Asianet Suvarna News Asianet Suvarna News

ಇಂದು ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ; ಆಮೇಲೆ ನಡೆದದ್ದು ಇತಿಹಾಸ..! ಇಲ್ಲಿವೆ ಅಂಕಿ-ಅಂಶ

ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿ 12 ವರ್ಷ ಭರ್ತಿ
2011ರ ಜೂನ್ 20ರಂದು ವಿಂಡೀಸ್ ಎದುರು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ
ಆಟಗಾರನಾಗಿ & ನಾಯಕನಾಗಿ ಇತಿಹಾಸ ನಿರ್ಮಿಸಿರುವ ಕಿಂಗ್ ಕೊಹ್ಲಿ

June 20 On This Day Virat Kohli Made His Test Debut All Interesting Stats Cricket Fans need to know kvn
Author
First Published Jun 20, 2023, 5:30 PM IST

ಬೆಂಗಳೂರು(ಜೂ.20): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ರನ್ ಮಷೀನ್ ವಿರಾಟ್ ಕೊಹ್ಲಿ, 2011ರ ಜೂನ್‌ 20ರಂದು ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದೇ ದಿನದಂದು 1996ರಲ್ಲಿ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ ಕೂಡಾ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಜಮೈಕಾದ ಕಿಂಗ್ಸ್‌ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ವಿರಾಟ್ ಕೊಹ್ಲಿ ಭಾರತ ಪರ ಟೆಸ್ಟ್‌ ಕ್ರಿಕೆಟ್‌ಗೆ(Virat Kohli Test Debut) ಪಾದಾರ್ಪಣೆ ಮಾಡಿದ್ದರು. ಬಲಗೈ ಬ್ಯಾಟರ್ ವಿರಾಟ್ ಕೊಹ್ಲಿ, ತಮ್ಮ ಪಾದಾರ್ಪಣೆ ಪಂದ್ಯದಲ್ಲಿ ಕಮಾಲ್ ಮಾಡಲು ಸಾಧ್ಯವಾಗಿರಲಿಲ್ಲ. ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ ಸೇರಿ ವಿರಾಟ್ ಕೊಹ್ಲಿ ಕೇವಲ 19 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. 

ತಾವಾಡಿದ ಮೊದಲ ಟೆಸ್ಟ್ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವಿರಾಟ್ ಕೊಹ್ಲಿ, ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಬಾರಿಸಿ ಫಿಡೆಲ್ ಎಡ್ವರ್ಡ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಇನ್ನು ಎರಡನೇ ವಿರಾಟ್ ಕೊಹ್ಲಿ 54 ಎಸೆತಗಳನ್ನು ಎದುರಿಸುವ ಮೂಲಕ ಕೊಂಚ ನೆಲಕಚ್ಚಿ ಆಡುವ ಪ್ರಯತ್ನ ನಡೆಸಿದರಾದರೂ ಕೇವಲ 15 ರನ್ ಬಾರಿಸಿ ಫಿಡೆಲ್‌ ಎಡ್ವರ್ಡ್‌ಗೆ ಮತ್ತೊಮ್ಮೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.

ವಿರಾಟ್ ಕೊಹ್ಲಿ, ಮೊದಲ ಟೆಸ್ಟ್ ಪಂದ್ಯದಲ್ಲಿ ವಿಫಲರಾದರೂ, ಟೀಂ ಇಂಡಿಯಾ ವಿಂಡೀಸ್ ಎದುರು 63 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ(Test Cricket) ಪಾದಾರ್ಪಣೆ ಮಾಡಿದ ಬಳಿಕ, ದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಡೆಲ್ಲಿ ಮೂಲದ ಬ್ಯಾಟರ್ ಯಶಸ್ವಿಯಾಗಿದ್ದಾರೆ.

ಇಲ್ಲಿಯವರೆಗೆ ವಿರಾಟ್ ಕೊಹ್ಲಿ, ಭಾರತ ಪರ 109 ಟೆಸ್ಟ್ ಪಂದ್ಯಗಳನ್ನಾಡಿದ್ದು, 185 ಇನಿಂಗ್ಸ್‌ಗಳನ್ನಾಡಿ 48.72ರ ಬ್ಯಾಟಿಂಗ್ ಸರಾಸರಿಯಲ್ಲಿ 28 ಶತಕ ಹಾಗೂ 28 ಅರ್ಧಶತಕ ಸಹಿತ 8,479 ರನ್ ಬಾರಿಸಿದ್ದಾರೆ.  2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 254 ರನ್‌ ಸಿಡಿಸಿದ್ದರು. ಇದು ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಬಾರಿಸಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿದೆ. ಹಲವಾರು ಸಂದರ್ಭದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಜತೆ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತಾ ಬರಲಾಗಿದೆ. ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.

ಜೂನ್ 20: ಕೊಹ್ಲಿ, ದಾದಾ, ದ್ರಾವಿಡ್‌ ಟೆಸ್ಟ್‌ ಪಾದಾರ್ಪಣೆ ದಿನ..!

ವಿರಾಟ್ ಕೊಹ್ಲಿ ಕೇವಲ ಆಟಗಾರನಾಗಿ ಮಾತ್ರವಲ್ಲ, ಓರ್ವ ಯಶಸ್ವಿ ಟೆಸ್ಟ್ ನಾಯಕನಾಗಿಯೂ ಸೈ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ, ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಿ ನೆಲದಲ್ಲೂ ಟೆಸ್ಟ್ ದಿಗ್ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಧೋನಿಯಿಂದ ಟೆಸ್ಟ್ ನಾಯಕತ್ವವನ್ನು ಪಡೆದುಕೊಂಡ ವಿರಾಟ್ ಕೊಹ್ಲಿ, 68 ಪಂದ್ಯಗಳಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿ 40 ಪಂದ್ಯಗಳಲ್ಲಿ ಭಾರತಕ್ಕೆ ಗೆಲುವಿನ ಸಿಹಿ ಉಣಬಡಿಸುವಲ್ಲಿ ಯಶಸ್ವಿಯಾಗಿದ್ದರು. ಇದಷ್ಟೇ ಅಲ್ಲದೇ ಭಾರತ ಟೆಸ್ಟ್ ತಂಡವನ್ನು ಮತ್ತೊಮ್ಮೆ ಐಸಿಸಿ ನಂ.1 ಶ್ರೇಯಾಂಕಕ್ಕೆ ಏರಿಸುವಲ್ಲಿಯೂ ಕೊಹ್ಲಿ ಯಶಸ್ವಿಯಾಗಿದ್ದರು. ಇನ್ನು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಟೀಂ ಇಂಡಿಯಾ ಮೊಟ್ಟಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. 2018-19ರ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಾಂಗರೂ ಪಡೆಯನ್ನು ಅವರದ್ದೇ ನೆಲದಲ್ಲಿ ಮಣಿಸುವ ಮೂಲಕ ಈ ಸಾಧನೆ ಮಾಡಿದ ಏಷ್ಯಾದ ಮೊದಲ ನಾಯಕ ಎನ್ನುವ ಹಿರಿಮೆಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದರು.

ಇನ್ನು 2022ರ ಜನವರಿ ತಿಂಗಳಿನಲ್ಲಿ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಸೋಲುತ್ತಿದ್ದಂತೆಯೇ ಅಚ್ಚರಿಯ ರೀತಿಯಲ್ಲಿ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಆದರೆ ಆಟಗಾರನಾಗಿ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

Follow Us:
Download App:
  • android
  • ios