Asianet Suvarna News Asianet Suvarna News

IPL 2022 ಟೂರ್ನಿಯಲ್ಲಿ ದಾಖಲೆ ಸರಿಗಟ್ಟಿದ ಜೋಸ್ ಬಟ್ಲರ್, ಆದ್ರೂ ಕೊಹ್ಲಿ ರೆಕಾರ್ಡ್‌ ಸೇಫ್‌..?

* 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಮಣಿಸಿ ಫೈನಲ್‌ಗೇರಿದ ರಾಜಸ್ಥಾನ ರಾಯಲ್ಸ್

* ರಾಜಸ್ಥಾನ ರಾಯಲ್ಸ್ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ ಜೋಸ್ ಬಟ್ಲರ್

* ಶತಕ ಸಿಡಿಸಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಜೋಸ್ ಬಟ್ಲರ್ 

Jos Buttler smashes fourth century of IPL 2022 equals Virat Kohli Record kvn
Author
Bengaluru, First Published May 28, 2022, 1:01 PM IST

ಅಹಮದಾಬಾದ್‌: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಎದುರು ರಾಜಸ್ಥಾನ ರಾಯಲ್ಸ್ ತಂಡವು 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ರಾಜಸ್ಥಾನ ರಾಯಲ್ಸ್ ತಂಡವು, ಇದೀಗ ಎರಡನೇ ಬಾರಿಗೆ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು, ಕಪ್‌ ಗೆಲ್ಲುವ ಕನಸಿಗೆ ಮತ್ತಷ್ಟು ಜೀವ ಬಂದಂತೆ ಆಗಿದೆ.

ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಫೈನಲ್‌ಗೇರುವಲ್ಲಿ ಜೋಸ್ ಬಟ್ಲರ್ (Jos Buttler) ಪಾತ್ರವನ್ನು ಮರೆಯುವಂತಿಲ್ಲ. ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ (RCB) ಎದುರು ಅಜೇಯ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜತೆಗೆ ಕೆಲವು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಜೋಸ್ ಬಟ್ಲರ್ ಈಗಾಗಲೇ 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಖಚಿತ ಪಡಿಸಿಕೊಂಡಿದ್ದಾರೆ. ಆದರೆ ಜೋಸ್‌ ಬಟ್ಲರ್‌ಗೆ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಮುರಿಯಲು ಸಾಧ್ಯವಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.

ಆವೃತ್ತಿಯಲ್ಲಿ 4ನೇ ಶತಕ: ಬಟ್ಲರ್‌ 2ನೇ ಆಟಗಾರ!

ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಜೋಸ್ ಬಟ್ಲರ್ ಕೇವಲ 59 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸಿದರು. ಒಟ್ಟು 60 ಎಸೆತಗಳನ್ನು ಎದುರಿಸಿದ ಬಟ್ಲರ್ ಅಜೇಯ 106 ರನ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಇದರ ಜತೆಗೆ 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಬಟ್ಲರ್‌ 4 ಶತಕ ಬಾರಿಸಿದ್ದು, ಈ ಸಾಧನೆ ಮಾಡಿದ 2ನೇ ಬ್ಯಾಟರ್‌ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ 3 ಸೆಂಚುರಿ ಬಾರಿಸಿದ್ದ ಬಟ್ಲರ್, ಇದೀಗ ಪ್ಲೇ ಆಫ್‌ನ ನಿರ್ಣಾಯಕ ಘಟ್ಟದಲ್ಲಿ ಮತ್ತೊಂದು ಸಮಯೋಚಿತ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ಈ ಮೊದಲು 2016ರಲ್ಲಿ ವಿರಾಟ್‌ ಕೊಹ್ಲಿ 4 ಶತಕ ಬಾರಿಸಿದ್ದರು. ಇನ್ನೊಂದು ಶತಕ ಸಿಡಿಸಿದರೆ ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಧೂಳೀಪಟವಾಗಲಿದೆ.

