Asianet Suvarna News Asianet Suvarna News

ರಾಜ್ಯದ ಕ್ರೀಡಾ ಸಾಧಕರಿಗೆ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ

* ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ
*  ಗ್ರಾಮೀಣ ಕ್ರೀಡೋತ್ಸವ ಮತ್ತು ಯೋಗಾಥಾನ್‌ಗೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
* ರಾಜ್ಯದ 15 ಮಂದಿಗೆ ಏಕಲವ್ಯ ಪ್ರಶಸ್ತಿ ವಿತರಣೆ

Karnataka Govt to train 75 sportspersons for Paris Olympics kvn
Author
First Published Aug 30, 2022, 9:57 AM IST

ಬೆಂಗಳೂರು(ಆ.30): ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರಾಮೀಣ ಕ್ರೀಡೋತ್ಸವ ಮತ್ತು ಯೋಗಾಥಾನ್‌ಗೆ ಚಾಲನೆ ನೀಡಿದರು. ಇದೇ ವೇಳೆ 2020-21ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಮತ್ತು 2021-22ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ತಾರಾ ಕ್ರಿಕೆಟಿಗ ಕರುಣ್‌ ನಾಯರ್‌, ಕಬಡ್ಡಿ ಪಟು ಪ್ರಶಾಂತ್‌ ಕುಮಾರ್‌, ಹಾಕಿ ಪ್ರಧಾನ ಸೋಮಣ್ಣ, ಟಿಟಿ ಪಟು ಅನಘ್ರ್ಯ ಮಂಜುನಾಥ್‌, ಬ್ಯಾಡ್ಮಿಂಟನ್‌ ತಾರೆ ಅಶ್ವಿನಿ ಭಟ್‌, ಈಜು ಪಟು ಲಿಖಿತ್‌, ಅಥ್ಲೆಟಿಕ್ಸ್‌ ವಿಭಾಗದಲ್ಲಿ ಜೀವನ್‌ ಕೆ.ಎಸ್‌, ರಾಧಾ ವಿ. ಸೇರಿದಂತೆ 15 ಮಂದಿಗೆ ಏಕಲವ್ಯ ಪ್ರಶಸ್ತಿ ವಿತರಣೆ ಮಾಡಲಾಯಿತು.

ಕಂಬಳ ಓಟಗಾರ ಗೋಪಾಲ ನಾಯ್ಕ್, ಬಾಲ್‌ ಬ್ಯಾಡ್ಮಿಂಟನ್‌ನ ಕಿರಣ್‌ ಕುಮಾರ್‌, ಕುಸ್ತಿಯ ಲಕ್ಷ್ಮೇ ಹಾಗೂ ಸೂರಜ್‌ ಪ್ಯಾರಾ ಈಜು ಪಟು ಶಶಾಂಕ್‌ ಸೇರಿದಂತೆ 14 ಮಂದಿಗೆ ಕ್ರೀಡಾ ರತ್ನ ಪ್ರಶಸ್ತಿ ವಿತರಿಸಲಾಯಿತು. ಅಲ್ಲದೇ, ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್‌ ಟ್ರಸ್ವ್‌ ಉಜಿರೆ, ಬೆಂಗಳೂರು ನಗರ ಜಿಲ್ಲೆಯ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸೇರಿದಂತೆ 10 ಸಂಸ್ಥೆಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿ ಹಾಗೂ ಐವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2ರಷ್ಟುಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ ಎಂದರು. ಪ್ಯಾರಿಸ್‌ ಒಲಿಂಪಿಕ್‌ನಲ್ಲಿ ಭಾಗವಹಿಸಲು ರಾಜ್ಯದ ಆಯ್ದ 75 ಕ್ರೀಡಾಪಟುಗಳಿಗೆ ವಿಶ್ವಮಟ್ಟದ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದಲ್ಲಿಯೂ ಕ್ರೀಡಾ ಸಾಧನೆಗಳಾಗಬೇಕು ಮತ್ತು ಗ್ರಾಮೀಣ ಕ್ರೀಡೆಗಳನ್ನು ಸರ್ಕಾರದ ವತಿಯಿಂದ ವ್ಯವಸ್ಥಿತವಾಗಿ ನಡೆಸಬೇಕು ಎಂಬ ಉದ್ದೇಶದಿಂದ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. 

National Sports Day: ಇಂದು ಏಕಲವ್ಯ ಪ್ರಶಸ್ತಿ ಪ್ರದಾನ

ಕಬಡ್ಡಿ, ಖೋ-ಖೋ, ಕಂಬಳ, ಎತ್ತಿನಗಾಡಿ ಸ್ಪರ್ಧೆ ಹೀಗೆ ಹಲವು ಕ್ರೀಡೆಗಳು ಗ್ರಾಮೀಣ ಪ್ರದೇಶದ ಸೊಗಡನ್ನು ಸೂಸುತ್ತವೆ. ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡೆಗಳು ನಡೆಯುತ್ತವೆ. ಗ್ರಾಮ ಮಟ್ಟದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು. ಕರಾವಳಿಯ ಕಂಬಳ, ಉತ್ತರ ಕರ್ನಾಟಕದ ಚಕ್ಕಡಿ ಹೊಡೆಯುವ ಸ್ಪರ್ಧೆ, ಕುಸ್ತಿ, ಸೈಕಲ್‌, ಮೋಟಾರ್‌ ಸೈಕಲ್‌, ಕಾರ್‌ ರಾರ‍ಯಲಿಗಳು, ವಾಲಿಬಾಲ್‌ ಕ್ರೀಡೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.

15 ಮಂದಿಗೆ ಏಕಲವ್ಯ ಪ್ರಶಸ್ತಿ:

ಕ್ರೀಡಾ ಸಚಿವ ನಾರಾಯಣ ಗೌಡ ಮಾತನಾಡಿ, ಸಹಸ್ರ ಕ್ರೀಡಾ ಪ್ರತಿಭಾ ಪುರಸ್ಕಾರ ಯೋಜನೆಯಡಿ 750 ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷ ರು. ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ ಎಂದು ಹೇಳಿದರು. ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆ ಪುನಾರಂಭ ಮಾಡಲಾಗಿದೆ. ಇದೇ ಮೊದಲ ಬಾರಿಗೆ 30 ಮಂದಿ ಕಡು ಬಡಕಾರ್ಮಿಕರ ಮಕ್ಕಳಿಗೆ ಉಚಿತ ಪೈಲಟ್‌ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅಮೃತ ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳಿಗೆ ತರಬೇತಿ, ಸಿದ್ದಿ ಜನಾಂಗದ ಮಕ್ಕಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಡಾ.ಆರ್‌.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದ ಸಮಿತಿ ನೀಡಿರುವ ಯುವನೀತಿಯನ್ನೂ ಶೀಘ್ರದಲ್ಲಿಯೇ ಜಾರಿಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಒಲಿಂಪಿಕ್‌ ಅಸೋಷಿಯೇಷನ್‌ ಅಧ್ಯಕ್ಷ ಗೋವಿಂದರಾಜ್‌, ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಆಯುಕ್ತ ಗೋಪಾಲಕೃಷ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios