ಆ್ಯಶಸ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಮಾರಕ ವೇಗಿ ಜೋಶ್ ಹೇಜಲ್‌ವುಡ್ ಗಾಯದ ಕಾರಣ ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ನಾಯಕ ಪ್ಯಾಟ್ ಕಮಿನ್ಸ್ ತಂಡಕ್ಕೆ ಮರಳಲಿದ್ದಾರೆ.

ಮೆಲ್ಬೋರ್ನ್: ತವರಿನಲ್ಲಿ ಸತತ ಎರಡು ಟೆಸ್ಟ್ ಪಂದ್ಯ ಗೆದ್ದು ಆ್ಯಶಸ್ ಸರಣಿಯಲ್ಲಿ 2-0 ಮುನ್ನಡೆ ಕಾಯ್ದುಕೊಂಡಿರುವ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಇದೀಗ ಬಿಗ್ ಶಾಕ್ ಎದುರಾಗಿದೆ. ತಂಡದ ಮಾರಕ ವೇಗಿ ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದಾಗಿ ಆ್ಯಶಸ್ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಕಾಂಗರೂ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಆಸ್ಟ್ರೇಲಿಯಾಗೆ ಬಿಗ್ ಶಾಕ್

ಹೌದು, ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಆ್ಯಶಸ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಶೆಫೀಲ್ಡ್ ಶೀಲ್ಡ್ ಪಂದ್ಯದ ವೇಳೆ ಸೀಮರ್‌ಗೆ ಹ್ಯಾಮ್‌ಸ್ಟ್ರಿಂಗ್ ಗಾಯವಾಗಿತ್ತು. ಇದರಿಂದಾಗಿ ಆ್ಯಶಸ್‌ನ ಮೊದಲ ಎರಡು ಟೆಸ್ಟ್‌ಗಳಲ್ಲಿ ಅವರು ಆಡಲು ಸಾಧ್ಯವಾಗಲಿಲ್ಲ. ಅವರು ಎರಡನೇ ಟೆಸ್ಟ್‌ಗೂ ಮುನ್ನ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೇರಬೇಕಿತ್ತು. ಆದರೆ, ದುರದೃಷ್ಟವಶಾತ್ ಹಿಮ್ಮಡಿ ನೋವು ಕಾಣಿಸಿಕೊಂಡಿದ್ದರಿಂದ, ಅವರು ಸರಣಿಯಿಂದ ಹೊರಗುಳಿಯಬೇಕಾಯಿತು.

ಹೇಝಲ್‌ವುಡ್ ಅವರ ಗಾಯದ ಬಗ್ಗೆ ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 2026 ರಲ್ಲಿ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಂಪೂರ್ಣ ಫಿಟ್‌ನೆಸ್ ಸಾಧಿಸುವುದರ ಮೇಲೆ ಅವರ ಗಮನವಿದೆ ಎಂದು ಮೆಕ್‌ಡೊನಾಲ್ಡ್ ಸ್ಪಷ್ಟಪಡಿಸಿದ್ದಾರೆ. ''ದುರದೃಷ್ಟವಶಾತ್, ಜೋಶ್ ಆ್ಯಶಸ್ ಸರಣಿಯ ಭಾಗವಾಗುವುದಿಲ್ಲ. ಇದು ನಿರಾಶಾದಾಯಕ ಸುದ್ದಿ. ಸರಣಿಯಲ್ಲಿ ಅವರು ದೊಡ್ಡ ಪಾತ್ರ ವಹಿಸುತ್ತಾರೆ ಎಂದು ನಾವು ಭಾವಿಸಿದ್ದೆವು. ಆದರೆ, ಇದು ಸಂಪೂರ್ಣವಾಗಿ ವಿಭಿನ್ನವಾದ ಗಾಯವಾಗಿದೆ. ಅವರ ಗಮನ ಈಗ ವಿಶ್ವಕಪ್‌ನತ್ತ ಇದೆ,'' ಎಂದು ಮೆಕ್‌ಡೊನಾಲ್ಡ್ ಹೇಳಿದರು.

Scroll to load tweet…

ಅಡಿಲೇಡ್‌ ಟೆಸ್ಟ್‌ಗೆ ಪ್ಯಾಟ್ ಕಮಿನ್ಸ್ ಕಮ್‌ಬ್ಯಾಕ್

ಇದೇ ವೇಳೆ, ಡಿಸೆಂಬರ್ 17 ರಿಂದ 21 ರವರೆಗೆ ಅಡಿಲೇಡ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ನಾಯಕ ಪ್ಯಾಟ್ ಕಮಿನ್ಸ್ ಹಿಂತಿರುಗಲಿದ್ದಾರೆ. ಪರ್ತ್ ಮತ್ತು ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಎರಡು ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಭರ್ಜರಿ ಜಯ ಸಾಧಿಸಿದೆ. ಸದ್ಯ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆಯಲ್ಲಿದೆ. ಕಮಿನ್ಸ್ ಮತ್ತು ಹೇಝಲ್‌ವುಡ್ ಅನುಪಸ್ಥಿತಿಯಲ್ಲಿ, ಮಿಚೆಲ್ ಸ್ಟಾರ್ಕ್ ಜವಾಬ್ದಾರಿ ಹೊತ್ತುಕೊಂಡು, ಸತತವಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಪ್ರದರ್ಶನ ನೀಡಿದರು.

ಎರಡು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದು, ಬ್ರಿಸ್ಬೇನ್‌ನಲ್ಲಿ 77 ರನ್ ಗಳಿಸಿ ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದರು. ಮೂರನೇ ಟೆಸ್ಟ್‌ನಲ್ಲಿ ಕಮಿನ್ಸ್ ಹಿಂತಿರುಗುವುದರಿಂದ ಸ್ಟೀವನ್ ಸ್ಮಿತ್ ನಾಯಕತ್ವದಿಂದ ಕೆಳಗಿಳಿಯಲಿದ್ದಾರೆ.