ಆವೃತ್ತಿಯೊಂದರಲ್ಲಿ 800+ ರನ್‌: ಜೋಸ್‌ ಬಟರ್‌ 3ನೇ ಆಟಗಾರ!

ಇನ್ನು ಇದೇ ವೇಳೆ ಐಪಿಎಲ್‌ ಅವೃತ್ತಿಯೊಂದರಲ್ಲಿ 800ಕ್ಕೂ ಹೆಚ್ಚು ರನ್‌ ಗಳಿಸಿದ 3ನೇ ಆಟಗಾರ ಎನ್ನುವ ದಾಖಲೆಯನ್ನು ಜೋಸ್‌ ಬಟ್ಲರ್‌ ಬರೆದಿದ್ದಾರೆ. 15ನೇ ಆವೃತ್ತಿಯಲ್ಲಿ ಅವರು 824 ರನ್‌ ಗಳಿಸಿದ್ದಾರೆ. 2016ರಲ್ಲಿ ವಿರಾಟ್‌ ಕೊಹ್ಲಿ 973, 2016ರಲ್ಲಿ ಡೇವಿಡ್‌ ವಾರ್ನರ್‌ 841 ರನ್‌ ಕಲೆಹಾಕಿದ್ದರು. ಕೊಹ್ಲಿಯ ದಾಖಲೆ ಮುರಿಯುವುದು ಕಷ್ಟವೆನಿಸಿದರೂ, ಬಟ್ಲರ್‌ ಫೈನಲ್‌ನಲ್ಲಿ 25 ರನ್‌ ಗಳಿಸಿದರೆ ವಾರ್ನರ್‌ ದಾಖಲೆಯನ್ನು ಮುರಿಯಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ದಾಖಲೆ ಮುರಿಯಬೇಕಿದ್ದರೆ ಜೋಸ್ ಬಟ್ಲರ್, ಗುಜರಾತ್ ಟೈಟಾನ್ಸ್ ವಿರುದ್ದದ ಫೈನಲ್‌ ಪಂದ್ಯದಲ್ಲಿ ಬರೋಬ್ಬರಿ 150 ರನ್ ಸಿಡಿಸಬೇಕಿದೆ.

IPL 2022 ಬಟ್ಲರ್ ಸೆಂಚುರಿಯಿಂದ ಆರ್‌ಸಿಬಿ ಹೋರಾಟ ಅಂತ್ಯ, ಫೈನಲ್ ಪ್ರವೇಶಿಸಿದ ರಾಜಸ್ಥಾನ!

ರಾಜಸ್ಥಾನ ರಾಯಲ್ಸ್ ನಂಬಿಕೆ ಉಳಿಸಿಕೊಂಡ ಜೋಸ್ ಬಟ್ಲರ್

ರಾಜಸ್ಥಾನ ರಾಯಲ್ಸ್‌ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಬೆಂಗಳೂರಿನಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನವೇ ನಾಯಕ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಬರೋಬ್ಬರಿ 10 ಕೋಟಿ ರುಪಾಯಿ ನೀಡಿ ಜೋಸ್ ಬಟ್ಲರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಫ್ರಾಂಚೈಸಿ ನಂಬಿಕೆ ಉಳಿಸಿಕೊಳ್ಳುವಂತಹ ಪ್ರದರ್ಶನ ತೋರಿರುವ ಜೋಸ್ ಬಟ್ಲರ್, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಖಚಿತಪಡಿಸಿಕೊಂಡಿದ್ದಾರೆ. ಸದ್ಯ ಬಟ್ಲರ್ 16 ಪಂದ್ಯಗಳಿಂದ 824 ರನ್ ಬಾರಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರನಾಗಿ ಹೊರಹೊಮ್ಮಿದ್ದರೆ, ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ ಎಲ್ ರಾಹುಲ್ 616 ರನ್ ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

Follow Us:
Download App:
  • android
  • ios