಡದ ಮೇಲೆ ಭರವಸೆಯ ಹೆಜ್ಜೆಗಳು!

ಕವಿತಾ ಕುಮಾರಿಯ ಜೀವನ ಸುಲಭದ್ದಾಗಿರಲಿಲ್ಲ. ಪತಿಯ ಅಗಲಿಕೆಯ ನಂತರ ಇಡೀ ಸಂಸಾರವನ್ನು ಸಾಕುವುದು ಆಕೆಯ ಹೆಗಲ ಮೇಲಿತ್ತು. ದಿನವಿಡೀ ಇಟ್ಟಿಗೆ ಗೂಡಿನಲ್ಲಿ ಮೈಮುರಿದು ದುಡಿದು ಬರುವ ಅಲ್ಪ ಆದಾಯದಲ್ಲೇ ಕುಟುಂಬ ಸಾಗಿಸಬೇಕಿತ್ತು. ಓಟದ ಶೂಗಳು, ಟ್ರ್ಯಾಕ್‌ಸೂಟ್ ಅಥವಾ ಕ್ರೀಡಾ ಉಪಕರಣಗಳನ್ನು ಕೊಳ್ಳುವುದು ಆಕೆಗೆ ಕನಸಿನ ಮಾತು. ಆದರೆ, ಬಡತನ ಆಕೆಯ ಆತ್ಮವಿಶ್ವಾಸವನ್ನು ಕುಗ್ಗಿಸಲಿಲ್ಲ. ಜಾರ್ಖಂಡ್ ಸರ್ಕಾರದ ಗೃಹರಕ್ಷಕ ದಳದ (ಹೋಮ್ ಗಾರ್ಡ್) ನೇಮಕಾತಿ ಪರೀಕ್ಷೆಗೆ ಯಾವುದೇ ತರಬೇತುದಾರರಿಲ್ಲದೆ, ಪ್ರತಿದಿನ ಬೆಳಗಿನ ಜಾವ 4 ಗಂಟೆಗೆ ಎದ್ದು ಸೀರೆಯುಟ್ಟೇ ಓಡಲು ಅಭ್ಯಾಸ ಮಾಡುತ್ತಿದ್ದಳು. ಮೈಸುಡುವ ಬಿಸಿಲು, ಕಾಲು ಸುಡುವ ರಸ್ತೆ, ಆದರೂ ಆಕೆಯ ಕಣ್ಣುಗಳಲ್ಲಿ ಒಂದೇ ಗುರಿಯಿತ್ತು—ತನ್ನ ಮಕ್ಕಳಿಗೆ ಒಳ್ಳೆಯ ಭವಿಷ್ಯ ಕೊಡಬೇಕು.

ನಿಮಿಷಗಳಲ್ಲಿ ಮುಗಿದ 1.6 ಕಿ.ಮೀ. ಓಟ!

ರಾಮಗಢದಲ್ಲಿ ನಡೆದ ಹೋಮ್ ಗಾರ್ಡ್ ನೇಮಕಾತಿ ಅಭಿಯಾನದಲ್ಲಿ ದೈಹಿಕ ಪರೀಕ್ಷೆಗೆ 10 ನಿಮಿಷಗಳ ಕಾಲಾವಕಾಶವಿತ್ತು. ಆದರೆ ಬರಿಗಾಲಿನಲ್ಲಿ, ಸೀರೆಯುಟ್ಟು ಓಡಿದ ಕವಿತಾ, ಕೇವಲ 6 ನಿಮಿಷಗಳಲ್ಲಿ 1,600 ಮೀಟರ್ ಗುರಿಯನ್ನು ತಲುಪಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು. ಓಟದ ಮೈದಾನದಲ್ಲಿದ್ದ ಪ್ರೇಕ್ಷಕರು ಈ ಅದ್ಭುತ ದೃಶ್ಯವನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ ಅದು ಕ್ಷಣಾರ್ಧದಲ್ಲಿ ವೈರಲ್ ಆಯಿತು.

ವೈರಲ್‌ ಆದ ವಿಡಿಯೋ!

