ಹನುಮಾನ್ ಅಂಶ್ ಸಿನಿಮಾ ಒಂದಾದ್ಮೇಲೆ ಒಂದು ದಾಖಲೆ ಮಾಡ್ತಾನೇ ಇದೆ. ಈಗ ಜಬ್ ಜಿದ್ ಪೆ ಆ ಗಯೀ ಪಾರವತಿ ಹಾಡು ಮತ್ತೊಂದು ದಾಖಲೆ ಬರೆದಿದೆ. ಯೂಟ್ಯೂಬ್ ನಲ್ಲಿ ಅರಿ ಹೆಚ್ಚು ವೀಕ್ಷಣೆ ಪಡೆದ ಸಾಂಗ್ ಆಗಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಜಬ್ ಜಿದ್ ಪೆ ಆ ಗಯೀ ಪಾರ್ವತಿ’ ಹಾಡು ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದೆ. ‘ಹನುಮಾನ್ ಅಂಶ್’ ಸಿನಿಮಾದ ಈ ಹಾಡು ಯೂಟ್ಯೂಬ್ ಇಂಡಿಯಾ ವೀಕ್ಲಿ ಟಾಪ್ ಸಾಂಗ್ ಚಾರ್ಟ್ (YouTube India Weekly Top Songs Chart)ನಲ್ಲಿ ನಂ.1 ಸ್ಥಾನಕ್ಕೇರಿದ್ದು, ಯೂಟ್ಯೂಬ್ ಗ್ಲೋಬಲ್ ಮ್ಯೂಜಿಕ್ ಚಾರ್ಟ್ (YouTube Global Music Chart)ನಲ್ಲಿ ನಂ.2 ಸ್ಥಾನ ಪಡೆದಿದೆ. ಹಾಡು ಈಗಾಗಲೇ ಯೂಟ್ಯೂಬ್ನಲ್ಲಿ 100 ಮಿಲಿಯನ್ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ಬುಂದೇಲಿ ಜಾನಪದ ಸಂಗೀತದಲ್ಲಿ ಪಾರ್ವತಿ-ಶಿವನ ಕಥೆ
ಜಬ್ ಜಿದ್ ಪೆ ಆ ಗಯೀ ಪಾರ್ವತಿ ಹಾಡು ದೇವಿ ಪಾರ್ವತಿ ಶಿವನನ್ನು ವಿವಾಹವಾಗಲು ತೋರಿದ ದೃಢಸಂಕಲ್ಪದ ಕಥೆಯನ್ನು ಆಧರಿಸಿದೆ. ಹಾಡಿನ ವಿಶೇಷತೆ ಎಂದರೆ ಇದನ್ನು ಆಧುನಿಕ ಪಾಪ್ ಶೈಲಿಗಿಂತ ಬುಂದೇಲಿ ಜಾನಪದ ಸಂಗೀತ, ಅಲ್ಲಿನ ಸಾಂಪ್ರದಾಯಿಕ ಭಾಷೆ ಮತ್ತು ದೇಸಿ ಕಥೆ ಹೇಳುವ ಶೈಲಿಯಲ್ಲಿ ಪ್ರಸ್ತುತಪಡಿಸಲಾಗಿದೆ. ಹಾಡನ್ನು ಸಾಧು ಎಸ್. ತಿವಾರಿ ಬರೆದು, ಹಾಡಿ, ಸಂಗೀತ ಸಂಯೋಜಿಸಿದ್ದಾರೆ. ಹನುಮಾನ್ ಅಂಶ್ ಚಿತ್ರವನ್ನು ಡಾ. ವಿಶಾಲ್ ಚತುರ್ವೇದಿ ನಿರ್ದೇಶಿಸಿದ್ದಾರೆ.
