* ರಾಜಸ್ಥಾನ ರಾಯಲ್ಸ್‌ ಪರ ಅಬ್ಬರಿಸಿದ ಸಂಜು, ಬಟ್ಲರ್, ಜೈಸ್ವಾಲ್* ಸನ್‌ರೈಸರ್ಸ್‌ಗೆ ಗೆಲ್ಲಲು 204 ರನ್‌ ಕಠಿಣ ಗುರಿ* ಬ್ಯಾಟಿಂಗ್‌ನಲ್ಲಿ ಮಿಂಚಿದ ರಾಯಲ್ಸ್ ಟಾಪ್ 3 ಬ್ಯಾಟರ್

ಹೈದರಬಾದ್‌(ಏ.02): ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳಾದ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸಂಜು ಸ್ಯಾಮ್ಸನ್ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಬಾರಿಸಿದ್ದು, ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ 6 ಓವರ್‌ನಲ್ಲೇ ಈ ಜೋಡಿ 85 ರನ್‌ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿ ಕೊಟ್ಟಿತು. ಇದು ರಾಜಸ್ಥಾನ ರಾಯಲ್ಸ್‌ ಪರ ಪವರ್‌ ಪ್ಲೇನಲ್ಲಿ ದಾಖಲಾದ ಗರಿಷ್ಠ ಆರಂಭಿಕ ಜತೆಯಾಟ ಎನಿಸಿತು. ಕೇವಲ 22 ಎಸೆತಗಳಲ್ಲಿ ಬಟ್ಲರ್-ಜೈಸ್ವಾಲ್ ಜೋಡಿ 50 ರನ್‌ಗಳ ಜತೆಯಾಟವಾಡಿತು. ಜೋಸ್ ಬಟ್ಲರ್ ಕೇವಲ 22 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 54 ರನ್‌ ಬಾರಿಸಿ ಫಜಲ್‌ಹಕ್‌ ಫಾರೂಕಿಗೆ ವಿಕೆಟ್ ಒಪ್ಪಿಸಿದರು. ಜೋಸ್ ಬಟ್ಲರ್, ಐಪಿಎಲ್‌ನಲ್ಲಿ ಮೂರನೇ ಬಾರಿಗೆ ಪವರ್‌ ಪ್ಲೇನೊಳಗೆ ಅರ್ಧಶತಕ ಸಿಡಿಸುವಲ್ಲಿ ಯಶಸ್ವಯಾದರು.

ಇನ್ನು ಜೋಸ್ ಬಟ್ಲರ್‌ಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ನೀಡಿದ ಮತ್ತೋರ್ವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡಾ ಆಕರ್ಷಕ ಅರ್ಧಶತಕ ಸಿಡಿಸಿದರು. ಜೈಸ್ವಾಲ್‌ 37 ಎಸೆತಗಳನ್ನು ಎದುರಿಸಿ 9 ಬೌಂಡರಿ ಸಹಿತ 54 ರನ್ ಬಾರಿಸಿ ಫಜಲ್‌ಹಕ್‌ ಫಾರೂಕಿಗೆ ಎರಡನೇ ಬಲಿಯಾದರು.

IPL 2023: ರಾಯಲ್ಸ್ ಎದುರು ಟಾಸ್ ಗೆದ್ದ ಸನ್‌ರೈಸರ್ಸ್‌ ಬೌಲಿಂಗ್ ಆಯ್ಕೆ

ಇನ್ನು ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್‌(2) ಹಾಗೂ ರಿಯಾನ್‌ ಪರಾಗ್‌(7) ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ಸನ್‌ರೈಸರ್ಸ್‌ ಹೈದರಾಬಾದ್‌ ಬೌಲರ್‌ಗಳು ಅವಕಾಶ ನೀಡಲಿಲ್ಲ. ಉಮ್ರಾನ್ ಮಲಿಕ್ ವೇಗದ ಬೌಲಿಂಗ್‌ ಗ್ರಹಿಸದ ಪಡಿಕ್ಕಲ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರೆ, ರಿಯಾನ್ ಪರಾಗ್, ಟಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು.

ನಾಯಕನಾಟವಾಡಿದ ಸಂಜು ಸ್ಯಾಮ್ಸನ್: ಅದ್ಭುತ ಫಾರ್ಮ್‌ನ ಹೊರತಾಗಿಯೂ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಯಲ್ಲಿ ಭಾರತ ತಂಡದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್‌, ಇದೀಗ ತಾವಾಡಿದ ಮೊದಲ ಐಪಿಎಲ್ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಮತ್ತೊಮ್ಮೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ಗಮನ ಸೆಳೆದರು. ಸಂಜು ಸ್ಯಾಮ್ಸನ್‌ 32 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 55 ರನ್ ಬಾರಿಸಿ ಟಿ ನಟರಾಜನ್‌ಗೆ ವಿಕೆಟ್ ಒಪ್ಪಿಸಿದರು. 

ಇನ್ನು ಕೊನೆಯಲ್ಲಿ ಶಿಮ್ರಾನ್ ಹೆಟ್ಮೇಯರ್ ಅಜೇಯ 22 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.