Asianet Suvarna News Asianet Suvarna News

'ನಾವು ಸೆಮೀಸ್‌ ಸೋತಿದ್ದೇ ಹೀಗಾಗಿ': ಭಾರತ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್..!

2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶರಣಾದ ಇಂಗ್ಲೆಂಡ್. ಈ ಸೋಲಿಗೆ ನಿಜವಾದ ಕಾರಣ ಏನು ಎನ್ನುವುದರ ಬಗ್ಗೆ ತುಟಿಬಿಚ್ಚಿದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್. 

Jos Buttler Admits To Blunder That Cost England T20 World Cup 2024 Semifinal against India kvn
Author
First Published Jun 28, 2024, 1:47 PM IST

ಗಯಾನ: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕ್ರಿಕೆಟ್ ತಂಡದ ಅಭಿಯಾನ ಸೆಮಿಫೈನಲ್‌ನಲ್ಲಿಯೇ ಅಂತ್ಯವಾಗಿದೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು 68 ರನ್ ಅಂತರದ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ 2022ರ ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಲೆಕ್ಕಚುಕ್ತಾ ಮಾಡುವಲ್ಲಿ ಕೂಡಾ ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿದೆ. ಇದೀಗ ತಾವು ಸೋತಿದ್ದು ಹೇಗೆ ಎನ್ನುವುದನ್ನು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಎಳೆ ಎಳೆಯಾಗಿ ವಿವರಿಸಿದ್ದಾರೆ.

ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಟೀಂ ಇಂಡಿಯಾ ಬ್ಯಾಟರ್‌ಗಳು 20 ರಿಂದ 25 ರನ್ ಹೆಚ್ಚಿಗೆ ಬಾರಿಸಿದರು. ಇನ್ನು ಟೀಂ ಇಂಡಿಯಾ ಬೌಲರ್‌ಗಳು, ನಮ್ಮ ತಂಡದ ಬೌಲರ್‌ಗಳಿಗಿಂತ ಅದ್ಭುತ ಪ್ರದರ್ಶನ ತೋರಿದರು. ಹೀಗಾಗಿಯೇ ನಾವು ಪಂದ್ಯ ಕೈಚೆಲ್ಲಬೇಕಾಯಿತು ಎನ್ನುವ ವಿಚಾರವನ್ನು ಬಟ್ಲರ್ ಒಪ್ಪಿಕೊಂಡಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಮುಂದುವರೆದ ವಿರಾಟ್ ಕೊಹ್ಲಿ ಫ್ಲಾಪ್‌ ಶೋ!

"ಭಾರತ ತಂಡವು ನಮ್ಮೆದರು ಅದ್ಭುತ ಪ್ರದರ್ಶನ ತೋರಿದರು. ನಾವು ಅವರಿಗೆ 20-25 ರನ್ ಹೆಚ್ಚಿಗೆ ಬಿಟ್ಟುಕೊಟ್ಟೆವು. ರನ್‌ ಗಳಿಸಲು ಸವಾಲೆನಿಸಿದ್ದ ಈ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳು ಚೆನ್ನಾಗಿ ಆಡಿದರು. ಅವರು ಈ ಗೆಲುವಿಗೆ ಅರ್ಹರು. ಈ ಗೆಲುವಿನ ಶ್ರೇಯ ಭಾರತಕ್ಕೆ ಸಲ್ಲಲೇಬೇಕು. ಯಾಕೆಂದರೆ ಅಷ್ಟು ಚೆನ್ನಾಗಿ ಅವರು ಆಡಿದರು. ಭಾರತ ತಂಡವು ಒಳ್ಳೆಯ ಕ್ರಿಕೆಟ್ ಆಡಿತು. ಅವರು ನಮಗಿಂತ ಚೆನ್ನಾಗಿ ಬೌಲಿಂಗ್ ಮಾಡಿದರು" ಎಂದು ಪಂದ್ಯ ಮುಕ್ತಾಯದ ಬಳಿಕ ಜೋಸ್ ಬಟ್ಲರ್ ಹೇಳಿದರು.

"ನಮ್ಮ ತಂಡದ ಇಬ್ಬರು ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಚೆನ್ನಾಗಿ ಬೌಲಿಂಗ್ ಮಾಡಿದರು. ಸ್ಪಿನ್‌ಗೆ ನೆರವು ನೀಡುತ್ತಿದ್ದ ಪಿಚ್‌ನಲ್ಲಿ ನಾವು ಮೋಯಿನ್ ಅಲಿಯನ್ನು ಬಳಸಿಕೊಳ್ಳಬೇಕಿತ್ತು" ಎಂದು ಬಟ್ಲರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಭಾರತಕ್ಕಾಗಿಯೇ ಟಿ20 ವಿಶ್ವಕಪ್‌ ಸೆಟ್‌ ಮಾಡಿದ್ದಾರೆ: ಐಸಿಸಿ ವಿರುದ್ಧ ವಾನ್‌ ಆಕ್ರೋಶ!

ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಆರಂಭಿಕ ಆಘಾತದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು.

ಇನ್ನು ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಕೇವಲ 103 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ಸ್‌ ಬಾರಿಸಿದ 25 ರನ್‌ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿತು.

ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜೂನ್ 29ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ತಂಡವು ಟೂರ್ನಿಯಲ್ಲಿ ಭಾರತದಂತೆ ಅಜೇಯವಾಗಿಯೇ ಫೈನಲ್‌ಗೆ ಪ್ರವೇಶಿಸಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಏಯ್ಡನ್ ಮಾರ್ಕ್‌ರಮ್ ನೇತೃತ್ವದ ಹರಿಣಗಳ ಪಡೆ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕುವ ಕನಸು ಕಾಣುತ್ತಿದೆ.

Latest Videos
Follow Us:
Download App:
  • android
  • ios