100 ಮಿಲಿಯನ್ಗೂ ಹೆಚ್ಚು ವೀಕ್ಷಣೆ
ಹಾಡು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿತ್ತು. ಹಾಡಿನ ಆಡಿಯೋಗೆ ಮಾತ್ರವಲ್ಲ, ಇದರೊಂದಿಗೆ ಮಾಡಲಾಗುತ್ತಿರುವ ನೃತ್ಯ, ರೀಲ್ಸ್ ಮತ್ತು ಎಐ ವಿಡಿಯೋಗಳಿಗೂ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೆಪ್ಟೆಂಬರ್ 23ರ ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಹಾಡು ಬಿಡುಗಡೆಯಾದ ಸುಮಾರು 15 ದಿನಗಳಲ್ಲೇ 1.3 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ಇನ್ಸ್ಟಾಗ್ರಾಮ್ ನಲ್ಲಿ ಮಕ್ಕಳಿಂದ ಹಿಡಿದು ಪೊಲೀಸ್ ಅಧಿಕಾರಿಗಳವರೆಗೆ ಹಲವರು ಈ ಹಾಡಿನಗೆ ರೀಲ್ಸ್ ಮಾಡ್ತಿದ್ದಾರೆ.
ದೇಶದ ಗಡಿ ದಾಟಿದ ಬುಂದೇಲಿ ಹಾಡು
ಒಂದು ಪ್ರಾದೇಶಿಕ ಜಾನಪದ ಶೈಲಿಯ ಹಾಡು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿರುವುದು ಈ ಹಾಡಿನ ಮತ್ತೊಂದು ವಿಶೇಷತೆ. ಬುಂದೇಲಿ ಭಾಷೆ ಮತ್ತು ಜಾನಪದ ಸಂಗೀತದ ಸೊಗಡನ್ನು ಉಳಿಸಿಕೊಂಡೇ ಹಾಡು ದೇಶದ ವಿವಿಧ ಭಾಗಗಳ ಪ್ರೇಕ್ಷಕರನ್ನು ತಲುಪಿದೆ.
ಪಿಎಂ ಮೋದಿ ಎದುರಲ್ಲೂ ಮೊಳಗಿದ ‘ಪಾರ್ವತಿ’
ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಿಶೇಷ ಭಜನ್ ಕ್ಲಬ್ಬಿಂಗ್ ಕಾರ್ಯಕ್ರಮದಲ್ಲೂ ಹನುಮಾನ್ ಅಂಶ್ ತಂಡ ಭಾಗವಹಿಸಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಗಾಯಕ ಸಾಧು ಎಸ್. ತಿವಾರಿ ‘ಪಾರ್ವತಿ’ ಹಾಡನ್ನು ಲೈವ್ ಆಗಿ ಪ್ರಸ್ತುತಪಡಿಸಿದ್ದರು. ನಿರ್ದೇಶಕ ವಿಶಾಲ್ ಚತುರ್ವೇದಿ ಇದೇ ಕಾರ್ಯಕ್ರಮದಲ್ಲಿ ಹೃದಯ್ ಮೇ ಜಿನ್ಕೆ ಸಿಯಾರಾಮ್ ಹಾಡನ್ನು ಹಾಡಿದ್ದರು. ಹೀಗೆ ಒಂದು ಸ್ಥಳೀಯ ಜಾನಪದ ಶೈಲಿಯ ಕಥೆಯನ್ನು ಆಧರಿಸಿದ ‘ಜಬ್ ಜಿದ್ ಪೆ ಆ ಗಯೀ ಪಾರ್ವತಿ’ ಹಾಡು ಇದೀಗ ದೇಶದ ನಂ.1 ಮತ್ತು ಜಾಗತಿಕವಾಗಿ ನಂ.2 ಸ್ಥಾನಕ್ಕೇರುವ ಮೂಲಕ ಹನುಮಾನ್ ಅಂಶ್ ಚಿತ್ರದ ಸಂಗೀತಕ್ಕೆ ಹೊಸ ಗುರುತನ್ನು ತಂದುಕೊಟ್ಟಿದೆ.


