ದುಬೈ(ಡಿ.15): ವೆಸ್ಟ್‌ ಇಂಡೀಸ್ ಹಾಗೂ ನ್ಯೂಜಿಲೆಂಡ್‌ ನಡುವಿನ 2 ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ನೂತನ ಪರಿಷ್ಕೃತ ಟೆಸ್ಟ್‌ ರ‍್ಯಾಂಕಿಂಗ್‌ ಪ್ರಕಟಿಸಿದ್ದು, ವಿಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಸದ್ಯ ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದ ಸ್ಟೀವ್ ಸ್ಮಿತ್ 911 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 886 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಕೊಹ್ಲಿಗಿಂತ ನ್ಯೂಜಿಲೆಂಡ್ ನಾಯಕ ವಿಲಿಯಮ್ಸನ್(877) 9 ರೇಟಿಂಗ್ ಅಂಕ ಹಿಂದಿದ್ದಾರೆ. ಇನ್ನುಳಿದಂತೆ ಚೇತೇಶ್ವರ್ ಪೂಜಾರ 7ನೇ ಸ್ಥಾನದಲ್ಲೇ ಮುಂದುವರೆದಿದ್ದು, ಟೀಂ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆ ಒಂದು ಸ್ಥಾನ ಮೇಲೇರಿ 10ನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಟೆಸ್ಟ್‌ ರ‍್ಯಾಂಕಿಂಗ್: ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡ ವಿಲಿಯಮ್ಸನ್

ಇನ್ನು ಬೌಲಿಂಗ್ ವಿಭಾಗವನ್ನು ಗಮನಿಸುವುದಾದರೆ, ಅಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ 904 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲೇ ಭದ್ರವಾಗಿದ್ದರೆ, ಇಂಗ್ಲೆಂಡ್ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್(845) ಹಾಗೂ ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್(840) ಟಾಪ್‌ 3 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಲಾ ಒಂದೊಂದು ಸ್ಥಾನ ಮೇಲೇರಿ ಕ್ರಮವಾಗಿ 8 ಮತ್ತು 10ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಆಲ್ರೌಂಡರ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳಾಗಿಲ್ಲ. ಬೆನ್‌ ಸ್ಟೋಕ್ಸ್‌, ಜೇಸನ್ ಹೋಲ್ಡರ್, ರವೀಂದ್ರ ಜಡೇಜಾ ಟಾಪ್ 3 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಇನ್ನು ರವಿಚಂದ್ರನ್ ಅಶ್ವಿನ್ 6ನೇ ಸ್ಥಾನದಲ್ಲಿದ್ದು, ಆಲ್ರೌಂಡರ್ ವಿಭಾಗದಲ್ಲಿ ಟಾಪ್ 10 ಪಟ್ಟಿಯಲ್ಲಿ ಈ ಇಬ್ಬರು ಆಟಗಾರರು ಮಾತ್ರ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.