ವೈರಲ್ ಆದ ವೀಡಿಯೊವನ್ನು ನೋಡಿ ಲಕ್ಷಾಂತರ ಜನರು ಕಣ್ಣೀರು ಹಾಕಿದ್ದಾರೆ. "ಅವಳು ತನ್ನ ಉಳಿವಿಗಾಗಿ ಓಡುತ್ತಿದ್ದಳು, ತನ್ನ ಮಕ್ಕಳ ಉಳಿವಿಗಾಗಿ ಓಡುತ್ತಿದ್ದಳು," ಎಂದು ನೆಟ್ಟಿಗರು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, "ಅವಳು ತನ್ನ ಮಕ್ಕಳಿಗಾಗಿ ಮಾತ್ರವಲ್ಲ, ತನ್ನ ಅಸ್ತಿತ್ವಕ್ಕಾಗಿ ಓಡಿದ್ದಾಳೆ. ನಿಜವಾದ ಸ್ತ್ರೀಶಕ್ತಿ ಎಂದರೆ ಇದೇ," ಎಂದು ಶ್ಲಾಘಿಸಿದ್ದಾರೆ.

ವ್ಯವಸ್ಥೆಯ ಕನ್ನಡಿ ಮತ್ತು ಕಟು ಸತ್ಯ!

ಈ ವೀಡಿಯೊ ಒಂದು ಕಡೆ ಆಕೆಯ ಸಾಹಸಕ್ಕೆ ಪ್ರಶಂಸೆ ತಂದುಕೊಟ್ಟಿದ್ದರೆ, ಇನ್ನೊಂದೆಡೆ ದೇಶದ ಕಟು ವಾಸ್ತವವನ್ನು ಬಿಚ್ಚಿಟ್ಟಿದೆ. "ಇದು ಹೆಮ್ಮೆ ಪಡುವ ವಿಷಯವಲ್ಲ, ಇದು ವ್ಯವಸ್ಥೆಯ ವೈಫಲ್ಯ. ಮೂಲಭೂತ ಸೌಕರ್ಯಗಳಾದ ಶೂ ಮತ್ತು ಸೂಕ್ತ ಬಟ್ಟೆಯೂ ಇಲ್ಲದೆ ಒಬ್ಬ ಮಹಿಳೆ ಬರಿಗಾಲಿನಲ್ಲಿ ಓಡಬೇಕಾಗಿ ಬಂದದ್ದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ" ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಗಢದಲ್ಲಿ ಒಟ್ಟು 284 ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದ್ದು, ವಿಧವೆಯರಿಗೆ ಮತ್ತು ವಿಚ್ಛೇದಿತ ಮಹಿಳೆಯರಿಗೆ 5% ವಿಶೇಷ ಮೀಸಲಾತಿ ನೀಡಲಾಗಿದೆ. ಈ ಸಣ್ಣ ಆಶಾಕಿರಣವನ್ನೇ ನೆಚ್ಚಿಕೊಂಡು ಕವಿತಾ ಓಡಿದ್ದರು.ಕವಿತಾ ಕುಮಾರಿ ಓಡಿದ ಪ್ರತಿಯೊಂದು ಹೆಜ್ಜೆಯಲ್ಲೂ ಆಕೆಯ ಬಡತನದ ನೋವಿತ್ತು, ಕಣ್ಣೀರಿತ್ತು. ಆದರೆ, ಆ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಂತು ಆಕೆ ತೋರಿದ ಛಲ, ಇಂದು ಭಾರತದ ಕೋಟಿ ಕೋಟಿ ಮಹಿಳೆಯರಿಗೆ ಬದುಕಿನ ಹೊಸ ಭರವಸೆಯನ್ನು ನೀಡಿದೆ. ಬರಿಗಾಲಿನಲ್ಲಿ ಓಡಿ ಗೆದ್ದ ಆ ತಾಯಿಯ ಸಾಹಸಕ್ಕೆ ಇಡೀ ದೇಶವೇ ತಲೆಬಾಗಿದೆ.